ಮೋದಿಯಂತೆ ನಮಗೂ ಸಿಗಲಿದೆ ಶ್ರೀಕೃಷ್ಣನ ದ್ವಾರಕಾ ನಗರಿ ದರ್ಶನ ಪಡೆಯುವ ಯೋಗ

Krishnaveni K

ಮಂಗಳವಾರ, 27 ಫೆಬ್ರವರಿ 2024 (09:57 IST)
Photo Courtesy: Twitter
ನವದೆಹಲಿ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನೀರೊಳಗೆ ಹೋಗಿ ಭಗವಾನ್ ಶ್ರೀಕೃಷ್ಣನ ದ್ವಾರಕಾ ನಗರಿಯನ್ನು ನೋಡಿ ಬಂದಿದ್ದು ಎಲ್ಲರ ಗಮನ ಸೆಳೆದಿತ್ತು. ಅದಾದ ಬಳಿಕ ನಮಗೂ ದ್ವಾರಕೆಯ ದರ್ಶನ ಮಾಡಬೇಕು ಎಂದು ಹಲವರು ಅಂದುಕೊಂಡಿರಬಹುದು.

ಆದರೆ ಈಗ ಪ್ರಧಾನಿ ಮೋದಿ ಹೋಗಿದ್ದಂತೆ ಎಲ್ಲರಿಗೂ ದ್ವಾರಕೆಯ ದರ್ಶನ ಮಾಡಲು ಅವಕಾಶವಿಲ್ಲ. ಆದರೆ ನಿರಾಶರಾಗಬೇಕಿಲ್ಲ. ಸದ್ಯದಲ್ಲೇ ದ್ವಾರಕೆ ಸಾರ್ವಜನಿಕರಿಗೂ ಮುಕ್ತವಾಗಲಿದೆ. ನೀರೊಳಗೆ ಹೋಗಿ ದ್ವಾರಕೆಯ ದರ್ಶನ ಮಾಡಿಕೊಂಡು ಬರಲು ನಿಮಗೂ ಅವಕಾಶ ಸಿಗಲಿದೆ. ಇದಕ್ಕೆ ದೀಪಾವಳಿಯವರೆಗೆ ಕಾಯಬೇಕಾಗುತ್ತದೆ.

ಮುಂದಿನ ದೀಪಾವಳಿಯ ನಂತರ ದೇಶದ ಮೊದಲ ಸಬ್ ಮೆರಿನ್ ಪ್ರವಾಸೋದ್ಯಮ ಜಾರಿಗೆ ತರಲು ಗುಜರಾತ್ ಸರ್ಕಾರ ಯೋಜನೆ ರೂಪಿಸಿದೆ. ಇದರಿಂದ ಎಲ್ಲರಿಗೂ ಸಮುದ್ರಾಳಕ್ಕೆ ಹೋಗಿ ದ್ವಾರಕಾ ನಗರಿಯ ಅವಶೇಷಗಳ ದರ್ಶನ ಮಾಡಿಕೊಂಡು ಬರಬಹುದಾಗಿದೆ.

ಪರಿಣಿತರ ಸಹಾಯದೊಂದಿಗೆ ಪ್ರಧಾನಿ ಮೋದಿ ಮೊನ್ನೆ ಸಮುದ್ರಾದಳಕ್ಕಿಳಿದು ದ್ವಾರಕಾನಗರಿಯ ಅವಶೇಷಗಳ ದರ್ಶನ ಮಾಡಿದ್ದಲ್ಲದೆ, ಕೃಷ್ಣನಿಗೆ ಪೂಜೆ ಮಾಡಿ ಬಂದಿದ್ದರು. ಇದೊಂದು ವಿಶೇಷ ಅನುಭವವಾಗಿತ್ತು ಎಂದು ಮೋದಿ ಹೇಳಿದ್ದರು. ಇತ್ತೀಚೆಗೆ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಸಾಕಷ್ಟು ಜನ ಲಕ್ಷದ್ವೀಪಕ್ಕೆ ಪ್ರವಾಸ ಮಾಡಲು ಆಸಕ್ತಿ ತೋರಿದ್ದರು. ಇದೀಗ ಮೋದಿ ದ್ವಾರಕಾ ದರ್ಶನ ಮಾಡಿದ ಬಳಿಕ ನಮಗೂ ಸಮುದ್ರಾದಳಕ್ಕೆ ಹೋಗಿ ದ್ವಾರಕೆಯ ದರ್ಶನ ಮಾಡಲು ಅವಕಾಶವಿದೆಯೇ ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಮುಂದಿನ ದೀಪಾವಳಿಯ ನಂತರ ಈ ಸುಯೋಗ ಒದಗಿಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ