ನಾನ್ಸೆನ್ಸ್ ಏಜಿನಲ್ಲಿ ವಿಧವಾ ವಿವಾಹಕ್ಕೆ ಉತ್ತೇಜನ!

ಮಂಗಳವಾರ, 3 ಡಿಸೆಂಬರ್ 2019 (13:11 IST)
ಮನುಷ್ ನಾಯಕನಾಗಿ ಎಂಟ್ರಿ ಕೊಡುತ್ತಿರುವ 19 ಏಜ್ ಈಸ್ ನಾನ್ಸೆನ್ಸ್ ಚಿತ್ರ ಡಿಸೆಂಬರ್ 6ರಂದು ತೆರೆಗಾಣುತ್ತಿದೆ. ರಾಜೇಶ್ವರಿ ಫಿಲಂಸ್ ಲಾಂಛನದಲ್ಲಿ ಈ ಚಿತ್ರವನ್ನು ಲೋಕೇಶ್ ನಿರ್ಮಾಣ ಮಾಡಿದ್ದಾರೆ. ಇದು ಹೆಸರೇ ಸೂಚಿಸುವಂತೆ ಇದು ಹತ್ತೊಂಬತ್ತನೇ ವಯಸ್ಸಿನ ಹುಮ್ಮಸ್ಸು, ನಿರ್ಧಾರ ಮತ್ತು ಅದರಿಂದಾಗೋ ಪರಿಣಾಮಗಳ ಸುತ್ತ ಹೊಸೆದಿರೋ ಕಥೆಯನ್ನೊಳಗೊಂಡಿರುವ ಚಿತ್ರ.

ಆದರೆ ಅದರ ಜೊತೆ ಜೊತೇ ಗಂಭೀರವಾದ, ಎಲ್ಲರನ್ನೂ ಚಿಂತನೆಗೆ ಹಚ್ಚುವ, ಸಂದೇಶ ಸಾರುವ ಕಥನವೂ ಇಲ್ಲಿದೆ. ಒಟ್ಟಾರೆ ಚಿತ್ರ ರಸವತ್ತಾಗಿ ಮೂಡಿ ಬಂದಿರೋದೇ ಆ ಕಾರಣದಿಂದ ಅನ್ನೋದು ಚಿತ್ರತಂಡದ ಅಭಿಪ್ರಾಯ.
19 ಏಜ್ ಈಸ್ ನಾನ್ಸೆನ್ಸ್ ಸುರೇಶ್ ಎಂ ಗಿಣಿ ನಿರ್ದೇಶನದ ಚಿತ್ರ. ನಿರ್ಮಾಪಕ ಲೋಕೇಶ್ ಪುತ್ರ ಮನುಷ್ ಎಂಬ ಹತ್ತೊಂಬತ್ತರ ಹುಡುಗ ಈ ಮೂಲಕ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಅಷ್ಟಕ್ಕೂ ನಿರ್ಮಾಪಕ ಲೋಕೇಶ್ ಈ ಕಥೆ ಕೇಳಿದಾಕ್ಷಣ ಸಿನಿಮಾ ಹುಟ್ಟು ಹತ್ತಿಸಿಕೊಂಡಿದ್ದ ತನ್ನ ಮಗ ಈ ಸಿನಿಮಾ ಮೂಲಕವೇ ಹೀರೋ ಆಗಲಿ ಅಂತ ಬಯಸಿದ್ದರ ಹಿಂದಿದ್ದದ್ದು ಈ ಕಥೆಯಲ್ಲಿನ ಸೊಗಸು. ಒಂದು ಬಿಂದುವಿನಿಂದ ಹೊರಟ ಹಲವಾರು ಗಹನವಾದ ಸಂಗತಿಗಳತ್ತ ಕೈ ಚಾಚಿಕೊಳ್ಳುವ ಗುಣದ ಈ ಕಥೆ ಕನ್ನಡ ಪ್ರೇಕ್ಷಕರ ಪಾಲಿಗೆ ಹೊಸ ಅನುಭೂತಿ ನೀಡುತ್ತದೆಂಬ ನಂಬಿಕೆ ನಿರ್ಮಾಪಕರು ಸೇರಿದಂತೆ ಇಡೀ ಚಿತ್ರತಂಡದಲ್ಲಿದೆ.
ಇಲ್ಲಿ ಬರೀ ಹತ್ತೊಂಬತ್ತರ ಹುಮ್ಮಸ್ಸಿನ ನಾಗಾಲೋಟ ಮಾತ್ರವೇ ಇಲ್ಲ. ಬದುಕಿಗೆ ಹತ್ತಿರಾದಂಥಾ ಕಥನವಿದೆ. ತೀರಾ ಸಾಮಾಜಿಕ ಮೌಲ್ಯ ಸಾರುವಂಥಾ ವಿಚಾರಗಳು ಕಥೆಯಲ್ಲಿಯೇ ಅಡಕವಾಗಿವೆ. ಮಹತ್ವದ ವಿಚಾರವೆಂದರೆ, ವಿಧವಾ ವಿವಾಹದಂಥಾ ವಿಚಾರವೂ ಇಲ್ಲಿ ಪ್ರಧಾನವಾಗಿ ಪ್ರಸ್ತಾಪವಾಗಿದೆ. ಸಮಾಜ ಅದೆಷ್ಟೇ ಮುಂದುವರೆದಿದೆ ಅಂದುಕೊಂಡರೂ ವಿಧವಾ ವಿವಾಹದಂಥವುಗಳ ಬಗ್ಗೆ ಮಡಿವಂತಿಕೆಯಿಂದ ವರ್ತಿಸೋ ಜಾಢ್ಯವಿನ್ನೂ ಸಂಪೂರ್ಣವಾಗಿ ಮರೆಯಾಗಿಲ್ಲ. ಈ ಚಿತ್ರದಲ್ಲಿ ವಿಧವಾ ವಿವಾಹವನ್ನು ಉತ್ತೇಜಿಸುವಂಥಾ ವಿಚಾರಗಳಿವೆಯಂತೆ. ಈ ಎಲ್ಲ ಕಾರಣಗಳಿಂದ ಮುಖ್ಯವಾಗಿ ಪರಿಗಣಿಸಲ್ಪಟ್ಟಿರುವ ಈ ಚಿತ್ರ ಡಿಸೆಂಬರ್ 6ರಂದು ತೆರೆಗಾಣಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ