ಅರಮನೆಯಲ್ಲಿಂದು ಮಹಾರಾಣಿ ತ್ರಿಷಿಕಾ ದೇವಿಯವರ ಸೀಮಂತ ಶಾಸ್ತ್ರ

ಭಾನುವಾರ, 1 ಅಕ್ಟೋಬರ್ 2017 (10:33 IST)
ಮೈಸೂರು: ಅದ್ಧೂರಿ ದಸರಾ ಸಂಭ್ರಮಕ್ಕೆ ನಿನ್ನೆ ತೆರೆ ಬಿದ್ದಿದೆ. ಆದರೆ ಅರಮನೆಯಲ್ಲಿ ಮತ್ತಷ್ಟು ಸಂಭ್ರಮ ಹೆಚ್ಚಾಗಿದೆ. ಇದಕ್ಕೆ ಕಾರಣ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಧರ್ಮಪತ್ನಿ ತ್ರಿಷಿಕಾ ದೇವಿ ಒಡೆಯರ್ ಗರ್ಭವರಿಯಾಗಿರುವುದು. ಏಳು ತುಂಬಿದ ಹಿನ್ನೆಲೆಯಲ್ಲಿ ಇಂದು ಅರಮನೆಯಲ್ಲಿ ಸೀಮಂತ ಶಾಸ್ತ್ರ ನಡೆಯಲಿದೆ.

ಸೀಮಂತ ಕಾರ್ಯಕ್ಕೆ ಈಗಾಗಲೇ ಅರಮನೆಯಲ್ಲಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅರಮನೆಯ ಧಾರ್ಮಿಕ ಸಂಪ್ರದಾಯದಂತೆ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ತ್ರಿಷಿಕಾ ದೇವಿಯವರ ತಂದೆ ಹರ್ಷವರ್ಧನ್ ಸಿಂಗ್, ತಾಯಿ ಮಹೇಶ್ವರಿ ಸಿಂಗ್ ಸೇರಿದಂತೆ ಸಂಬಂಧಿಕರು ಅರಮನೆ ತಲುಪಿದ್ದಾರೆ.

ಈ ಕಾರ್ಯಕ್ರಮಕ್ಕೆ ರಾಜವಂಶಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ಮಾಧ್ಯಮ ಸೇರಿದಂತೆ ಇತರರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಅಂದಹಾಗೆ ಇಷ್ಟು ದಿನ ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ತ್ರಿಷಿಕಾ ಅವರು ದಸರಾ ಹಿನ್ನೆಲೆಯಲ್ಲಿ ಶತಾಬ್ದಿ ರೈಲಿನಲ್ಲಿ ಮೈಸೂರಿಗೆ ಆಗಮಿಸಿದ್ದರು. ಈ ಮೂಲಕ ಗರ್ಭವತಿಯಾಗಿ ದಸರಾದಲ್ಲಿ ಪಾಲ್ಗೊಂಡ ಯದುವಂಶದ ಮೂರನೇ ಮಹಾರಾಣಿ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ.

56 ವರ್ಷದ ಬಳಿಕ ಗರ್ಭವತಿಯಾಗಿ ಮಹಾರಾಣಿ ತ್ರಿಷಿಕಾ ದೇವಿ ದಸರಾದಲ್ಲಿ ಪಾಲ್ಗೊಂಡಿದ್ದರು. ಈ ಹಿಂದೆ 1961ರಲ್ಲಿ ಮಹಾರಾಣಿ ತ್ರಿಪುರ ಸುಂದರಿ ಅಮ್ಮಣ್ಣಿ ಗರ್ಭವತಿಯಾಗಿದ್ದ ಸಂದರ್ಭದಲ್ಲಿ ದಸರಾದಲ್ಲಿ ಪಾಲ್ಗೊಂಡಿದ್ರು. ಇದಕ್ಕೂ ಮೊದಲು 1890ರಲ್ಲಿ ವಾಣಿ ವಿಲಾಸ ಅಮ್ಮಣ್ಣಿಯವರು ಗರ್ಭಧರಿಸಿದ್ದಾಗ ದಸರಾದಲ್ಲಿ ಪಾಲ್ಗೊಂಡಿದ್ದರು ಎಂದು ಇತಿಹಾಸ ಹೇಳುತ್ತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ