ಮುಂದುವರಿದ ತಾಪಮಾನ: ವೇತನ ಸಹಿತ ಅರ್ಧ ದಿನ ರಜೆಗೆ ಪೌರಕಾರ್ಮಿಕರ ಆಗ್ರಹ

Sampriya

ಮಂಗಳವಾರ, 9 ಏಪ್ರಿಲ್ 2024 (15:46 IST)
ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರುತ್ತಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬಿಸಿಗಾಳಿಯ ಮುನ್ಸೂಚನೆ ನೀಡಿದೆ. ಹೀಗಾಗಿ ಸಂಭಾವ್ಯ ಸಮಸ್ಯೆ ತಡೆಯುವ ನಿಟ್ಟಿನಲ್ಲಿ ವೇತನ ಕಡಿತ ಮಾಡದೆ ಅರ್ಧ ದಿನ ರಜೆ ನೀಡಬೇಕು ಎಂದು ಪೌರಕಾರ್ಮಿಕರು ಆಗ್ರಹಿಸಿದ್ದಾರೆ.

ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳಿಗೆ ಈ ಕುರಿತು ಅಖಿಲ ಭಾರತ ಕಾರ್ಮಿಕ ಸಂಘಗಳ ಒಕ್ಕೂಟವು ಪತ್ರ ಬರೆದಿದೆ. ಪೌರಕಾರ್ಮಿಕರಿಗೆ ಶಾಖದ ಹೊಡೆತದಿಂದ ರಕ್ಷಿಸಿಕೊಳ್ಳಲು ಹೆಚ್ಚುವರಿ ವಿರಾಮದೊಂದಿಗೆ ಕುಡಿಯುವ ನೀರು, ಒಆರ್‌ಎಸ್ ಮತ್ತು ಮಜ್ಜಿಗೆ ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಶುದ್ಧ ನೀರು ಮತ್ತು ನೈರ್ಮಲ್ಯದ ಶೌಚಾಲಯಗಳಿಂದ ವಂಚಿತರಾಗಿರುವ ಪೌರಕಾರ್ಮಿಕರು ಶಾಖ-ಸಂಬಂಧಿತ ಕಾಯಿಲೆಗಳಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ. ಕಳೆದ ಕೆಲವು ವಾರಗಳಿಂದ ತೀವ್ರತರವಾದ ಶಾಖದಲ್ಲಿ ಕೆಲಸ ಮಾಡುತ್ತಿದ್ದೇವೆ. ಕೆಲವರಿಗೆ ಕೆಲಸದ ವೇಳೆ ಆಯಾಸ, ತಲೆತಿರುಗುವಿಕೆ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹಲವು ಮಂದಿ ಪೌರಕಾರ್ಮಿಕರು ಅಭಿಪ್ರಾಯಪಟ್ಟಿದ್ದಾರೆ.

ಪೌರಕಾರ್ಮಿಕರು ಬೆಳಿಗ್ಗೆ 6 ಗಂಟೆಗೆ ಕೆಲಸ ಪ್ರಾರಂಭಿಸುತ್ತಾರೆ. ಪ್ರತಿದಿನ ಮಧ್ಯಾಹ್ನ 2 ಗಂಟೆಯವರೆಗೆ ಕೆಲಸ ಮಾಡುತ್ತಾರೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮಧ್ಯಾಹ್ನ 11ರಿಂದ 3 ಗಂಟೆಯ ಅವಧಿಯಲ್ಲಿ ಮನೆಯೊಳಗೆ ಇರಲು ಸೂಚನೆ ನೀಡಿರುವುದನ್ನು ಉಲ್ಲೇಖಿಸಿ, ಕೆಲಸದ ಸಮಯವನ್ನು ಬೆಳಿಗ್ಗೆ 11 ಕ್ಕೆ ಕಡಿತಗೊಳಿಸಬೇಕೆಂದು ಒಕ್ಕೂಟ ಮನವಿ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ