ಬರ ಪರಿಹಾರ ಸಾಕು ಎಂದಿರುವ ಕುಮಾರಸ್ವಾಮಿ ನಾಡದ್ರೋಹಿ: ಶಿವಕುಮಾರ್ ಆಕ್ರೋಶ

Sampriya

ಶನಿವಾರ, 27 ಏಪ್ರಿಲ್ 2024 (20:33 IST)
ಬೆಂಗಳೂರು: ಕೇಂದ್ರ ಸರ್ಕಾರ ಕರ್ನಾಟಕದ ಬರಕ್ಕೆ ಅಲ್ಪ ಪರಿಹಾರ ಮೊತ್ತ ಘೋಷಿಸಿದ್ದು, ನಾವು ನಮ್ಮ ಕಾನೂನು ಹೋರಾಟ ಮುಂದುವರಿಸುತ್ತೇವೆ. ಈ ಮಧ್ಯೆ, ಈಗ ಬಿಡುಗಡೆ ಮಾಡಿರುವ ಪರಿಹಾರ ಮೊತ್ತ ಸಾಕು ಎಂದು ಹೇಳಿರುವ ಮಾಜಿ ಸಿಎಂ ಕುಮಾರಸ್ವಾಮಿ ನಾಡ ವಿರೋಧಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶಿವಕುಮಾರ್ ಅವರು ಶನಿವಾರ ಮಾಧ್ಯಮಗೋಷ್ಠಿ ನಡೆಸಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ಘೋಷಿಸಿರುವ ಬಗ್ಗೆ ಮಾತನಾಡಿದರು.

“ಕೇಂದ್ರ ಸರ್ಕಾರದ ಹಣ ರಾಜ್ಯಕ್ಕೆ ಇನ್ನು ಬಂದಿಲ್ಲ. ಆದರೂ ಬಿಜೆಪಿ ನಾಯಕರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಈ ಮಧ್ಯೆ ಕುಮಾರಸ್ವಾಮಿ ಅವರು ಈ ಮೊತ್ತ ಸಾಕು ಎಂದಿದ್ದಾರೆ. ಇದು ರಾಜ್ಯಕ್ಕೆ ಬರಬೇಕಾದ ಪರಿಹಾರ ಮೊತ್ತವೇ ಹೊರತು, ಇಷ್ಟು ಸಾಕು ಎನ್ನಲು ಇದು ಅವರ ಮನೆ ಆಸ್ತಿಯಲ್ಲ. ಇಂತಹ ಹೇಳಿಕೆ ಕೊಟ್ಟಿರುವ ಕುಮಾರಸ್ವಾಮಿ ನಾಡದ್ರೋಹಿ.

ನೀವು ಜನಪ್ರತಿನಿಧಿಯಾಗಿ ನಿಮ್ಮ ಮೈತ್ರಿ ಸರ್ಕಾರಕ್ಕೆ ಹೇಳಿ ರಾಜ್ಯಕ್ಕೆ ಹೆಚ್ಚಿನ ಪರಿಹಾರ ಸಿಗುವಂತೆ ಮಾಡಬೇಕು. ಆದರೆ ಅವರು ಇಷ್ಟು ಪರಿಹಾರ ಸಾಕು ಎಂದು ಹೇಳಿದ್ದಾರೆ. ಇದು ಪಕ್ಷ ಅಥವಾ ರಾಜಕೀಯ ವಿಚಾರವಲ್ಲ. ರಾಜ್ಯಕ್ಕೆ ಆಗುತ್ತಿರುವ ದ್ರೋಹ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂಬ ಕಾರಣಕ್ಕೆ ರಾಜ್ಯವನ್ನು ಕಡೆಗಣಿಸಲಾಗುತ್ತಿದೆ.

ನಮ್ಮ ರಾಜ್ಯದಲ್ಲಿ 223 ತಾಲೂಕುಗಳನ್ನು ಬರ ಪೀಡಿತ ಎಂದು ಸೆಪ್ಟೆಂಬರ್ 13, 2023ರಂದು ಸರ್ಕಾರ ಘೋಷಣೆ ಮಾಡಿತ್ತು. ಬರಗಾಲದ ಹಿನ್ನೆಲೆಯಲ್ಲಿ 46 ಲಕ್ಷ ಹೆಕ್ಟೇರ್ ಕೃಷಿ ಭೂಮಿ, 2.06 ಲಕ್ಷ ಹೆಕ್ಟೇರ್ ತೋಟಗಾರಿಕ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಒಟ್ಟಾರೆಯಾಗಿ 35 ಸಾವಿರ ಕೋಟಿಯಷ್ಟು ನಷ್ಟವಾಗಿದ್ದು, ಎನ್ ಡಿಆರ್ ಎಫ್ ಮಾರ್ಗಸೂಚಿ ಅನುಸಾರ ಕರ್ನಾಟಕ ರಾಜ್ಯ ಸರ್ಕಾರ 2024ರ ಸೆಪ್ಟೆಂಬರ್ 22ರಂದು ಕೇಂದ್ರ ಸರ್ಕಾರಕ್ಕೆ 18,172 ಕೋಟಿ ಬರ ಪರಿಹಾರ ನೀಡುವಂತೆ ಮನವಿ ಮಾಡಿತ್ತು.

ಅಕ್ಟೋಬರ್ 25ರಂದು ನಮ್ಮ ಸರ್ಕಾರದ ಸಚಿವರುಗಳು ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಬರ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದ್ದರು. ನವೆಂಬರ್ 25ರಂದು ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಹಾಗೂ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಕೇಂದರ ಹಣಕಾಸು ಸಚಿವರನ್ನು ಭೇಟಿ ಮಾಡಿ ತಕ್ಷಣವೇ ಬರ ಪರಿಹಾರ ಬಿಡುಗಡೆಗೆ ಮನವಿ ಮಾಡಿದ್ದರು.

19, 20 ಡಿಸೆಂಬರ್ ರಂದು ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಪ್ರಧಾನಮಂತ್ರಿ ಹಾಗೂ ಗೃಹಸಚಿವರನ್ನು ಭೇಟಿ ಮಾಡಿ ಬರ ಪರಿಹಾರ ನೀಡುವಂತೆ ಮನವಿ ಮಾಡಿದರು. 2024 ಜನವರಿ 20ರಂದು ಮುಖ್ಯಮಂತ್ರಿಗಳು ಮೋದಿ ಅವರಿಗೆ ಬರ ಪರಿಹಾರ ಬಿಡುಗಡೆ ಮಾಡಲು ಮನವಿ ಮಾಡಿದ್ದಾರೆ.

ಈ ಮಧ್ಯೆ ನರೆಗಾ ಯೋಜನೆಯಲ್ಲಿ 100 ದಿನಗಳ ಕೂಲಿ ದಿನಗಳನ್ನು 150ಕ್ಕೆ ಏರಿಕೆ ಮಾಡಬೇಕು ಎಂಬ ಅವಕಾಶವಿದ್ದರೂ ಕೇಂದ್ರ ಸರ್ಕಾರ ಮಾಡಿಲ್ಲ. ಇದು ಬೇಸರದ ವಿಚಾರ. ಇದರಿಂದ ನಮ್ಮ ರಾಜ್ಯಕ್ಕೆ ಬರಬೇಕಾಗಿದ್ದ ಅವಕಾಶವನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ. ಇದನ್ನು ಮಾಡಿದ್ದರೆ ರಾಜ್ಯದ ಅನೇಕ ಕಾಮಗಾರಿಗಳಿಗೆ ಅವಕಾಶ ಇರುತ್ತಿತ್ತು.

ಕೇಂದ್ರ ಸರ್ಕಾರ ನಮ್ಮ ಮನವಿಗೆ ಸ್ಪಂದಿಸದ ನೀಡದ ಕಾರಣ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೆವು. ನಂತರ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರ್ಕಾರ ಬರ ಪರಿಹಾರಕ್ಕೆ ಒಪ್ಪಿಗೆ ನೀಡಿತು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರ ಕೇಂದ್ರ 3,454 ಕೋಟಿ ನೀಡಿದ್ದಾರೆ. ಇದು ಯಾವಾಗ ನಮ್ಮ ಖಾತೆಗೆ ಬರುತ್ತದೆಯೋ ಗೊತ್ತಿಲ್ಲ.

ಬಜೆಟ್ ನಲ್ಲಿ ಘಷಿಸಿದ ಹಣ ಯಾಕೆ ಬರಲಿಲ್ಲ?

ಕೇಂದ್ರ ಸರ್ಕಾರ ಎಲ್ಲಾ ವಿಚಾರದಲ್ಲೂ ರಾಜ್ಯಕ್ಕೆ ಚೊಂಬು ನೀಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ ನಲ್ಲಿ 5400 ಕೋಟಿ ಘೋಷಣೆ ಮಾಡಿದರೂ ರಾಜ್ಯಕ್ಕೆ ಹಣ ಯಾಕೆ ನೀಡಲಿಲ್ಲ. ಮಹಾದಾಯಿ, ಎತ್ತಿನಹೊಳೆ ಯೋಜನೆ ರಾಷ್ಟ್ರೀಯ ಯೋಜನೆ ಮಾಡಲಿಲ್ಲ ಯಾಕೆ? ಗೆದ್ದರೆ ಒಂದೇ ತಿಂಗಳಲ್ಲಿ ಮೋಕೇದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎನ್ನುತ್ತಾರೆ.

ನೀವು ಅವರ ಜತೆ ಕೈಜೋಡಿಸಿದ ದಿನವೇ ಮೇಕೆದಾಟು ಯೋಜನೆಗೆ ಸಹಿ ಹಾಕಿಸಬೇಕಿತ್ತು. ನಮ್ಮ ಹೇರಾಟದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರು. ಅಧಿಕಾರ ಕೊಟ್ಟರೆ ಮಾತ್ರ ರಾಜ್ಯದ ಹಿತದ ಬಗ್ಗೆ ಯೋಚಿಸುತ್ತಾರೆ, ಇಲ್ಲದಿದ್ದರೆ ಯೋಚಿಸುವುದಿಲ್ಲವೇ?

ರಾಜ್ಯಕ್ಕೆ ಅನ್ಯಾಯ ಆಗಿದೆ, ರಾಜ್ಯ ಕೇಳಿರುವುದು 18 ಸಾವಿರ ಕೋಟಿ, ಕೇಂದ್ರ ಕೊಟ್ಟಿರುವ ಪರಿಹಾರ ತೃಪ್ತಿಯಿಲ್ಲ. ದಿನೇದಿನೆ ರಾಜ್ಯದ ಬಗ್ಗೆ ಘೋರ ಅನ್ಯಾಯವಾಗುತ್ತಿದೆ. ಬಿಜೆಪಿ ನಾಯಕರು ಕಳೆದ ನಾಲ್ಕು ದಿನಗಳಿಂದ ಸಿನಿಮಾ ನೋಡಿ ಮೌನವಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ