ಪ್ರೇಮಿಗಳ ದಿನದ ಸಂಭ್ರಮದಲ್ಲಿ ಪುಲ್ವಾಮಾ ದಾಳಿಯನ್ನು ಮರೆಯದಿರಿ

Krishnaveni K

ಬುಧವಾರ, 14 ಫೆಬ್ರವರಿ 2024 (10:20 IST)
File photo
ನವದೆಹಲಿ: ಇಂದು ವಿಶ್ವದಾದ್ಯಂತ ಪ್ರೇಮಿಗಳ ದಿನಾಚರಣೆ ಜೋರಾಗಿಯೇ ನಡೆಯುತ್ತಿದೆ. ಆದರೆ ಭಾರತೀಯರಿಗೆ ಮಾತ್ರ ಸರಿಯಾಗಿ ಐದು ವರ್ಷದ ಹಿಂದೆ ಇದೇ ಪ್ರೇಮಿಗಳ ದಿನವೇ ಕರಾಳ ದಿನವಾಗಿತ್ತು.

2019 ರಲ್ಲಿ ನಡೆದಿದ್ದ ಪುಲ್ವಾಮಾ ದಾಳಿಗೆ ಇಂದು ಐದು ವರ್ಷ. ಪಾಕ್ ಪ್ರೇರಿತ ಉಗ್ರರು ಜಮ್ಮು ಕಾಶ್ಮೀರ ಹೆದ್ದಾರಿಯಲ್ಲಿ ನಮ್ಮ ಕೇಂದ್ರೀಯ ಮೀಸಲು ಪಡೆಯ ಹೆಮ್ಮೆಯ 40 ಅಧಿಕಾರಿಗಳು ಸಂಚರಿಸುತ್ತಿದ್ದ ವಾಹನವನ್ನು ಸ್ಪೋಟಿಸಿ ಕೊಂದು ಹಾಕಿದ್ದರು. ಇದು ಇಡೀ ದೇಶದ ರಕ್ತ ಕುದಿಯುವಂತೆ ಮಾಡಿತ್ತು. ಪ್ರೇಮಿಗಳ ದಿನ ಖುಷಿಯಲ್ಲಿದ್ದ ಭಾರತೀಯರು ಉಗ್ರರ ಮೇಲೆ ದಂಡೆತ್ತಿ ಹೋಗುವ ಆಕ್ರೋಶದಲ್ಲಿದ್ದರು.

ಪಾಕಿಸ್ತಾನ ಮೂಲದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಈ ದುಷ್ಕೃತ್ಯವೆಸಗಿತ್ತು. ಪುಲ್ವಾಮ ಬಳಿ ಇಬ್ಬರು ಆತ್ಮಾಹುತಿ ದಾಳಿಕೋರರು ಬಸ್ ಸ್ಪೋಟಿಸಿದ್ದರು.

ಇದಕ್ಕೆ ಪ್ರತಿಯಾಗಿ ಫೆಬ್ರವರಿ 26 ರಂದು ನಸುಕಿನ ಜಾವದಲ್ಲಿ ಭಾರತೀಯ ವಾಯು ಸೇನೆಯ ಮಿರಾಜ್ ಯುದ್ಧ ವಿಮಾನಗಳು ಗಡಿನಿಯಂತ್ರಣ ರೇಖೆಯಲ್ಲಿರುವ ಜೈಶ್  ಇ ಮೊಹಮ್ಮದ್ ಸಂಘಟನೆಯ ಪ್ರಮುಖ ನೆಲೆಗಳನ್ನು ಗುರಿಯಾಗಿಸಿ ಏರ್ ಸ್ಟ್ರೈಕ್ ನಡೆಸಿತ್ತು. ಈ ದಾಳಿಯಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬುದನ್ನು ಪಾಕ್ ಮುಚ್ಚಿಹಾಕಲು ಯತ್ನಿಸಿತ್ತು. ಆದರೂ ಸಾಕಷ್ಟು ಜನ ಪ್ರಾಣ ಕಳೆದುಕೊಂಡಿದ್ದಾಗಿ ತಿಳಿದುಬಂದಿತ್ತು. ಅಂದು ವೀರಮರಣವನ್ನಪ್ಪಿದ್ದ ಅಷ್ಟೂ ವೀರ ಯೋಧರನ್ನು ಭಾರತ ಎಂದೆಂದಿಗೂ ಸ್ಮರಿಸುತ್ತದೆ. ಪ್ರೇಮಿಗಳ ದಿನದ ಸಂಭ್ರಮದಲ್ಲಿ ಈ ಕರಾಳ ದಿನವನ್ನು ನಾವು ಮರೆಯದಿರೋಣ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ