ಕಾಂಗ್ರೆಸ್ ಗೆ ಎರಡೆರಡು ಡ್ಯಾಮೇಜ್ ತಂದಿಟ್ಟು ರಾಜೀನಾಮೆ ನೀಡಿದ ಸ್ಯಾಮ್ ಪಿತ್ರೋಡಾ

Krishnaveni K

ಗುರುವಾರ, 9 ಮೇ 2024 (08:31 IST)
ನವದೆಹಲಿ: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ತಮ್ಮ ನಾಲಿಗೆ ಹರಿಯಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿತ್ತ ಪಕ್ಷದ ಸಾಗರೋತ್ತರ ವಿಭಾಗದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ರಾಜೀನಾಮೆ ನೀಡಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಸ್ಯಾಮ್ ಪಿತ್ರೋಡಾ ನೀಡಿದ ಎರಡು ಹೇಳಿಕೆಗಳು ಕಾಂಗ್ರೆಸ್  ಗೆ ಭಾರೀ ಹಿನ್ನಡೆ ಉಂಟು ಮಾಡಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಯಾವುದೇ ರಾಜಕೀಯ ಪಕ್ಷದ ನಾಯಕರು ಅಪ್ಪಿ ತಪ್ಪಿ ಏನೇ ಮಾತನಾಡಿದರೂ ಅದರ ನೇರ ಪರಿಣಾಮವಾಗುವುದು ಪಕ್ಷದ ಮೇಲೆಯೇ.

ಸ್ಯಾಮ್ ಪಿತ್ರೋಡಾ ವಿಷಯದಲ್ಲೂ ಆಗಿದ್ದು ಅದೇ. ಅಲ್ಲೆಲ್ಲೋ ದೂರದ ಅಮೆರಿಕಾದಲ್ಲಿ ಕುಳಿತು ಬೇಕಾಬಿಟ್ಟಿ ಹೇಳಿಕೆ ನೀಡಿದರೂ ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅವರ ಹೇಳಿಕೆಯಿಂದ ಭಾರೀ ಡ್ಯಾಮೇಜ್ ಆಗಿದೆ. ಪಿತ್ರಾರ್ಜಿತ ಆಸ್ತಿಗೆ ತೆರಿಗೆ ವಿಧಿಸಬೇಕು ಎಂಬ ಅವರ ಹೇಳಿಕೆ ಬಿಜೆಪಿಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿತ್ತು. ಕಾಂಗ್ರೆಸ್ ಬದುಕಿದ್ದಾಗ ಮಾತ್ರವಲ್ಲ, ಸತ್ತ ಮೇಲೂ ನಿಮ್ಮನ್ನು ಶೋಷಣೆ ಮಾಡುವುದನ್ನು ನಿಲ್ಲಿಸಲ್ಲ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದರು. ಈ ಡ್ಯಾಮೇಜ್ ಸರಿಪಡಿಸಲು ಹವಣಿಸುತ್ತಿರುವಾಗಲೇ ಸ್ಯಾಮ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದರು.

ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ, ಉತ್ತರ ಭಾರತೀಯರು ಚೀನಿಯರಂತೆ ಕಾಣುತ್ತಾರೆ, ಎಂದೆಲ್ಲಾ ಎಗ್ಗಿಲ್ಲದೇ ಮಾತನಾಡಿ ಮತ್ತೊಮ್ಮೆ ಕಾಂಗ್ರೆಸ್ ಗೆ ಸಂಕಷ್ಟ ತಂದಿದ್ದಾರೆ. ಸ್ಯಾಮ್ ಹೇಳಿಕೆಗೆ ಸಾರ್ವಜನಿಕರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮತ್ತೊಮ್ಮೆ ಕಾಂಗ್ರೆಸ್ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡು ಮುಜುಗರ ತಪ್ಪಿಸಲು ಯತ್ನಿಸಿದೆ. ಆದರೆ ಮನೆಯಲ್ಲಿ ಯಾರೇ ಒಬ್ಬರು ತಪ್ಪು ಮಾಡಿದರೂ ಅದರ ಪರಿಣಾಮ ಇಡೀ ಮನೆಗೆ ಎಂಬಂತೆ ಕಾಂಗ್ರೆಸ್ ಗೆ ಸ್ಯಾಮ್ ಹೇಳಿಕೆ ತೀವ್ರ ಸಂಕಷ್ಟ ತಂದೊಡ್ಡಿದೆ. ಪಕ್ಷಕ್ಕೆ ಎರಡೆರಡು ಬಾರಿ ಡ್ಯಾಮೇಜ್ ತಂದಿಟ್ಟ ಪಿತ್ರೋಡಾ ಈಗ ಕಾಂಗ್ರೆಸ್ ಸಾಗರೋತ್ತರ ವಿಭಾಗದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ