ಗೌರಿ ಹಬ್ಬದಂದು ಗೌರಿ ಭೂಮಿಗೆ ಬರುತ್ತಾಳೆಂಬ ನಂಬಿಕೆ

ಭಾನುವಾರ, 4 ಸೆಪ್ಟಂಬರ್ 2016 (13:41 IST)
ಇಂದು ನಾಡಿನಾದ್ಯಂತ ಜನರು ಗೌರಿ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದಾರೆ. ಗೌರಿ ಹಬ್ಬಕ್ಕೆ ವಿಶೇಷ ಸ್ಥಾನವಿದ್ದು, ಗೌರಿ ಇಂದು ಭೂಮಿಗೆ ಬರುತ್ತಾಳೆ ಎಂಬ ನಂಬಿಕೆಯಿದ್ದು ,ಗೌರಿಯನ್ನು ಭೂಮಿಯಲ್ಲಿ ಸ್ವಾಗತಿಸಲು ಗಣೇಶ ಬರುತ್ತಾನೆಂಬ ಪ್ರತೀತಿಯಿದೆ.

ಉತ್ತರಾಂಚಲದಲ್ಲಿರುವ ಗೌರಿಕುಂಡ ವಿಶೇಷ ಸ್ಥಾನಮಾನ ಗಳಿಸಿದೆ.  ಗೌರಿಕುಂಡದಲ್ಲಿರುವ ಬಿಸಿನೀರಿನ ಬುಗ್ಗೆ ವಿಶೇಷ ಮಹತ್ವ ಪಡೆದಿದೆ. ಈ ಬಿಸಿನೀರಿನ ಬುಗ್ಗೆಯಲ್ಲಿ ಗೌರಿ ಸ್ನಾನ ಮಾಡುವಾಗ ಗಣೇಶನನ್ನು ಸ್ನಾನದ ಕೋಣೆಯ ಹೊರಗೆ ನಿಲ್ಲಿಸಿದ್ದಳು. ಶಿವನು ಬಂದಾಗ ಗಣೇಶ ಶಿವನನ್ನು ಒಳಕ್ಕೆ ಬಿಡದೇ ತಡೆಯುತ್ತಾನೆ ಎಂಬ ಪೌರಾಣಿಕ ಕತೆಯಿದೆ.  ಗೌರಿ ಕುಂಡದಲ್ಲಿ ಗೌರಿ ಹಬ್ಬದಂದು ಪವಾಡ ನಡೆಯುತ್ತದೆಂದು ನಂಬಿಕೆಯಿದೆ. ಭಕ್ತರ ಭಕ್ತಿಗೆ ಒಲಿದ ಗೌರಿ ತನ್ನ ಕಣ್ಣನ್ನು ತೆರೆದು ಭಕ್ತರಿಗೆ ದರ್ಶನ ನೀಡುತ್ತಾಳೆನ್ನುವುದು ಜನಜನಿತವಾಗಿದೆ.
 
ಗೌರಿ ಹಬ್ಬವನ್ನು ಗಣೇಶ ಚತುರ್ಥಿಗೆ ಮುಂಚಿನ ದಿನ ಆಚರಿಸಲಾಗುತ್ತದೆ.ಗಣೇಶ ಮತ್ತು ಸುಬ್ರಹ್ಮಣ್ಯನ ತಾಯಿ ಭಗವಾನ್ ಶಿವನ ಪತ್ನಿ ಗೌರಿ ತನ್ನ ಭಕ್ತರಿಗೆ ಶಕ್ತಿ, ಧೈರ್ಯ ತುಂಬುವ ಸಾಮರ್ಥ್ಯದಿಂದ ಪೂಜೆಗೆ ಅರ್ಹಳಾಗಿದ್ದಾಳೆ. ಎಲ್ಲಾ ದೇವತೆಗಳಿಗಿಂತ ಶಕ್ತಿಶಾಲಿ ದೇವತೆಯಾದ ಗೌರಿ ಆದಿ ಶಕ್ತಿ ಮಹಾಮಾಯಾ ಅವತಾರವೆಂದು ಪರಿಗಣಿಸಲಾಗಿದೆ.
 
ಭಾದ್ರಪದ ಮಾಸದ ತದಿಗೆಯ 13ನೇ ದಿನ ಗೌರಿಯನ್ನು ತನ್ನ ತಂದೆ, ತಾಯಿಗಳ ಮನೆಗೆ ಸ್ವಾಗತಿಸಲಾಗುತ್ತದೆ. ಮರು ದಿನ ಗೌರಿಯ ಪುತ್ರ ಗಣೇಶ ತಾಯಿಯನ್ನು ಕೈಲಾಸಕ್ಕೆ ಕರೆದುಕೊಂಡು ಹೋಗಲು ಭೂಮಿಗೆ ಆಗಮಿಸುತ್ತಾನೆ.  ಸ್ವರ್ಣ ಗೌರಿ ವ್ರತವನ್ನು ಈ ಸಂದರ್ಭದಲ್ಲಿ ಗೌರಿಯನ್ನು ತೃಪ್ತಿಪಡಿಸಲು ಆಚರಿಸಲಾಗುತ್ತದೆ.
 
ಈ ದಿನ ಹಿಂದು ಮಹಿಳೆಯರು ಮತ್ತು ಯುವತಿಯರು ಸಾಂಪ್ರದಾಯಿಕ ಉಡುಗೆ ತೊಡುಗೆ ಧರಿಸುತ್ತಾರೆ. ಅವರು ಜಲಗೌರಿ ಅಥವಾ ಅರಿಶಿನಗೌರಿಯ ಮೂರ್ತಿಗೆ ಪೂಜೆ ನೆರವೇರಿಸುತ್ತಾರೆ. ಗೌರಿ ಮೂರ್ತಿಯನ್ನು ಅಕ್ಕಿ ಅಥವಾ ಗೋಧಿ ಧಾನ್ಯದೊಂದಿಗೆ ತಟ್ಟೆಯಲ್ಲಿರಿಸಲಾಗುತ್ತದೆ. ವ್ರತದ ಪ್ರಕಾರ ಶುಚಿ ಮತ್ತು ಶ್ರದ್ಧೆಯಿಂದ  ಪೂಜೆ ನೆರವೇರಿಸಲಾಗುತ್ತದೆ.
 
ಬಾಳೆಯ ಗೊನೆ ಮತ್ತು ಮಾವಿನ ಎಲೆಯಿಂದ ಅಲಂಕೃತವಾದ ಮಂಟಪವನ್ನು ಮೂರ್ತಿಯ ಸುತ್ತ ನಿರ್ಮಿಸಲಾಗುತ್ತದೆ. ಹತ್ತಿ, ರೇಶ್ಮೆ ವಸ್ತ್ರದಿಂದ, ಹೂವಿನ ಹಾರಗಳಿಂದ ಗೌರಿಯನ್ನು ಅಲಂಕರಿಸಲಾಗುತ್ತದೆ. ಮಹಿಳೆಯರು 16 ಗಂಟುಗಳ ಪವಿತ್ರ ಗೌರಿದಾರವನ್ನು ತಮ್ಮ ಬಲಗೈಗೆ ಕಟ್ಟಿಕೊಳ್ಳುತ್ತಾರೆ. ಇದು ಗೌರಿಯ ಆಶೀರ್ವಾದವೆಂದು ಭಾವಿಸುತ್ತಾರೆ.
 
ವ್ರತದ ಅಂಗವಾಗಿ 5 ಬಾಗಿನಗಳನ್ನು ಅರ್ಪಿಸಲಾಗುತ್ತದೆ. ಪ್ರತಿ ಬಾಗಿನವು ಅರಶಿನ, ಕುಂಕುಮ, ಕಪ್ಪು ಬಳೆಗಳು, ಕಪ್ಪು ಮಣಿಗಳು, ಬಾಚಣಿಗೆ, ಸಣ್ಣ ಕನ್ನಡಿ, ತೆಂಗು, ಬ್ಲೌಸ್ ಪೀಸ್, ಧಾನ್, ಅಕ್ಕಿ, ಗೋಧಿ ರವೆ, ಬೆಲ್ಲ ಮುಂತಾದವು ಒಳಗೊಂಡಿರುತ್ತದೆ.
ಒಂದು ಬಾಗಿನವನ್ನು ಗೌರಿ ದೇವತೆಗೆ ಅರ್ಪಿಸಲಾಗುತ್ತದೆ. ಉಳಿದ ಗೌರಿ ಬಾಗಿನಗಳನ್ನು ಮುತ್ತೈದೆಯರಿಗೆ ನೀಡಲಾಗುತ್ತದೆ.
ಗೌರಿ ಹಬ್ಬದ ಇನ್ನೊಂದು ವಿಶೇಷ ತವರು ಮನೆಯವರು ಗೌರಿ ಹಬ್ಬದ ಮಂಗಳದ್ರವ್ಯವನ್ನು ತಮ್ಮ ಕುಟುಂಬದ ವಿವಾಹಿತ ಯುವತಿಯರಿಗೆ ಕಳಿಸುತ್ತಾರೆ.

ಮಂಗಳದ್ರವ್ಯದ ಭಾಗವಾಗಿ ಹಣವನ್ನು ಕೂಡ ಕೆಲವರು ಕಳಿಸುತ್ತಾರೆ. ದಕ್ಷಿಣ ಭಾರತದಲ್ಲಿ ಹೋಳಿಗೆ, ಒಬ್ಬಟ್ಟು, ಪಾಯಸ, ಹುಗ್ಗಿ/ ಚಿತ್ರಾನ್ನ, ಬಜ್ಜಿ, ಕೋಸುಂಬರಿಯನ್ನು ಸಿದ್ಧಪಡಿಸಿ ದೇವರಿಗೆ ಅರ್ಪಿಸಲಾಗುತ್ತದೆ. ಭಗವಾನ್ ಗಣೇಶನ ಉತ್ಸವದಲ್ಲಿ ಕೂಡ ಈ ಆಚರಣೆ ಮುಂದುವರಿಯುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ