ಕುಸ್ತಿ ಫೆಡರೇಷನ್ ಅಮಾನತುಗೊಳಿಸಿದ ಕೇಂದ್ರ ಕ್ರೀಡಾ ಸಚಿವಾಲಯ

ಭಾನುವಾರ, 24 ಡಿಸೆಂಬರ್ 2023 (13:42 IST)
Photo Courtesy: Twitter
ನವದೆಹಲಿ: ಬಿಜೆಪಿ ಸಂಸದ, ಡಬ್ಲ್ಯುಎಫ್ಐ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ಸಹಾಯಕ ಸಂಜಯ್ ಸಿಂಗ್ ನೇತೃತ್ವದ ಭಾರತೀಯ ಕುಸ್ತಿ ಫೆಡರೇಷನ್ ಅನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತುಮಾಡಿದೆ.

ಇತ್ತೀಚೆಗಷ್ಟೇ ಕುಸ್ತಿ ಫೆಡರೇಷನ್ ಗೆ ನಡೆದ ಚುನಾವಣೆಯಲ್ಲಿ ಸಂಜಯ್ ಸಿಂಗ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಲೈಂಗಿಕ ಕಿರುಕುಳ ಆರೋಪ ಹೊಂದಿರುವ ಬ್ರಿಜ್ ಭೂಷಣ್ ಆಪ್ತರೇ ಮತ್ತೆ ಕುಸ್ತಿ ಫೆಡರೇಷನ್ ಚುಕ್ಕಾಣಿ ಹಿಡಿದಿದ್ದರಿಂದ ಭಾರತದ ಖ್ಯಾತ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಮುಂತಾದವರು ತೀವ್ರ ಪ್ರತಿಭಟನೆ ನಡೆಸಿದ್ದರು.

ಅಲ್ಲದೆ, ಬಜರಂಗ್ ಪೂನಿಯಾ ತಮಗೆ ನೀಡಲಾಗಿದ್ದ ಪದ್ಮ ಪ್ರಶಸ್ತಿಯನ್ನು ವಾಪಸ್ ಮಾಡಿ ಪ್ರತಿಭಟನೆ ಸಲ್ಲಿಸಿದ್ದರು. ಇದೀಗ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕುಸ್ತಿ ಫೆಡರೇಷನ್ ಒಕ್ಕೂಟದ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಕಾರಣಕ್ಕೆ ಕೇಂದ್ರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದೆ.

ಕಳೆದ ಒಂದು ವರ್ಷದಿಂದ ಲೈಂಗಿಕ ಕಿರುಕುಳ ಆರೋಪ, ಪ್ರತಿಭಟನೆಗಳಿಂದಾಗಿ ಕುಸ್ತಿ ಫೆಡರೇಷನ್ ಸುದ್ದಿಯಲ್ಲಿದೆ. ಇದೀಗ ನಿಯಮಾವಳಿಗಳ ಉಲ್ಲಂಘನೆ ನೆಪ ನೀಡಿದ್ದರೂ ಆರೋಪಿತ ಹಳೆಯ ಪದಾಧಿಕಾರಿಗಳೇ ಮತ್ತೆ ಪರೋಕ್ಷವಾಗಿ ಆಡಳಿತ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದೂ ಈ ಅಮಾನತಿಗೆ ಕಾರಣ ಎನ್ನಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ