ಪಾಕಿಸ್ತಾನದ ಕ್ರಿಕೆಟ್ ಅವನತಿಯ ಅಂಚಿಗೆ: ವಾಖರ್ ಎಚ್ಚರ

ಮಂಗಳವಾರ, 24 ಮಾರ್ಚ್ 2015 (16:57 IST)
2009ರಿಂದೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಗಳು ಪಾಕಿಸ್ತಾನ ಪ್ರವಾಸ ಮಾಡದೇ ನಿಷೇಧ ವಿಧಿಸಿದ್ದರಿಂದ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಟ ಅವನತಿಯ ಅಂಚಿಗೆ ತಲುಪಬಹುದು ಎಂದು ಯೂನಿಸ್ ಮಂಗಳವಾರ ಎಚ್ಚರಿಸಿದ್ದಾರೆ
 2009ರ ಮಾರ್ಚ್‌ನಲ್ಲಿ ಶ್ರೀಲಂಕಾ ತಂಡದ ಮೇಲೆ ಲಾಹೋರ್‌ನಲ್ಲಿ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿದಾಗಿನಿಂದ ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯುತ್ತಿಲ್ಲ.  ಉಗ್ರರ ಗುಂಡಿನ ದಾಳಿಯಲ್ಲಿ 8 ಜನರು ಸತ್ತಿದ್ದು ಕೆಲವು ಪ್ರವಾಸಿ ಆಟಗಾರರಿಗೂ ಗಾಯಗಳಾಗಿದ್ದವು.
 
ಈ ಘಟನೆಯಿಂದ ನಾವು ಅಂತಾರಾಷ್ಟ್ರೀಯ ಪಂದ್ಯಗಳನ್ನು ನಿಯೋಜಿಸಲು ಸಾಧ್ಯವಾಗದಿರುವುದು ಅತೀ ನೋವಿನ ಸಂಗತಿ ಎಂದು ಪಾಕಿಸ್ತಾನ ಮುಖ್ಯ ಕೋಚ್ ವಾಖರ್ ಯೂನಿಸ್ ತಿಳಿಸಿದರು. 
 
ಕಿರಿಯರ ಮಟ್ಟದಲ್ಲಿ ಪ್ರತಿಭಾಶಾಲಿ ಕ್ರಿಕೆಟಿಗರ ಕೊರತೆ ಇರುವುದರಿಂದ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಟವು ನಶಿಸಬಹುದು ಎಂದು ಭಯವನ್ನು ಅವರು ವ್ಯಕ್ತಪಡಿಸಿದರು. ಮಕ್ಕಳಿಗೆ ಕೂಡ ಕ್ರಿಕೆಟ್ ಆಡುವಂತೆ ಪ್ರೇರೇಪಿಸುವುದು ಕಠಿಣವಾಗಿದೆ. ಆದ್ದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಟವನ್ನು ಪುನಃ ಪಾಕ್‌ಗೆ ತರುವುದು ಮುಖ್ಯ ಅಂಶವಾಗಿದ್ದು,  ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ನೆರವು ನೀಡಬೇಕು ಎಂದರು. 
 
ಏಕದಿನ ಸರಣಿಗೆ ಕ್ರಿಕೆಟ್ ಶಿಶುಗಳಾದ ಕೀನ್ಯಾವನ್ನು ಕಳೆದ ವರ್ಷ ತರುವುದರಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಯಶಸ್ವಿಯಾಗಿತ್ತು.  ಈ ವರ್ಷ ಮೇನಲ್ಲಿ ಕೂಡ ಜಿಂಬಾಬ್ವೆಯ ಪ್ರವಾಸಕ್ಕೆ ಮಾತುಕತೆ ನಡೆಸುತ್ತಿದೆ.  ವಿಶ್ವಕಪ್ ಕ್ವಾರ್ಟರ್‌ಫೈನಲ್‌ನಲ್ಲಿ  ಆಸ್ಟ್ರೇಲಿಯಾ ಕೈಯಲ್ಲಿ ಪಾಕ್ ಸೋಲಿನಿಂದ ದೇಶದ ಕ್ರಿಕೆಟ್ ವ್ಯವಸ್ಥೆ ಮತ್ತು ಮೂಲಸೌಲಭ್ಯದಲ್ಲಿ ಕಠಿಣ ಶ್ರಮ ಪಡಬೇಕಾದ ಅಗತ್ಯವನ್ನು ಸಾರಿಹೇಳಿದೆ ಎಂದು ವಾಖರ್ ಹೇಳಿದ್ದಾರೆ.

ನಾವು ಪಾಕಿಸ್ತಾನ ಕ್ರಿಕೆಟ್ ಉಳಿಸಬೇಕಾದರೆ ದೇಶೀಯ ಆಟವನ್ನು ಮೇಲೆತ್ತಬೇಕಾಗಿದೆ. ಏಕೆಂದರೆ ನಾವು ಉಳಿದ ತಂಡಗಳಿಗಿಂತ ಹಿಂದುಳಿದಿದ್ದೇವೆ ಎಂದು ಹೇಳಿದರು. ಕ್ರಿಕೆಟ್ ವೇಗದಲ್ಲಿ ಬದಲಾವಣೆಯಾಗುತ್ತಿದ್ದು, ಆ ವೇಗದ ಗತಿಗೆ ನಾವು ಹೊಂದಿಕೊಳ್ಳದಿದ್ದರೆ ಹಿಂದುಳಿಯುತ್ತೇವೆ ಎಂದೂ ವಾಖರ್ ಹೇಳಿದರು. 
 
ಉಳಿದ ತಂಡಗಳಲ್ಲಿರುವಂತೆ 300 ಪ್ಲಸ್ ರನ್ ಸ್ಕೋರ್ ಮಾಡಬಲ್ಲ ಹಿಟ್ಟರ್‌ಗಳ ಅಗತ್ಯ ನಮಗೆ ಬೇಕಾಗಿದೆ ಎಂದು ವಾಖರ್ ಹೇಳಿದರು.  ವಿಶ್ವಕಪ್‌ನ 7 ಪಂದ್ಯಗಳ ಪೈಕಿ ಯುಎಇ ವಿರುದ್ಧ ಮಾತ್ರ ಪಾಕ್ 300 ರನ್ ಗಡಿಯನ್ನು ದಾಟಿತ್ತು.ಬೌಲಿಂಗ್ ನಮಗೆ ಸಮಸ್ಯೆಯಾಗಿ ಉಳಿದಿಲ್ಲ. ಆದರೆ ಬ್ಯಾಟಿಂಗ್ ಬಗ್ಗೆ ನಾವು ತಿಣುಕಾಡುತ್ತಿದ್ದು, ಮಿಷಬ್ ಉಲ್ ಹಕ್ ಮತ್ತು ಯೂನಿಸ್ ಖಾನ್ ಬಳಿಕ ನಾವು ದೊಡ್ಡ ಶೂನ್ಯವನ್ನು ಎದುರಿಸಿದ್ದೇವೆ ಎಂದು ವಾಖರ್ ಹೇಳಿದರು.  

ವೆಬ್ದುನಿಯಾವನ್ನು ಓದಿ