ರಾಹುಲ್‌, ಮಿಲ್ಲರ್‌ ಹೋರಾಟಕ್ಕೆ ಸಿಗದ ಗೆಲುವು; ಗುಜರಾತ್‌ಗೆ ರೋಚಕ ಒಂದು ರನ್‌ ಗೆಲುವು

Sampriya

ಬುಧವಾರ, 8 ಏಪ್ರಿಲ್ 2026 (23:55 IST)
Photo Courtesy X
ನವದೆಹಲಿ: ಕೊನೆಯ ಎಸೆತದವರೆಗೆ ಕುತೂಹಲ ಮೂಡಿಸಿದ್ದ ಐಪಿಎಲ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್ ತಂಡವು 1 ರನ್‌ಗಳ ರೋಚಕ ಜಯ ದಾಖಲಿಸಿತು. ಕನ್ನಡಿಗ ಕೆ.ಎಲ್‌ ರಾಹುಲ್‌ ಹಾಗೂ ಡೇವಿಡ್‌ ಮಿಲ್ಲರ್‌ ಬ್ಯಾಟಿಂಗ್‌ ಸಾಹಸದ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಸೋಲು ಅನುಭವಿಸಿತು.

ರೋಚಕ ಗೆಲುವು ಸಾಧಿಸಿದ ಗುಜರಾತ್‌ ಟೈಟಾನ್ಸ್‌ ಹಾಲಿ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಿತು. ಹ್ಯಾಟ್ರಿಕ್‌ ಗೆಲುವಿನ ವಿಶ್ವಾಸದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಮೊದಲ ಸೋಲಿಗೆ ತುತ್ತಾಯಿತು.

ಟಾಸ್‌ ಗೆದ್ದ ಡೆಲ್ಲಿ ಬೌಲಿಂಗ್‌ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್‌ ನಡೆಸಿದ ಗುಜರಾತ್‌ ಟೈಟಾನ್ಸ್‌, ಬಿರುಸಿನ ಬ್ಯಾಟಿಂಗ್‌ ನಡೆಸಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 210 ರನ್‌ ಬಾರಿಸಿತು. ಡೆಲ್ಲಿ ತಂಡ ಕೊನೆಯ ಎಸೆತದ ತನಕ ಹೋರಾಡಿ 8 ವಿಕೆಟ್‌ಗೆ 209 ರನ್‌ ಗಳಿಸಿ ವಿರೋಚಿತ ಸೋಲು ಕಂಡಿತು.

ಚೇಸಿಂಗ್‌ ವೇಳೆ ಡೆಲ್ಲಿ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ಕೆ.ಎಲ್‌ ರಾಹುಲ್‌ ಮತ್ತು ಪಾತುಮ್ ನಿಸ್ಸಂಕ ಮೊದಲ ವಿಕೆಟ್‌ಗೆ 76 ಒಟ್ಟುಗೂಡಿಸಿತು. ಉತ್ತಮವಾಗಿ ಬ್ಯಾಟ್‌ ಬೀಸುತ್ತಿದ್ದ ಈ ಜೋಡಿಯನ್ನು ಪ್ರಸಿದ್ಧ್‌ ಕೃಷ್ಣ ಬೇರ್ಪಡಿಸಿದರು. 41 ರನ್‌ ಗಳಿಸಿದ ನಿಸ್ಸಂಕ ರಾಹುಲ್‌ ತೆವಾಟಿಯಗೆ ಕ್ಯಾಚ್‌ ನೀಡಿ ವಿಕೆಟ್‌ ಕಳೆದುಕೊಂಡರು. ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್‌ ಆರಂಭಿಸಿದ ರಾಹುಲ್‌ ಆ ಬಳಿಕ ಬಿರುಸಿನ ಬ್ಯಾಟಿಂಗ್‌ಗೆ ಒಗ್ಗಿಕೊಂಡರು. 17 ಓವರ್‌ ತನಕ ಬ್ಯಾಟಿಂಗ್‌ ನಡೆಸಿ 92 ರನ್‌ ಬಾರಿಸಿ ವಿಕೆಟ್‌ ಕಳೆದುಕೊಂಡರು.

ರಿಟರ್ಡ್‌ ಹರ್ಟ್‌ ಆಗಿದ್ದ ಡೇಮಿಡ್‌ ಮಿಲ್ಲರ್‌ ಮತ್ತೆ ಬ್ಯಾಟಿಂಗ್‌ಗೆ ಬಂದು ಸಿಡಿಲಬ್ಬರ ಬ್ಯಾಟಿಂಗ್‌ ನಡೆಸಿದರು. ಸಿರಾಜ್‌ ಎಸೆದ 19ನೇ ಓವರ್‌ನಲ್ಲಿ 2 ಸಿಕ್ಸರ್‌ ಮತ್ತು ಒಂದು ಬೌಂಡರಿ ಸಿಡಿಸಿದರು. ವಿಪ್ರಜ್‌ ನಿಗಮ್‌ ಒಂದು ಬೌಂಡರಿ ಬಾರಿಸಿದರು. ಈ ಓವರ್‌ನಲ್ಲಿ 23 ರನ್‌ ದೋಚಿದ ಡೆಲ್ಲಿ ಗೆಲುವಿನ ಆಸೆಯನ್ನು ಮತ್ತೆ ಜೀವಂತವಿರಿಸಿತು. ಅಂತಿಮ ಓವರ್‌ನಲ್ಲಿ 14 ರನ್‌ ತೆಗೆಯುವ ಸವಾಲಿನಲ್ಲಿ ಎಡವಿತು. ಡೆಲ್ಲಿಗೆ ಗೆಲುವಿನ ಆಸೆ ಹುಟ್ಟಿಸಿದ ಮಿಲ್ಲರ್‌ ಕೊನೆಗೆ ಕಿಲ್ಲರ್‌ ಆಗಿ ಪರಿಣಮಿಸಿದರು. 2 ಎಸೆತದಲ್ಲಿ 2 ರನ್‌ ಬೇಕಿದ್ದಾಗ ಒಂದು ರನ್‌ ಓಡದೆ ಇದದ್ದು ಸೋಲಿಗೆ ಕಾರಣವಾಯಿತು. ಅವರು ಒಂದು ರನ್‌ ಓಡಿದ್ದರೆ ಪಂದ್ಯ ಟೈ ಆಗುತ್ತಿತ್ತು. ಒಂದು ರನ್‌ ಉಳಿಸಿದ ಪ್ರಸಿದ್ಧ್‌ ಕೃಷ್ಣ ಗುಜರಾತ್‌ ಪಾಲಿಗೆ ಗೆಲುವಿನ ಹೀರೋ ಎನಿಸಿದರು. 

ಇದಕ್ಕೂ ಮೊದಲು ಬ್ಯಾಟಿಂಗ್‌ ನಡೆಸಿದ ಗುಜರಾತ್‌ ಪರ ಬಟ್ಲರ್‌, ಗಿಲ್‌ ಮತ್ತು ಸುಂದರ್‌ ಅರ್ಧಶತಕ ಬಾರಿಸಿ ಮಿಂಚಿದರು. ಜೋಶ್‌ನಿಂದಲೇ ಬ್ಯಾಟಿಂಗ್‌ ನಡೆಸಿದ ಜಾಸ್‌ ಬಟ್ಲರ್‌ ಡೆಲ್ಲಿ ಬೌಲರ್‌ಗಳ ಮೇಲೆ ಸವಾರಿ ನಡೆಸಿ 24 ಎಸೆತದಲ್ಲಿ ಅರ್ಧಶತಕ ಬಾರಿಸಿದರು. ಒಟ್ಟು 27 ಎಸೆತಗಳಿಂದ 5 ಸಿಕ್ಸರ್‌ ಮತ್ತು 3 ಬೌಂಡರಿ ನೆರವಿನಿಂದ 52 ರನ್‌ ಗಳಿಸಿ ಕುಲ್‌ದೀಪ್‌ ಯಾದವ್‌ಗೆ ವಿಕೆಟ್‌ ಒಪ್ಪಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ