ಲಖನೌ: ಭಾರತ ತಂಡದ ಅನುಭವಿ ಸ್ಪಿನ್ನರ್ ಕುಲದೀಪ್ ಯಾದವ್ ಇದೇ ಶನಿವಾರ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ. ಮಾರ್ಚ್ 14 ರಂದು ಮಸ್ಸೂರಿಯ ರೆಸಾರ್ಟ್‌ನಲ್ಲಿ ತಮ್ಮ ಬಾಲ್ಯದ ಗೆಳತಿ ವಂಶಿಕಾ ಅವರೊಂದಿಗೆ ವಿವಾಹವಾಗಲಿದ್ದಾರೆ.
ಟಿ20 ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಕುಲದೀಪ್ ಅವರ ಮದುವೆಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದೆ. ಈ
ವಿವಾಹ ಕಾರ್ಯಕ್ರಮಕ್ಕೆ ಗಣ್ಯರನ್ನು ಆಹ್ವಾನಿಸಲಾಗಿದೆ. ಭಾರತದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾಗವಹಿಸುವ ಸಾಧ್ಯತೆಯಿದೆ.
ಕೊಹ್ಲಿ, ರೋಹಿತ್ ಮತ್ತು ವೇಗಿ ಜಸ್‌ಪ್ರೀತ್ ಬುಮ್ರಾ ಸೇರಿದಂತೆ ಹಲವಾರು ಕ್ರಿಕೆಟಿಗರು ದಂಪತಿ ಸಮೇತವಾಗಿ ನಿರೀಕ್ಷೆಯಿದೆ. ಕುಲದೀಪ್ ಮದುವೆಗಾಗಿ ಇಡೀ ಹೋಟೆಲ್ ಅನ್ನು ಬುಕ್ ಮಾಡಲಾಗಿದೆ. ದಿ ಸವೊಯ್‌ನಲ್ಲಿ ಸುಮಾರು 80 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ಹೋಟೆಲ್ ಆಡಳಿತ ಮಂಡಳಿ ದೃಢಪಡಿಸಿದೆ.
ಕುಲದೀಪ್ ಯಾದವ್ ಭಾವಿ ಪತ್ನಿ ವಂಶಿಕಾ ಅವರು ಲಕ್ನೋದ ಶ್ಯಾಮ್ ನಗರದ ನಿವಾಸಿಯಾಗಿದ್ದಾರೆ. ಪ್ರಸ್ತುತ ಅವರು ಎಲ್ ಐಸಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಕುಲದೀಪ್ ಯಾದವ್ ಮತ್ತು ವಂಶಿಕಾ ಬಾಲ್ಯದಿಂದಲೂ ಸ್ನೇಹಿತರಾಗಿದ್ದರು. ಕಳೆದ ವರ್ಷ ಜೂನ್ 4ರಂದು ಕಾನ್ಪುರದಲ್ಲಿ ವಂಶಿಕಾ ಅವರೊಂದಿಗೆ ಕುಲ್‌ದೀಪ್ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಮಾರ್ಚ್ 17ರಂದು ಲಖನೌದಲ್ಲಿ ಆರತಕ್ಷತೆ ಕಾರ್ಯಕ್ರಮ ನಿಗದಿಯಾಗಿದ್ದು, ಇದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಆಹ್ವಾನ ನೀಡಲಾಗಿದೆ. ಕಳೆದ ವರ್ಷ ನವೆಂಬರ್ನಲ್ಲೇ ಅವರ ವಿವಾಹ ನಿಗದಿಯಾಗಿತ್ತು. ಆದರೆ ಕುಲದೀಪ್ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ವಿವಾಹವನ್ನು ಮುಂದೂಡಲಾಗಿತ್ತು.