ಯಾಸಿರ್ ಶಾಹ್ ಮನೋಜ್ಞ ಬೌಲಿಂಗ್: ಇಂಗ್ಲೆಂಡ್ ಸೋಲಿಸಿದ ಪಾಕ್, ಸರಣಿ 2-2ರಿಂದ ಡ್ರಾ
ಸೋಮವಾರ, 15 ಆಗಸ್ಟ್ 2016 (14:29 IST)
ಯಾಸಿರ್ ಶಾಹ್ ತಮ್ಮ ಮೊನಚಿನ ಬೌಲಿಂಗ್ ದಾಳಿ ಮೂಲಕ 5 ವಿಕೆಟ್ ಕಬಳಿಸಿದ್ದರಿಂದ ಪಾಕಿಸ್ತಾನ ದೇಶದ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ ಕುರುಹಾಗಿ ನಾಲ್ಕನೇ ಟೆಸ್ಟ್‌ನಲ್ಲಿ 10 ವಿಕೆಟ್‌ಗಳಿಂದ ಜಯಗಳಿಸಿದೆ. ಈ ಜಯದಿಂದ ಪಾಕಿಸ್ತಾನ ಸರಣಿಯನ್ನು 2-2ರಿಂದ ಸಮಮಾಡಿಕೊಂಡಿದ್ದು, ಇದೇ ಓವಲ್ ಮೈದಾನದಲ್ಲಿ ಅವರು ಮೊದಲ ಟೆಸ್ಟ್ ಪಂದ್ಯವನ್ನು 1954ರಲ್ಲಿ ಗೆದ್ದಿತ್ತು.
88ಕ್ಕೆ 4 ವಿಕೆಟ್ ಕಳೆದುಕೊಂಡು ಆಡುತ್ತಿದ್ದ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 253ಕ್ಕೆ ಆಲೌಟ್ ಆಗಿದೆ. ಯಾಸಿರ್ ಶಾಹ್ 29 ಓವರುಗಳಲ್ಲಿ ಐದಕ್ಕೆ 71 ರನ್ ನೀಡಿದ್ದು, ಜಾನ್ ಬೇರ್‌ಸ್ಟೋ 81 ರನ್ ಟಾಪ್ ಸ್ಕೋರ್ ಮಾಡಿದ್ದಾರೆ.
ಇದರಿಂದ ಪಾಕಿಸ್ತಾನ ತಂಡಕ್ಕೆ ಜಯಗಳಿಸಲು ಬೇಕಾಗಿದ್ದ ಕೇವಲ 40 ರನ್‌ಗಳನ್ನು ಸುಲಭವಾಗಿ ಗುರಿಮುಟ್ಟಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಯುನಿಸ್ ಖಾನ್ (218) ಮತ್ತು ಅಸದ್ ಶಫೀಕ್ (109) ರನ್ ನೆರವಿನಿಂದ 542 ಸುಭದ್ರ ಮೊದಲ ಇನ್ನಿಂಗ್ಸ್ ಸ್ಕೋರ್ ಮಾಡಿತ್ತು.
ಈ ಜಯದಿಂದಾಗಿ ಪಾಕಿಸ್ತಾನವು ವಿಶ್ವ ಟೆಸ್ಟ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿದ್ದು, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಫಲಿತಾಂಶ ಅವರಿಗೆ ಅನುಕೂಲವಾದರೆ ಅವರು ನಂಬರ್ ಒನ್ ಸ್ಥಾನಕ್ಕೇರುವ ಸಾಧ್ಯತೆಯಿದೆ.