ಹಿಂದೂ ವ್ಯಕ್ತಿ ನಿತಾಯಿ ರಾಯ್ ಚೌಧರಿಗೆ ಖುಲಾಯಿಸಿದ ಅದೃಷ್ಟ: ಬಾಂಗ್ಲಾ ಸಂಪುಟದಲ್ಲಿ ಮಹತ್ವದ ಖಾತೆ

Sampriya

ಬುಧವಾರ, 18 ಫೆಬ್ರವರಿ 2026 (19:25 IST)
Photo Credit X
ಢಾಕಾ: ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷವು(ಬಿಎನ್‌ಪಿ) ಅಧಿಕಾರಕ್ಕೆ ಬಂದು ಪಕ್ಷದ ಅಧ್ಯಕ್ಷ ತಾರಿಖ್ ರೆಹಮಾನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಹಸೀನಾ ಅವರು ದೇಶಬಿಟ್ಟ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಸಂಸತ್ತಿನ 299 ಕ್ಷೇತ್ರಗಳ ಪೈಕಿ ಬಿಎನ್‌ಪಿ 212 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಫೆಬ್ರುವರಿ 12ರಂದು ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯೂ ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಿತು. ಈ ನಡುವೆ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂಸದರ ಪೈಕಿ ಏಕೈಕ ಹಿಂದೂ ನಿತಾಯಿ ರಾಯ್ ಚೌಧುರಿ. ಬಿಎನ್‌ಪಿಯ ಉಪಾಧ್ಯಕ್ಷರಾಗಿರುವ ಚೌಧರಿ, ಮಗುರಾ–2 ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

1949ರ ಜನವರಿ 7ರಂದು ಬಾಂಗ್ಲಾದ ಮಗುರಾ ಜಿಲ್ಲೆಯ ಹಟಬಾರಿಯಾ ಎಂಬ ಗ್ರಾಮದಲ್ಲಿ ಜನಿಸಿದ ಚೌಧುರಿ, ಅಲೋಕ್‌ಡಿಯಾ ಪುಖುರಿಯಾ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮುಗಿಸಿದ್ದರು. ಬಳಿಕ, ಮಗುರಾದ ಸರ್ಕಾರಿ ಕಾಲೇಜಿನಲ್ಲಿ ಪದವಿ ಪಡೆದಿದ್ದರು. 

ಢಾಕಾ ವಿಶ್ವವಿದ್ಯಾಲಯದಲ್ಲಿ ಕಾನೂನು ಸ್ನಾತಕೋತ್ತರ ಪದವಿ ಪಡೆದರು. ಝುಮಾ ಎಂಬುವವರನ್ನು ವಿವಾಹವಾಗಿದ್ದ ಚೌಧುರಿ, ಮೂರು ಮಕ್ಕಳನ್ನು ಹೊಂದಿದ್ದಾರೆ. ಅವರ ಮಗ ದೇಬಶಿಶ್ ರಾಯ್ ಚೌಧುರಿ ಬಾಂಗ್ಲಾದೇಶ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದಾರೆ.

ಅವರ ಮಗಳು ನಿಪುಣ್ ರಾಯ್ ಚೌಧುರಿ ಬಿಎನ್‌ಪಿ ಪಕ್ಷದಲ್ಲಿ ತೊಡಗಿಸಿಕೊಂಡಿದ್ದು, ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿದ್ದಾರೆ. ಬಿಎನ್‌ಪಿಯ ಹಿರಿಯ ನಾಯಕ ಗಯೇಶ್ವರ್ ಚಂದ್ರ ರಾಯ್ ಅವರ ಮಗ ಅಮಿತಾವ್ ರಾಯ್ ಅವರನ್ನು ವಿವಾಹವಾಗಿದ್ದಾರೆ.

1990ರಲ್ಲಿ ಹುಸೇನ್ ಮುಹಮ್ಮದ್ ಇರ್ಶಾದ್ ಸರ್ಕಾರದಲ್ಲಿ ಯುವಜನ ಮತ್ತು ಕ್ರೀಡಾ ಸಚಿವರಾಗಿದ್ದ ಚೌಧರಿ, ಇರ್ಶಾದ್ ಜಮಾನ ಮುಗಿದ ಬಳಿಕ ಬಿಎನ್‌ಪಿ ಸೇರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ