ಕದನ ವಿರಾಮ ಬೆನ್ನಲ್ಲೇ ಇರಾನ್‌ನಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿಯಿಂದ ಮಹತ್ವದ ಸೂಚನೆ

Sampriya

ಬುಧವಾರ, 8 ಏಪ್ರಿಲ್ 2026 (18:36 IST)
Photo Credit X
ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ಇರಾನ್‌ನಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳಿಗೆ ಭಾರತೀಯ ರಾಯಭಾರ ಕಚೇರಿಯು ಬುಧವಾರ ಮಹತ್ವದ ಸೂಚನೆ ನೀಡಲಾಗಿದೆ.

ಇರಾನ್‌ನಲ್ಲಿರುವ ಎಲ್ಲ ಭಾರತೀಯರು ಕೂಡಲೇ ದೇಶವನ್ನು ತೊರೆಯುವಂತೆ ಈ ಮೂಲಕ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಮನ್ವಯ ಸಾಧಿಸಲು ರಾಯಭಾರ ಕಚೇರಿಯು ಕೆಲವು ಸಹಾಯವಾಣಿ ಸಂಖ್ಯೆಗಳನ್ನು ಸಹ ಪ್ರಕಟಿಸಿದೆ.

ಏಪ್ರಿಲ್ 7ರಂದು ನೀಡಿದ್ದ ಸೂಚನೆಯ ಮುಂದುವರಿದ ಭಾಗವಾಗಿ, ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇರಾನ್‌ನಲ್ಲಿರುವ ಭಾರತೀಯರು ರಾಯಭಾರ ಕಚೇರಿಯ ಮಾರ್ಗದರ್ಶನದೊಂದಿಗೆ ಶೀಘ್ರವಾಗಿ ದೇಶದಿಂದ ನಿರ್ಗಮಿಸಲು ಸೂಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ರಾಯಭಾರ ಕಚೇರಿಯೊಂದಿಗೆ ಮುಂಚಿತವಾಗಿ ಸಮಾಲೋಚನೆ ನಡೆಸದೆ ಯಾವುದೇ ಅಂತಾರಾಷ್ಟ್ರೀಯ ಭೂ ಗಡಿಗಳನ್ನು ಸಂಪರ್ಕಿಸಬಾರದು ಎಂದು ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ.

ಪ್ರಸ್ತುತ ಸಂಘರ್ಷ ಪೀಡಿತ ಪ್ರದೇಶಗಳಿಂದ ಹೊರಬರಲು ಬಯಸುವ ನಾಗರಿಕರನ್ನು ಉದ್ದೇಶಿಸಿ ಈ ಸಲಹೆ ನೀಡಲಾಗಿದೆ. ಕದನ ವಿರಾಮದಿಂದಾಗಿ ತಕ್ಷಣದ ಬಾಂಬ್ ದಾಳಿಯ ಭೀತಿ ಕಡಿಮೆಯಾಗಿರುವುದರಿಂದ, ದಕ್ಷಿಣದ ಬಂದರ್ ಅಬ್ಬಾಸ್‌ನಂತಹ ಸ್ಥಳಗಳಿಂದ ಅರ್ಮೇನಿಯಾ ಗಡಿಯವರೆಗೆ ಸುಮಾರು 1,500 ಕಿಲೋಮೀಟರ್ ಪ್ರಯಾಣಿಸಲು ಈಗ ಅನುಕೂಲ ಪರಿಸ್ಥಿತಿ ಇದೆ ಎಂದು ಹೇಳಲಾಗಿದೆ. ಸುಮಾರು 7,500 ಭಾರತೀಯರು ಇಂದಿಗೂ ಇರಾನ್‌ನಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ