ತರುಣ್ ನಟಿಸಿರುವ ಸೀನ ಚಿತ್ರದ ಧ್ವನಿಸುರುಳಿಯನ್ನು ಇತ್ತೀಚೆಗೆ ಬೆಲ್ ಹೊಟೇಲಿನಲ್ಲಿ ಆಯೋಜಿಸಲಾಗಿತ್ತು. ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ, ನಟಿ ತಾರಾ, ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಿದರು.
ಚಿತ್ರದ ಕಥೆ, ಸಂಭಾಷಣೆ, ಸಾಹಿತ್ಯ ನಿರ್ದೇಶನವನ್ನು ಬಸವರಾಜ ಬಳ್ಳಾರಿ ವಹಿಸಿಕೊಂಡಿದ್ದಾರೆ. ಇದೊಂದು ವಿಭಿನ್ನ ಚಿತ್ರ ಎನ್ನುವುದು ಬಸವರಾಜು ಅಭಿಪ್ರಾಯ. ಸಕಲೇಶಪುರ, ಹಂಪಿ, ಬಳ್ಳಾರಿಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಎ.ಟಿ.ರವೀಶ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಚಿತ್ರದಲ್ಲಿ ಆರು ಹಾಡುಗಳಿವೆ. ಕುನಾಲ್ ಗಾಂಜಾವಾಲಾ, ಹರಿಹರನ್, ಹರ್ಷಿಣಿ, ಅನುರಾಧ ಭಟ್ ಮೊದಲಾದವರು ಹಾಡಿದ್ದಾರೆ. ಹಾಡುಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಮಾಡಲಾಗಿದೆ ಎಂದರು ಬಸವರಾಜು.
ನಾಯಕ ತರುಣ್‌ಗೆ ಇದು ನಾಲ್ಕನೇ ಚಿತ್ರ. ಚಿತ್ರದ ಹಾಸ್ಯ ಪಾತ್ರದಲ್ಲಿ ಸಾಧು ಕೋಕಿಲ ಕಾಣಿಸಿಕೊಂಡಿದ್ದಾರೆ. ಅನಾಥ ಮಕ್ಕಳನ್ನು ಆಧಾರವಾಗಿಟ್ಟುಕೊಂಡು ಮಾಡಿದ ಸಿನಿಮಾ ಇದು. ಚಿತ್ರದಲ್ಲಿ ತುಂಬಾ ಒಳ್ಳೆಯ ಸಂದೇಶ ಇದೆ. ಕಾಮಿಡಿಯೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದರು.
ಬರುವ ಫೆಬ್ರವರಿಯಲ್ಲಿ ಅಪ್ಪಟ ಕನ್ನಡ ಆಡಿಯೋ ಕಂಪೆನಿಯೊಂದನ್ನು ಕನ್ನಡ ರಕ್ಷಣಾ ವೇದಿಕೆ ಆರಂಭಿಸಲಿದೆ ಎಂದು ನಾರಾಯಣಗೌಡ ಹೇಳಿದರು.