ನಟ ವಿಜಯ್‌ಗೆ ಐಟಿ ಇಲಾಖೆಯಿಂದ 1.5 ಕೋಟಿ ದಂಡ: ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ದಳಪತಿ

Sampriya

ಬುಧವಾರ, 24 ಸೆಪ್ಟಂಬರ್ 2025 (18:46 IST)
Photo Credit X
ಚೆನ್ನೈ: ಆದಾಯ ತೆರಿಗೆ ವಿಧಿಸಿದ ದಂಡವನ್ನು ಪ್ರಶ್ನಿಸಿ ಕಾಲಿವುಡ್‌ ನಟ-ರಾಜಕಾರಣಿ ವಿಜಯ್ ಅವರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

2015-16ರ ವಿತ್ತವರ್ಷದಲ್ಲಿ ಆದಾಯವನ್ನು ಮರೆಮಾಚಿದ್ದ ಆರೋಪದಲ್ಲಿ ಆದಾಯ ತೆರಿಗೆ (ಐಟಿ)ಇಲಾಖೆಯು ತನಗೆ ವಿಧಿಸಿರುವ ₹ 1.5 ಕೋಟಿ ದಂಡವನ್ನು ಪ್ರಶ್ನಿಸಿ ವಿಜಯ್ ಅವರು ಮದ್ರಾಸ್ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ವಿಜಯ್‌ ಅವರು 2015-16ರ ಸಾಲಿಗಾಗಿ ₹ 35.42 ಕೋಟಿ ಆದಾಯವನ್ನು ಘೋಷಿಸಿದ್ದರು. ಆದಾಗ್ಯೂ ಪುಲಿ ಚಿತ್ರದಿಂದ ಗಳಿಸಿದ್ದ ₹ 15 ಕೋಟಿ ಆದಾಯವನ್ನು ಅವರು ಬಹಿರಂಗಗೊಳಿಸಿರಲಿಲ್ಲ. 2015ರಲ್ಲಿ ಅವರ ನಿವಾಸದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಈ ಅಘೋಷಿತ ಆದಾಯ ಬೆಳಕಿಗೆ ಬಂದಿತ್ತು ಎಂದು ಹೇಳಲಾಗಿದೆ.

ದಾಳಿಯ ಸಮಯದಲ್ಲಿ ಅಧಿಕಾರಿಗಳು ಪುಲಿ  ಚಿತ್ರದ ನಿರ್ಮಾಪಕರಾದ ಪಿ.ಟಿ.ಸೆಲ್ವಕುಮಾರ ಮತ್ತು ಶಿಬು ವಿಜಯಗೆ ₹ 4.93 ಕೋಟಿ ನಗದು ಮೂಲಕ ಮತ್ತು ₹ 16 ಕೋಟಿ ಚೆಕ್ ರೂಪದಲ್ಲಿ ನೀಡಿದ್ದರು ಎನ್ನುವುದನ್ನು ಸೂಚಿಸುವ ದಾಖಲೆಗಳನ್ನು ಪತ್ತೆ ಹಚ್ಚಿದ್ದರು. 

ವಿಚಾರಣೆಯ ಬಳಿಕ ₹ 15 ಕೋಟಿಗಳ ಆದಾಯವನ್ನು ಘೋಷಿಸದಿದ್ದನ್ನು ಮತ್ತು ಅದಕ್ಕೆ ತೆರಿಗೆಯನ್ನು ಪಾವತಿಸಲು ವಿಜಯ ಒಪ್ಪಿಕೊಂಡಿದ್ದರು.

ಬಳಿಕ ಇಲಾಖೆಯು ಜೂ.30,2022ರ ಆದೇಶದ ಮೂಲಕ ವಿಜಯಗೆ ₹ 1.5 ಕೋಟಿ ದಂಡವನ್ನು ವಿಧಿಸಿತ್ತು. ಇದನ್ನು ಪ್ರಶ್ನಿಸಿದ್ದ ಟಿವಿಕೆ ಸ್ಥಾಪಕ ವಿಜಯ್, ಆದೇಶವು ಕಾಲಮಿತಿಯನ್ನು ಮೀರಿದೆ, ಹೀಗಾಗಿ ಅದು ಅಸಿಂಧುವಾಗಿದೆ ಎಂದು ವಾದಿಸಿದ್ದರು. ದಂಡವನ್ನು ಜೂ.30,2018ರ ಮೊದಲು ವಿಧಿಸಬೇಕಾಗಿತ್ತು ಎಂದು ಅವರ ವಕೀಲರು ಪ್ರತಿಪಾದಿಸಿದ್ದರು.

ಈ ಮೊದಲು 2022ರಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯವು ದಂಡ ಆದೇಶಕ್ಕೆ ಮಧ್ಯಂತರ ತಡೆಯನ್ನು ನೀಡಿತ್ತು. ಮಂಗಳವಾರ ವಿಜಯ ಪರ ವಕೀಲರು ವಿಳಂಬಿತ ಆದೇಶವನ್ನು ರದ್ದುಗೊಳಿಸಬೇಕು ಎಂದು ಉಚ್ಚ ನ್ಯಾಯಾಲಯದಲ್ಲಿ ಪುನರುಚ್ಚರಿಸಿದರು.

ಇದನ್ನು ವಿರೋಧಿಸಿದ ಆದಾಯ ತೆರಿಗೆ ಇಲಾಖೆಯು 2022ರ ಆದೇಶವು ಕಾಲಮಿತಿಯೊಳಗೇ ಇತ್ತು,ಹೀಗಾಗಿ ಅದನ್ನು ಎತ್ತಿ ಹಿಡಿಯಬೇಕು ಮತ್ತು ವಿಜಯ ಅರ್ಜಿಯನ್ನು ವಜಾಗೊಳಿಸಬೇಕು ಎಂದು ವಾದಿಸಿದ್ದರು.. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ