ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ರಾಮಧಾನ್ಯ, ಅಬ್ಬರ, ಮಿ. ಬ್ಯಾಚುಲರ್, ಫ್ಲರ್ಟ್ ಇನ್ನಿತರ ಸಿನಿಮಾಗಳಲ್ಲಿ ನಟಿಸಿರುವ ನಿಮಿಕಾ ರತ್ನಾಕರ್ ಅವರು ಸದ್ದಿಲ್ಲದೆ ಹಸೆಮಣೆಯೇರಿದ್ದಾರೆ.
2018ರಲ್ಲಿ ನಟಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಿಮಿಕಾ ರತ್ನಾಕರ್. ರಾಮಧಾನ್ಯ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಆನಂತರ ಹೆಚ್ಚು ಜನಪ್ರಿಯತೆ ಗಳಿಸಿದ್ದು ಕ್ರಾಂತಿ ಚಿತ್ರದ ʻಶೇಕ್ ಇಟ್ ಪುಷ್ಪವತಿʼ ಹಾಡಿನಿಂದ. ಸದ್ಯ ನಿಮಿಕಾ ರತ್ನಾಕರ್ ಬಗ್ಗೆ ಮಾತನಾಡಲು ಕಾರಣ, ಅವರೀಗ ಸಪ್ತಪದಿ ತುಳಿದಿದ್ದಾರೆ.
ನಿಮಿಕಾ ರತ್ನಾಕರ್ ಅವರು ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರೂ, ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ದರ್ಶನ್ ತೂಗುದೀಪ ಅವರ ಕ್ರಾಂತಿ ಸಿನಿಮಾದ ಶೇಕ್ ಇಟ್ ಪುಷ್ಪವತಿ ಹಾಡು. ಈ ಒಂದು ಹಾಡಿನಲ್ಲಿ ಹೆಜ್ಜೆ ಹಾಕಿದ್ದರಿಂದ ಅವರನ್ನು ಸ್ಯಾಂಡಲ್‌ವುಡ್ ಪುಷ್ಪವತಿ ಎಂದೇ ಅಭಿಮಾನಿಗಳು ಕರೆಯುತ್ತಾರೆ.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿರುವ ನಿಮಿಕಾ, ಮಲ್ಲಿಗೆಯ ಪರಿಮಳ, ನಾದಸ್ವರದ ಧ್ವನಿ, ಮತ್ತು ಸಾವಿರಾರು ಹರಕೆಗಳ ಹಾರೈಕೆ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಅಂದಹಾಗೆ, ಇವರ ಮದುವೆಯು ಏಪ್ರಿಲ್ 6ರಂದು ನಡೆದಿದೆ. ಆದರೆ ಮದುವೆ ಆಗಿದ್ದು ಎಲ್ಲಿ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
ನಿಮಿಕಾ ರತ್ನಾಕರ್ ಮದುವೆ ಆಗಿರುವ ಹುಡುಗ ಯಾರು ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಅದಕ್ಕೆ ಇಲ್ಲಿದೆ ಉತ್ತರ. ನಿಮಿಕಾ ಅವರನ್ನು ಮದುವೆಯಾಗಿರುವ ಹುಡುಗ ಸಿನಿಮಾರಂಗದವರಲ್ಲ, ಉದ್ಯಮಿಯಾಗಿರುವ ಅವರು ಮುಂಬೈ ಮೂಲದವರು ಎಂಬುದು ಗೊತ್ತಾಗಿದೆ. ಆದರೆ ಅವರ ಹೆಸರು, ಇನ್ನಿತರ ಬಗ್ಗೆ ಮಾಹಿತಿಗಳನ್ನು ನಿಮಿಕಾ ಬಿಟ್ಟುಕೊಟ್ಟಿಲ್ಲ.
ಸದ್ಯ ʻವೈಲ್ಡ್ ಟೈಗರ್ ಸಫಾರಿʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಫೀನಿಕ್ಸ್ ಎಂಬ ಸಿನಿಮಾದಲ್ಲೂ ನಿಮಿಕಾ ನಟಿಸುತ್ತಿದ್ದು, ದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಇದರಲ್ಲಿ ನಿಮಿಕಾ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾರಂಗದಲ್ಲಿ ಬ್ಯುಸಿ ಇರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ವಿಶೇಷ.