ಹಾಸನ: ಕರ್ನಾಟಕದ ಕಾಂಗ್ರೆಸ್ ಸರಕಾರವು ನಾಳೆ ಸಾವಿರ ದಿನಗಳ ಸಂಭ್ರಮಾಚರಣೆಗೆ ಸಿದ್ಧವಾಗಿದೆ. ಸಾವಿರ ದಿನಗಳ ಕಾಂಗ್ರೆಸ್ ಸಂಭ್ರಮಾಚರಣೆ ಸಾವಿರಾರು ಸಮಸ್ಯೆಗಳ ಉಲ್ಬಣಕ್ಕೆ ಕಾರಣವಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.
ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ದರೋಡೆ ಹೆಚ್ಚಾಗಿದೆ. ಅತ್ಯಾಚಾರಗಳು, ಹತ್ಯೆಗಳು ಹೆಚ್ಚಾಗಿವೆ. ಈ ರೀತಿ ಪಟ್ಟಿ ಮಾಡುತ್ತ ಹೋದರೆ ಸಾವಿರಾರು ಹೇಳಬಹುದು. ಕೇವಲ 5 ಗ್ಯಾರಂಟಿ ಕೊಡುವುದಾಗಿ ಹೇಳುತ್ತಿರುವ ಸರಕಾರ ಲೂಟಿಗಿಳಿದಿದೆ ಎಂದು ಆರೋಪಿÀಸಿದರು.
ಗೃಹಲಕ್ಷ್ಮಿ ಯೋಜನೆಯಡಿ ರೂ. 2 ಸಾವಿರ ಕೊಡುವುದಾಗಿ ಹೇಳಿದ್ದರು. ಅದು ಸಕಾಲದಲ್ಲಿ ತಲುಪಿಲ್ಲವೆಂದು ಪ್ರಶ್ನಿಸಿದಾಗ, ಅದನ್ನು ತಿಂಗಳು ತಿಂಗಳು ನೀಡಲು ಸಂಬಳ ಅಲ್ಲವೆಂದು ಸಚಿವರು ಹೇಳುತ್ತಾರೆ ಎಂದು ಗಮನ ಸೆಳೆದರು. ಮತ್ತಿನ್ನೇನದು? ಯಾಕೆ ಕೊಟ್ಟಿದ್ದೀರಿ ನೀವು? ಎಂದು ಕೇಳಿದರು.
2025ರಲ್ಲಿ ಜನವರಿ, ಫೆಬ್ರವರಿಯದು ಯಾಕೆ ಕೊಟ್ಟಿಲ್ಲ ಎಂದು ಕೇಳಿದಾಗ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದರು. ಕಷ್ಟಪಟ್ಟು ಅಂಕಿ ಅಂಶ ಪಡೆದಿದ್ದೆವು. ಹಾರಿಕೆ ಉತ್ತರ ನೀಡಿದರು. ಜನವರಿ, ಫೆಬ್ರವರಿಯದು ಯಾಕೆ ಕೊಟ್ಟಿಲ್ಲ ಎಂದು ಮತ್ತೆ ಕೇಳಿದಾಗ ಉತ್ತರ ನೀಡಲಾಗದೇ ಸಿಕ್ಕಿ ಬಿದ್ದರು ಎಂದು ವಿವರಿಸಿದರು. ಗೃಹಲಕ್ಷ್ಮಿಯರಿಗೆ ಕೊಡದೇ ಇದ್ಯಾವ ಲಕ್ಷ್ಮಿಗೆ ಕೊಟ್ಟಿರಿ ಎಂದು ಕೇಳಿದ್ದೆವು. ಗೃಹಲಕ್ಷ್ಮಿಗೆ ಕೊಡದೇ ಹಣ ಹೋಗಿದ್ದು ಬೆಳಗಾವಿಯ ಲಕ್ಷ್ಮಿಗೆ ಎಂದು ಗೊತ್ತಾಗಿದೆ ಎಂಬುದಾಗಿ ಆರೋಪಿಸಿದರು.
ಸಚಿವರು ಸದನದಲ್ಲಿ ಕಣ್ತಪ್ಪಿನಿಂದ ಆಗಿದೆ; ನಾನು ಅಂದುಕೊಂಡಿದ್ದೆ; ಆದರೆ, ಹಣಕಾಸು ಇಲಾಖೆಯವರು ಬಿಡುಗಡೆ ಮಾಡಿಲ್ಲ ಎಂದಿದ್ದರು. ಇಂಥ ಉತ್ತರವನ್ನೂ ಕೊಡಬಹುದೇ ಎಂದು ಕೇಳಿದರು. ಅಂದರೆ ಇದು ಲೂಟಿ ಸರಕಾರ ಅಲ್ಲವೇ ಎಂದು ಪ್ರಶ್ನಿಸಿದರು.
ಪರಿಶಿಷ್ಟ ಜಾತಿ, ವರ್ಗಗಳಿಗೆ 42 ಸಾವಿರ ಕೋಟಿ ರೂ. ಹಣ ಇಟ್ಟಿದ್ದೇನೆ ಎಂದಿದ್ದರು. ಆದರೆ, ಅವರಿಗೆ ನಯಾಪೈಸೆ ಸಿಕ್ಕಿಲ್ಲ; ಗ್ಯಾರಂಟಿ ನನಗೂ ಫ್ರೀ, ನಿನಗೂ ಫ್ರೀ ಎಂದಿದ್ದ ಮುಖ್ಯಮಂತ್ರಿಗಳು ದಲಿತ ಸಮುದಾಯಗಳಿಗೆ ಗ್ಯಾರಂಟಿ ಹಣ ಕೊಟ್ಟಿಲ್ಲವೇಕೆ? ಇದುವರೆಗೂ ಕೊಟ್ಟಿಲ್ಲ ಎಂದು ದೂರಿದರು. ಎಲ್ಲರಿಗೂ ಖಜಾನೆ ಹಣ ಕೊಟ್ಟಿದ್ದು, ದಲಿತರಿಗೆ ಖಜಾನೆ ಹಣ ಕೊಟ್ಟಿಲ್ಲ ಎಂದು ಟೀಕಿಸಿದರು.
ಅದನ್ನು ಪ್ರಶ್ನಿಸಿದಾಗ 42 ಸಾವಿರ ಕೋಟಿ ಅವರಿಗೆ ಪ್ರತ್ಯೇಕ ಇಟ್ಟಿದ್ದರಿಂದ ಕೊಡುವುದಾಗಿ ಹೇಳಿದರು. ಅದು ಗ್ಯಾರಂಟಿ ಹಣ ಆಗುವುದಿಲ್ಲ. ಅವರ ಅಭ್ಯುದಯ, ಅಭಿವೃದ್ಧಿಗಾಗಿ ಅವರಿಗೆ ಕೊಡಬೇಕಾದ ಹಣವನ್ನು ನೀವು ಕೊಟ್ಟದ್ದು ಎಂದು ವಿಶ್ಲೇಷಿಸಿದರು. ಇವತ್ತಿನವರೆಗೂ ಯಾವುದೇ ದಲಿತ ಸಂಘಟನೆಗಳು ಇದರ ವಿರುದ್ಧ ಹೋರಾಟ ಮಾಡದೇ ಇರುವುದು ವಿಪರ್ಯಾಸ ಎಂದು ನುಡಿದರು.
42 ಸಾವಿರ ಕೋಟಿ ಹಣ ಇಟ್ಟಿದ್ದೇನೆ ಎಂದಿದ್ದರು. 7 ನಿಗಮಗಳಿವೆ. ಈ 7 ನಿಗಮಗಳಿಗೆ 350 ಕೋಟಿಯಂತೆ ಕೊಡಲು ಸಾಧ್ಯವಾಗಿಲ್ಲ ಎಂದು ವಿವರಿಸಿದರು. ಯಾವ ರೀತಿ ದಲಿತರಿಗೆ ವಂಚನೆ ಮಾಡಿದ್ದಾರೆ? ಹಿಂದುಳಿದ ವರ್ಗಗಳಿಗೆ ವಂಚಿಸಿದ್ದಾರೆ ಎಂದು ಕೇಳಿದರು.
ಅಲ್ಪಸಂಖ್ಯಾತರಿಗೆ ಸುಮಾರು 700 ಕೋಟಿಯ ಒನ್ ಟೈಮ್ ಸೆಟಲ್‍ಮೆಂಟ್ ಘೋಷಿಸಿದ್ದಾರೆ. ಬಡ್ಡಿರಹಿತವಾಗಿ ಸಾಲವನ್ನು ವಾಪಸ್ ಪಡೆಯುತ್ತಿರುವ ಈ ನಿರ್ಣಯ ಸ್ವಾಗತಾರ್ಹ. ಇದೇ ಯೋಜನೆ ದಲಿತರಿಗೆ ಯಾಕಿಲ್ಲ? ಹಿಂದುಳಿದವರಿಗೆ, ರೈತರಿಗೆ ಯಾಕೆ ಇಲ್ಲ? ಮಹಿಳೆಯರು, ಸ್ವಸಹಾಯ ಸಂಘಗಳು ಸಮಾಜವನ್ನು ಕಟ್ಟುವ ಕೆಲಸ ಮಾಡಲು ಹೊರಟ ಈ ಸಂದರ್ಭದಲ್ಲಿ ಅವರೂ ಸಾಲ ಪಡೆದಿದ್ದಾರೆ. ಆ ಬಡ್ಡಿಯನ್ನೂ ಸರಕಾರ ಮನ್ನಾ ಮಾಡಬೇಕಲ್ಲವೇ? ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಯಾಕೆ ಎಂದು ಕೇಳಿದರು.