ಚಾಮರಾಜನಗರ: ಮಹಾಶಿವರಾತ್ರಿ ಹಿನ್ನೆಲೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಪತ್ನಿ ಉಷಾ ಶಿವಕುಮಾರ್ ಅವರು ಮಾದಪ್ಪನ ದರ್ಶನ ಪಡೆದಿದ್ದಾರೆ.
ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಪೈಪೋಟಿ ನಡುವೆ ಡಿಕೆಶಿ ಕುಟುಂಬ ದೇವರ ಮೊರೆ ಹೋಗಿರುವುದು ಭಾರೀ ಕುತೂಹಲವನ್ನು ಮೂಡಿಸಿದೆ.
ಇನ್ನೂ ಸಾಲೂರು ಮಠಕ್ಕೂ ಕೂಡ ಭೇಟಿ ನೀಡಿದ ಉಷಾ ಶಿವಕುಮಾರ್ ಸಾಲೂರು ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಸಾಲೂರು ಶ್ರೀಗಳ ಗದ್ದುಗೆಗೂ ಕೂಡ ಪೂಜೆ ಸಲ್ಲಿಸಿದ್ದಾರೆ. ಕನಕಪುರ ಭಾಗದ ಮುಖಂಡರು ಕೂಡ ಭಾಗಿಯಾಗಿದ್ದರು.
ಇನ್ನೂ ಮಹಾಶಿವರಾತ್ರಿ ವಿಶೇಷ ದಿನದಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಸಹಸ್ರಾರು ಭಕ್ತರ ಆಗಮನವಾಗಿದೆ.
ಮಹದೇಶ್ವರನಿಗೆ ವಿಶೇಷ ಅಭಿಷೇಕ, ಮಾದಪ್ಪನ ಗರ್ಭಗುಡಿಗೆ ಫಲಪುಷ್ಪಗಳಿಂದ ಅಲಂಕಾರ ಮಾಡಲಾಗಿದೆ. ಮಾದಪ್ಪನಿಗೆ ಬೆಳ್ಳಿ ರಥ ಸೇರಿದಂತೆ ವಿವಿಧ ಉತ್ಸವಗಳು, ಕಳೆದ ಮೂರ್ನಾಲ್ಕು ದಿನಗಳಿಂದ ಪಾದಯಾತ್ರೆ ಮೂಲಕವೂ ಭಕ್ತರ ದಂಡು ಆಗಮಿಸಿದೆ.
ಬೆಟ್ಟದಲ್ಲಿ ಮಾದಪ್ಪನ ಸ್ಮರಣೆ ಮಾಡುತ್ತಿದ್ದಾರೆ. ಇಂದು ರಾತ್ರಿ ಮಹದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ, ಭಕ್ತರಿಂದ ಜಾಗರಣೆ ನಡೆಯಲಿದೆ. ಭಕ್ತರಿಗೆ ಪ್ರಾಧಿಕಾರದಿಂದ ನಿರಂತರ ದಾಸೋಹ ವ್ಯವಸ್ಥೆ ಮಾಡಲಾಗಿದೆ.