ಸ್ಪೀಕರ್ ಕೋಪಗೊಂಡು ಹೊರಹೋಗಿದ್ದು ಕರ್ನಾಟಕ ಇತಿಹಾಸದಲ್ಲೇ ಕಪ್ಪು ಚುಕ್ಕೆ: ಆರ್ ಅಶೋಕ್

Krishnaveni K

ಸೋಮವಾರ, 16 ಮಾರ್ಚ್ 2026 (16:15 IST)
ಬೆಂಗಳೂರು: ಲಿಖಿತ ಪ್ರಶ್ನೆಗಳಿಗೆ ಸಚಿವರುಗಳು ಸಮರ್ಪಕ ಉತ್ತರ ನೀಡಲು ವಿಫಲರಾದ ಹಿನ್ನಲೆಯಲ್ಲಿ ಸಿಟ್ಟಿಗೆದ್ದ ಸ್ಪೀಕರ್ ಯುಟಿ ಖಾದರ್ ಇಂದು ಸದನ ಕಲಾಪವನ್ನು ಅರ್ಧಕ್ಕೇ ನಿಲ್ಲಿಸಿ ಎದ್ದು ಹೋದ ಘಟನೆ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್ ಅಶೋಕ್ ಇದು ಕರ್ನಾಟಕ ಇತಿಹಾಸದಲ್ಲೇ ಕಪ್ಪು ಚುಕ್ಕೆ ಎಂದಿದ್ದಾರೆ.
 

ಸಚಿವರುಗಳು ಕಲಾಪಕ್ಕೆ ಪದೇ ಪದೇ ಗೈರಾಗುತ್ತಿರುವುದು, ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡಲು ವಿಫಲರಾಗುತ್ತಿರುವುದು ಸ್ಪೀಕರ್ ಸಿಟ್ಟಿಗೆ ಕಾರಣವಾಗಿತ್ತು. ಇಂದು ಗೃಹಸಚಿವ ಡಾ ಜಿ ಪರಮೇಶ್ವರ್ ಉತ್ತರದ ಸಂದರ್ಭದಲ್ಲಿಯೇ ಸಿಟ್ಟಿಗೆದ್ದು ಸ್ಪೀಕರ್ ಹೊರನಡೆದಿದ್ದರು.

ಇದರ ಬಗ್ಗೆ ಪ್ರತಿಕ್ರಿಯಿಸಿರುವ ‘ಇತಿಹಾಸದಲ್ಲೇ ಮೊದಲ ಬಾರಿಗೆ, ಸ್ವತಃ ಸನ್ಮಾನ್ಯ ಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ಅವರು ಅಸಹಾಯಕರಾಗಿ ಸದನದಿಂದ ಹೊರನಡೆದು ಕಲಾಪವನ್ನು ಮುಂದೂಡಬೇಕಾಯಿತು. ಇದಕ್ಕೆ ಕಾರಣ? ಕಾಂಗ್ರೆಸ್ ಸರ್ಕಾರದ ಸಚಿವರ ಅಹಂಕಾರ ಮತ್ತು ಬೇಜವಾಬ್ದಾರಿ. ಶಾಸಕರು ಕೇಳಿದ ಪ್ರಶ್ನೆಗಳಿಗೆ ಕನಿಷ್ಠ ಲಿಖಿತ ಉತ್ತರ ನೀಡಲೂ ಯೋಗ್ಯತೆ ಇಲ್ಲದ ಈ ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ಯಾವ ನೈತಿಕತೆ ಉಳಿದಿದೆ?

ಕರ್ನಾಟಕದ ವಿಧಾನಸಭೆಯಲ್ಲಿ ಇಂದು ನಡೆದ ಘಟನೆ ಕೇವಲ ನಾಚಿಕೆಗೇಡಿನ ಸಂಗತಿ ಮಾತ್ರವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಜನಾದೇಶಕ್ಕೆ ಮಾಡಿದ ಘೋರ ಅಪಚಾರ.

ದೆಹಲಿಯಲ್ಲಿ "ಸಂವಿಧಾನ ಉಳಿಸಿ" ಎಂದು ಬೊಬ್ಬೆ ಹೊಡೆಯುವ ರಾಹುಲ್ ಗಾಂಧಿ ಅವರೇ, ಕರ್ನಾಟಕದಲ್ಲಿ ನಿಮ್ಮದೇ ಕಾಂಗ್ರೆಸ್ ಪಕ್ಷದ ಸಚಿವರು ವಿಧಾನಸಭೆಯ ಘನತೆಯನ್ನು ಕುಗ್ಗಿಸುತ್ತಿರುವುದು ನಿಮಗೆ ಕಾಣಿಸುತ್ತಿಲ್ಲವೇ?

ಶಾಸಕರ ಪ್ರಶ್ನೆಗಳಿಗೆ ಉತ್ತರಿಸುವ ಸೌಜನ್ಯ, ವ್ಯವಧಾನ ಇಲ್ಲದ ಅಸಮರ್ಥ ಮತ್ತು ಬೇಜವಾಬ್ದಾರಿ ಸಚಿವರು ಸಿದ್ದರಾಮಯ್ಯನವರ ಸಂಪುಟದಲ್ಲಿ ಇದ್ದಾರೆ. ಇದು ಕೇವಲ ಆಡಳಿತಾತ್ಮಕ ವೈಫಲ್ಯವಲ್ಲ. ಇದು ಸಿಎಂ ಸಿದ್ದರಾಮಯ್ಯನವರಿಗೆ ಸಚಿವರ ಮೇಲೆ, ಅಧಿಕಾರಶಾಹಿ ಮೇಲೆ, ರಾಜ್ಯದ ಆಡಳಿತದ ಮೇಲೆ ಹಿಡಿತ ತಪ್ಪಿರುವುದಕ್ಕೆ ಸಾಕ್ಷಿ. ಸಚಿವರು, ಅಧಿಕಾರಿಗಳು ಶಾಸಕಾಂಗವನ್ನೇ ನಿರ್ಲಕ್ಷಿಸುತ್ತಿದ್ದಾರೆ ಎಂದರೆ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದರ್ಥ.

ಚುನಾಯಿತ ಜನಪ್ರತಿನಿಧಿಗಳಾದ ಶಾಸಕರ ಪ್ರಶ್ನೆ ಕೇಳುವ ಧ್ವನಿಯನ್ನು ಅಡಗಿಸುವುದು, ಸದನಕ್ಕೆ ಗೌರವ ನೀಡದಿರುವುದು - ಇದೇನಾ ಕಾಂಗ್ರೆಸ್‌ ಪಕ್ಷದ "ಕರ್ನಾಟಕ ಮಾಡೆಲ್'? ಸಂವಿಧಾನದ ಬಗ್ಗೆ ಪಾಠ ಮಾಡುವ ಕಾಂಗ್ರೆಸ್ ಪಕ್ಷದ ಅಸಲಿ ಮುಖವಾಡ ಇವತ್ತು ಕರ್ನಾಟಕದಲ್ಲಿ ಕಳಚಿ ಬಿದ್ದಿದೆ’ ಎಂದು ಕಟು ಟೀಕೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ