ಬೆಳಗಾವಿ: ಸುಮಾರು 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಪಕ್ಷವು ಈ ದೇಶದಲ್ಲಿ ಬಡತನ ನಿರ್ಮೂಲನೆ ಮಾಡುವುದಾಗಿ ಹೇಳಿತ್ತು. ಇಂಥ ಲಜ್ಜೆಗೆಟ್ಟ ಕಾಂಗ್ರೆಸ್ ಪಕ್ಷವು ಈ ದೇಶದಲ್ಲಿ ಬಡವರನ್ನು ನಿರ್ಮೂಲನೆ ಮಾಡಿದರೇ ಹೊರತು ಬಡವರ ಬಡತನ ನಿರ್ಮೂಲನೆ ಮಾಡಲು ಇವರಿಂದ ಆಗಿಲ್ಲ ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಇಂದು ವಿಬಿ ಜಿ ರಾಮ್ ಜಿ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಪುಡಾರಿಗಳು ಶ್ರೀಮಂತರಾದರು ಎಂದು ಟೀಕಿಸಿದರು. ಕಳೆದ ಎರಡೂವರೆ ವರ್ಷದಲ್ಲಿ ಒಂದಾದರೂ ಹೊಸ ಅಭಿವೃದ್ಧಿ ಯೋಜನೆ ನೀಡಲು ಇವರಿಂದ ಸಾಧ್ಯವಾಗಿದೆಯೇ ಎಂದು ಪ್ರಶ್ನಿಸಿದರು. ಗೃಹಲಕ್ಷ್ಮಿಯಡಿ 2 ಸಾವಿರ ಕೊಡುವುದಾಗಿ ಬೆನ್ನು ತಟ್ಟಿಕೊಳ್ಳುತ್ತಾರೆ. ಮತ್ತೊಂದೆಡೆ ಗೃಹಲಕ್ಷ್ಮಿ ಯೋಜನೆಗೆ ಹಣ ಕ್ರೋಡೀಕರಿಸಲು ಸಾಧ್ಯವಾಗದೇ ರಾಜ್ಯದಲ್ಲಿ ಅಬಕಾರಿ ಇಲಾಖೆಗೆ 40 ಸಾವಿರ ಕೋಟಿ ವ್ಯವಹಾರದ ಗುರಿ ನೀಡಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ 500 ಮೀಟರ್‍ಗೆ ಒಂದು ಮೆಡಿಕಲ್ ಶಾಪ್ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ; ಆದರೆ, 500 ಮೀಟರಿಗೆ ಒಂದು ಹೆಂಡದಂಗಡಿ ಸಿಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯದ ದಿನಸಿ ಅಂಗಡಿಗಳಲ್ಲಿ ಹೆಂಡ ಮಾರಾಟ ಮಾಡುತ್ತಿರುವುದು ಈ ನಾಲಾಯಕ್ ಕಾಂಗ್ರೆಸ್ ಸರಕಾರದ ಸಾಧನೆ ಎಂದು ಅವರು ಟೀಕಿಸಿದರು. ಗೃಹಲಕ್ಷ್ಮಿಯಡಿ 2 ಸಾವಿರ ಕೊಟ್ಟು ಅದೇ ಮನೆಯಿಂದ ಹೆಂಡದ ಮೂಲಕ 10 ಸಾವಿರ ಕಿತ್ತುಕೊಳ್ಳುವುದೇ ಈ ಸರಕಾರದ ಸಾಧನೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ವೀರಶೈವರು, ಒಕ್ಕಲಿಗರ ಸಮುದಾಯದಲ್ಲಿ ನಿಮಗೆ ಬಡವರು ಕಾಣುತ್ತಿಲ್ಲವೇ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದರು. ಈ ರಾಜ್ಯದ ಕಾಯಕ ಸಮುದಾಯಗಳ ಬದುಕನ್ನು ಕಟ್ಟಿ ಕೊಡುವ ಕೆಲಸ ರಾಜ್ಯದ ಮುಖ್ಯಮಂತ್ರಿಗಳಾಗಿ ನಿಮಗೆ ಕಳೆದ ಎರಡೂವರೆ ವರ್ಷದಲ್ಲಿ ಮಾಡಲು ಸಾಧ್ಯವಾಗಿಲ್ಲವೇ ಹಾಗಿದ್ದರೆ? ಎಂದು ಕೇಳಿ, ಸಾಧ್ಯವಾಗಿಲ್ಲ ಎಂದು ಉತ್ತರ ಕೊಟ್ಟರು.
ಶಾಸಕರಿಗೆ ಅನುದಾನ ಕೊಡುವ ಯೋಗ್ಯತೆ ಈ ಸರಕಾರಕ್ಕೆ ಇಲ್ಲ; ಮುಖ್ಯಮಂತ್ರಿಗಳಿಗೆ ಇಲ್ಲ ಎಂದು ಅವರು ಟೀಕಿಸಿದರು. ಮುಖ್ಯಮಂತ್ರಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಆಡಳಿತ ಪಕ್ಷದ ಶಾಸಕರಿಗೆ ವಿದೇಶ ಪ್ರವಾಸದ ಭಾಗ್ಯ ಕಲ್ಪಿಸಿದ್ದಾರೆ. ಇಂಥ ಲಜ್ಜೆಗೆಟ್ಟ ಕಾಂಗ್ರೆಸ್ ಸರಕಾರದಿಂದ ಈ ರಾಜ್ಯದ ಅಭಿವೃದ್ಧಿ ಅಪೇಕ್ಷೆ ಪಡಲು ಸಾಧ್ಯವೇ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವಿಕಸಿತ ಭಾರತ ಜಿ ರಾಮ್ ಜಿ ಒಂದು ಹೊಸ ಕಾಯ್ದೆಯನ್ನು ಕೇಂದ್ರ ಸರಕಾರ ಅನುಷ್ಠಾನಕ್ಕೆ ತಂದಿದೆ. ಹಿಂದೆ ಕೂಲಿಗಾಗಿ ಕಾಳು ಎಂದಿತ್ತು. ನಂತರ ಉದ್ಯೋಗ ಖಾತರಿ, ಮನ್‍ರೇಗಾ ಆಗಿತ್ತು. ಇವತ್ತು ಕೇಂದ್ರ ಸರಕಾರ, ನರೇಂದ್ರ ಮೋದಿಜೀ ಅವರು ಅದಕ್ಕೆ ಒಂದು ಹೊಸ ರೂಪ ಕೊಟ್ಟು, ಸಾಕಷ್ಟು ಸುಧಾರಣೆಗಳನ್ನು ತಂದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಅದನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಸಹಜವಾಗಿ ಕಾಂಗ್ರೆಸ್ಸಿನವರು ಟೀಕೆ ಮಾಡುವುದಲ್ಲದೇ, ಜಾಹೀರಾತು ಕೊಡುತ್ತಿದ್ದಾರೆ. ಮೊನ್ನೆ ನಡೆದ ಅಧಿವೇಶನದಲ್ಲಿ ವಿಬಿ ಜಿ ರಾಮ್ ಜಿ ವಿರುದ್ಧ ನಿರ್ಣಯವನ್ನೂ ಅನುಮೋದಿಸಿದ್ದಾರೆ ಎಂದು ದೂರಿದರು.
ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರಕಾರವು ಕಳೆದ ಎರಡೂವರೆ ವರ್ಷದಲ್ಲಿ ಕೇಂದ್ರ ಸರಕಾರದ ಯಾವ ಯೋಜನೆಯನ್ನು ಸ್ವಾಗತ ಮಾಡಿದೆ ಎಂದು ಪ್ರಶ್ನಿಸಿದರು. ಪ್ರಧಾನಮಂತ್ರಿಗಳು ಈ ದೇಶವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಲು ಹೊಸ ಶಿಕ್ಷಣ ನೀತಿ ತಂದರು. ಅದಕ್ಕೂ ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳು ಕಲ್ಲು ಹಾಕುವ ಕೆಲಸ ಮಾಡಿದರು. ಕಿಸಾನ್ ಸಮ್ಮಾನ್ ಯೋಜನೆಯಡಿ ಮೋದಿಜೀ ರೈತರ ಖಾತೆಗೆ 6 ಸಾವಿರ ರೂ. ಹಾಕುತ್ತಿದ್ದರು. ದೇಶದಲ್ಲಿ ಯಾವುದೇ ಮುಖ್ಯಮಂತ್ರಿಗಳು ಮಾಡದ ರೀತಿಯಲ್ಲಿ ನಿಮ್ಮ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ 4 ಸಾವಿರ ಕೊಡುತ್ತಿದ್ದರು; ಅದಕ್ಕೂ ಕಲ್ಲು ಹಾಕಿದ್ದಾರೆ ಎಂದು ದೂರಿದರು.
ಬಸವರಾಜ ಬೊಮ್ಮಾಯಿಯವರು ಜಾರಿಗೊಳಿಸಿದ ರೈತ ವಿದ್ಯಾನಿಧಿಯನ್ನೂ ನಿಲ್ಲಿಸಿದ್ದಾರೆ. ಮೋದಿಜೀ ಅವರು ಒಂದು ದೇಶ ಒಂದು ಚುನಾವಣೆ ಅನುಷ್ಠಾನಕ್ಕೆ ಮುಂದಾದರೆ ಅದಕ್ಕೂ ವಿರೋಧದ ಮಾತುಗಳನ್ನು ಕಾಂಗ್ರೆಸ್ಸಿನವರು ಆಡಿದ್ದಾರೆ. ವಕ್ಫ್ ವಿಚಾರದಲ್ಲಿ ಈ ರಾಜ್ಯದಲ್ಲಿ ರೈತರ ಜಮೀನು ಹೊಡೆದುಕೊಳ್ಳುವ ವಕ್ಫ್ ಕಾಯ್ದೆಗೆ ತಿದ್ದುಪಡಿಯನ್ನು ನರೇಂದ್ರ ಮೋದಿಜೀ ಅವರು ತಂದರೆ, ಮೊಸರಲ್ಲಿ ಕಲ್ಲು ಹುಡುಕಿದ ಕಾಂಗ್ರೆಸ್ಸಿನವರು ಅದನ್ನೂ ವಿರೋಧಿಸಿದ್ದರು ಎಂದು ತಿಳಿಸಿದರು.
ವಿಬಿ ಜಿ ರಾಮ್ ಜಿಯನ್ನು ಯಾಕಾಗಿ ವಿರೋಧಿಸುತ್ತಿದ್ದಾರೆ ಎಂದರೆ, ಕಾರಣ ಮೋದಿಯವರ ಯೋಜನೆ ಅಲ್ಲ; ಇವರಿಗೆ ನರೇಂದ್ರ ಮೋದಿಜೀ ಅವರನ್ನು ನೋಡಿದರೇ ಆಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸಿಗುತ್ತಿಲ್ಲ. ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಲ್ಲಿ ಬಡವರು ಪರದಾಡುತ್ತಿದ್ದಾರೆ. ಮೋದಿಜೀ ಅವರು ಜನೌಷಧಿ ಕೇಂದ್ರ ತೆರೆದರೆ ಅದಕ್ಕೂ ಕಲ್ಲು ಹಾಕುವ ಕೆಲಸ ಇವರದು ಎಂದು ದೂರಿದರು.
ಈ ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರದಲ್ಲಿ ಒಂದು ಕಾಂಗ್ರೆಸ್ಸೇತರ ಪಕ್ಷ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವುದೇ ಇವರ ಅಲರ್ಜಿಗೆ ಕಾರಣ ಎಂದು ವಿಶ್ಲೇಷಿಸಿದರು. ಕಾಂಗ್ರೆಸ್ಸೇತರ ಪಕ್ಷ, ಬಿಜೆಪಿ ಕಳೆದ 3 ಚುನಾವಣೆಗಳಲ್ಲಿ ಸತತವಾಗಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರವು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅಲ್ಲಿ ಒಬ್ಬ ಹಿಂದುಳಿದ ವರ್ಗದ ನರೇಂದ್ರ ಮೋದಿಜೀ ಅವರು ಪ್ರಧಾನಿಯಾಗಿದ್ದಾರೆ. ಭಾರತ ದೇಶವನ್ನು ಜಗತ್ತಿನ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಂತೆ ಮಾಡಿದ್ದನ್ನು ಸಹಿಸಿಕೊಳ್ಳಲು ಕಾಂಗ್ರೆಸ್ಸಿನ ಅಯೋಗ್ಯರಿಗೆ ಆಗುತ್ತಿಲ್ಲ ಎಂದು ಟೀಕಿಸಿದರು.