13ರ ಹುಡುಗನಾಗಿ ಬಿಗ್ ಬಿ ಹೊಸರೂಪ: ಕುತೂಹಲ ಕೆರಳಿಸಿರುವ 'ಪಾ'!

IFM
ಈ ಫೋಟೋದಲ್ಲಿರುವವರು ಯಾರು? ಒಂದು ಕ್ಷಣ ಯೋಚಿಸಿದರೂ ಗುರುತು ಹತ್ತದ ಮುಖ. ಹತ್ತಾರು ಬಾರ ಯೋಚಿಸಿದರೂ ಚಿಂತನೆಗೆ ನಿಲುಕದ ನಿಲುವು. ಯಾರಿದು? ಊಹನೆಗೂ ನಿಲುಕದಂತೆ ಬದಲಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ ಅಮಿತಾಬ್ ಬಚ್ಚನ್!!! ಹೌದು ಇವರು 'ಬಿಗ್ ಬಿ' ಅಮಿತಾಬ್ ಬಚ್ಚನ್ ಎಂದು ಹೇಳಿದರೆ ಒಂದು ಕ್ಷಣ ಬಾಯಿ ಇಷ್ಟಗಲ ತೆರೆದೀತು. ಆದರೆ ಇದು ಸುಳ್ಳಲ್ಲ. ಶೇ.100ರಷ್ಟು ನಿಜ.

ಈಗ ಬಾಲಿವುಡ್ ಸೇರಿದಂತೆ ಎಲ್ಲೆಡೆ ಈ 'ಪಾ'ದ್ದೇ ಸುದ್ದಿ, 'ಪಾ'ದ್ದೇ ವಿಡಿಯೋ, 'ಪಾ'ದ್ದೇ ಚಿತ್ರ, 'ಪಾ'ದ್ದೇ ಬ್ಯಾನರ್. ಏನಿದು 'ಪಾ'? ಇದರಲ್ಲೇನು ವಿಶೇಷ ಎಂದು ಎಲ್ಲರಲ್ಲೂ ಕುತೂಹಲವನ್ನು ಈಗಾಗಲೇ ಸೃಷ್ಟಿಸಿದೆ ಕೂಡಾ. ಇದು ಅಮಿತಾಬ್ ಬಚ್ಚನ್ ನಟನೆಯ 'ಪಾ' ಎಂಬ ಬಹು ವಿಶೇಷಗಳಿರುವ ಚಿತ್ರ!

ಅಂದೊಮ್ಮೆ ಚೀನೀ ಕಮ್ ಎಂಬ ಚಿತ್ರ ನೀಡಿದ ಬಾಲ್ಕಿ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ ಆರ್. ಬಾಲಕೃಷ್ಣನ್ ಈ ಚಿತ್ರದ ನಿರ್ದೇಶಕರು. ಘಜನಿ ಚಿತ್ರದ ನಂತರ ತ್ನ ಪೋಸ್ಟರುಗಳಿಂದಲೇ ಸಾಕಷ್ಟು ಸುದ್ದಿ ಮಾಡಿದ, ಮಾಡುತ್ತಿರುವ ಚಿತ್ರವೆಂದರೆ ಬಾಲಿವುಡ್ಡಿನಲ್ಲಿ ಈಗಿನ ಪಾ. ಚಿತ್ರವಿನ್ನೂ ಬಿಡುಗಡೆಯಾಗಿಲ್ಲ. ಆದರೆ ಸೃಷ್ಟಿಸಿದ ತನ್ನ ಪೋಸ್ಟರುಗಳಿಂದ ಟ್ರೈಲರುಗಳಿಂದ ಈಗಾಗಲೇ ಜನರಲ್ಲಿ ವಿಪರೀತ ಕುತೂಹಲ ಕೆರಳಿಸಿದೆ.
IFM


ಚಿತ್ರದ ವಿಶೇಷವೆಂದರೆ, ಅಮಿತಾಬ್ ಬಚ್ಚನ್‌ ಇದರಲ್ಲಿ ಮಗನಾದರೆ, ಅಭಿಷೇಕ್ ಬಚ್ಚನ್ ಅಪ್ಪನ ಪಾತ್ರದಲ್ಲಿ ಕಾಣಿಸಲಿದ್ದಾರೆ. ನಿಜಜೀವನದ ಪಕ್ಕಾ ಉಲ್ಟಾ! ಹೌದು. ಅಮಿತಾಬ್ ಬಚ್ಚನ್ ಇದರಲ್ಲಿ 13ರ ಹರೆಯದ ಹುಡುಗನಾಗಿ ಅಭಿಷೇಕ್ ಬಚ್ಚನ್ ಹಾಗೂ ವಿದ್ಯಾಬಾಲನ್ ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. ಬಹುಶಃ ಬಾಲಿವುಡ್ ಇತಿಹಾಸದಲ್ಲೇ 70ರ ಆಸುಪಾಸಿನ ನಟ 13ರ ಹರೆಯದ ಹುಡುಗನಾಗಿ ನಟಿಸಿದ್ದು ಇದೇ ಮೊದಲಿರಬಹುದು.

ಪಾ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅಪರೂಪದ ಕಾಯಿಲೆಯಿಂದ ಬಳಲುವ ಬಾಲಕನ ಪಾತ್ರ ಮಾಡಿದ್ದಾರೆ. ಮಾನಸಿಕವಾಗಿಯೂ, ವಯಸ್ಸಿನಲ್ಲೂ 13ರ ಹುಡುಗ ದೈಹಿಕವಾಗಿ ಐದು ಪಟ್ಟು ಬೆಳೆದಿರುವ ರೋಗವನ್ನು ಹೋತ್ತ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ಮಿಂಚಿದ್ದಾರಂತೆ.

IFM
ಚಿತ್ರದಲ್ಲಿ ಆರೋ (ಅಮಿತಾಬ್ ಬಚ್ಚನ್) ಬುದ್ಧಿವಂತ, ತಮಾಷೆಯ 13 ವರ್ಷದ ಹುಡುಗ. ಆದರೆ, ಈತನೊಂದು ವಿಚಿತ್ರವಾದ ಕಾಯಿಲೆಗೆ ತುತ್ತಾಗಿರುತ್ತಾನೆ. ಪ್ರೋಜೀರಿಯಾದಂತಹ ಸಿಂಡ್ರೋಮ್ ಇದು. ಮಾನಸಿಕವಾಗಿ ಈತ ಎಲ್ಲ ಮಕ್ಕಳಂತೆ 13 ವರ್ಷದ ಹುಡುಗನಾದರೂ, ದೈಹಿಕವಾಗಿ ಈತ ತನ್ನ ವಯಸ್ಸಿನ ಐದು ಪಟ್ಟು ದೊಡ್ಡವನಂತೆ ಕಾಣುತ್ತಾನೆ. ಈ ಒಂದು ರಗ ಬಿಟ್ಟರೆ, ಆರೋ ತುಂಬ ಸಂತೋಷವಾಗಿ ಕಾಲ ಕಳೆಯುವ ಸುಖದಿಂದ ತನ್ನ ಜೀವನ ಸಾಗಿಸುವ ಹುಡುಗ. ತಾಯಿ ವಿದ್ಯಾ (ವಿದ್ಯಾ ಬಾಲನ್) ಒಬ್ಬ ಗೈನಕಾಲಜಿಸ್ಟ್. ಅಮೋಲ್ ಆರ್ಟೆ(ಅಭಿಷೇಕ್ ಬಚ್ಚನ್) ಈತನ ತಂದೆ. ಯುವ ಉತ್ಸಾಹಿ ರಾಜಕಾರಣಿ ಅಮೋಲ್. ರಾಜಕೀಯ ಎಂಬುದು ಕೆಟ್ಟ ಲೋಕವಲ್ಲ ಎಂದು ಸಾಬೀತು ಪಡಿಸಲು ಹೊರಟ ಉತ್ತಮ ಸಹೃದಯಿ ಪ್ರಾಮಾಣಿಕ ರಾಜಕಾರಣಿ ಈತ. ಇದೊಂದು ತುಂಬಾ ಅಪರೂಪದ ಅಪ್ಪ ಮಗ- ಮಗ ಅಪ್ಪನ ಕಥೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ಡಿಸೆಂಬರ್ 4ರಂದು ಬಿಡುಗಡೆ ಕಾಣಲಿರುವ ಈ ಚಿತ್ರಕ್ಕೆ ಇಳಯರಾಜಾ ಸಂಗೀತ ನೀಡಿದ್ದಾರೆ.

ಅಂದಹಾಗೆ, 'ಪಾ' ಚಿತ್ರದ ಮೂಲಕ ಅಮಿತಾಬ್ ಬಚ್ಚನ್‌ಗೆ ಸದ್ಯದಲ್ಲೇ ಶ್ರೇಷ್ಠ ಬಾಲನಟ ಪ್ರಶಸ್ತಿ ದಕ್ಕಿದರೂ ದಕ್ಕಬಹುದು!!! ಏನಂತೀರಾ?

ವೆಬ್ದುನಿಯಾವನ್ನು ಓದಿ