ಮಕ್ಕಳಿಗಾಗಿಯೇ ಬರಲಿದೆ ಹೊಸ 3ಡಿ ಆನಿಮೇಷನ್ ಡ್ರ್ಯಾಗನ್ ಸಿನಿಮಾ

ಬೇಸಿಗೆ ರಜೆ ಮಕ್ಕಳನ್ನು ಆನಂದ ತುಂದಿಲರನ್ನಾಗಿ ಮಾಡಿದೆ. ಆಟ ಆಡುವುದು, ಚಲನಚಿತ್ರ ನೋಡುವುದು, ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳುವುದರಲ್ಲಿ ಬ್ಯುಸಿಯಾಗಿರುವ ಮಕ್ಕಳಿಗಾಗಿಯೇ ಬೇಸಿಗೆ ರಜೆಯಲ್ಲಿ ಮತ್ತಷ್ಟು ರಂಜಿಸಲು ಇದೀಗ ಚಿತ್ರವೊಂದು ತೆರೆ ಕಾಣಲಿದೆ.

ಹೌದು. ಮಕ್ಕಳ ಬೇಸಿಗೆ ರಜೆಯ ಮಜಾವನ್ನು ಇನ್ನಷ್ಟು ಹೆಚ್ಚಿಸಲು 3ಡಿ ತಂತ್ರಜ್ಞಾನದ ಆನಿಮೇಷನ್ ಚಿತ್ರಕ್ಕಿಂತ ದೊಡ್ಡ ಕೊಡುಗೆ ಸಿಗಲಾರದು. ಇದನ್ನರಿತ ಚಿತ್ರ ನಿರ್ಮಾಪಕರು ವಿಶಿಷ್ಟವಾಗಿ ಚಿತ್ರವನ್ನು ಸಿದ್ಧಪಡಿಸಿ ಶುಕ್ರವಾರ ಬಿಡುಗಡೆಗೆ ಸಜ್ಜುಗೊಳಿಸಿದ್ದಾರೆ.

ಇದು ಹಿಕಪ್‌ನ ಕಥೆ. ಯಾರೀತ ಅಂದುಕೊಂಡಿರಾ? ಬರ್ಕ್ ದ್ವೀಪದ ವೈಕಿಂಗ್ ಆದಿವಾಸಿ ಸಮೂಹದ ಮುಖ್ಯಸ್ಥನ ಮಗನೇ ಈ ಪೋರ. 'ಹೌ ಟು ಟ್ರೈನ್ ಯುವರ್ ಡ್ರಾಗನ್' ಹೆಸರಿನ 3ಡಿ ತಂತ್ರಜ್ಞಾನದ ಆನಿಮೇಷನ್ ಚಿತ್ರದ ನಾಯಕ. ಶುಕ್ರವಾರ ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಒಂದೂವರೆ ಗಂಟೆಯ ಇಂಗ್ಲೀಷ್ ಸಿನಿಮಾ ಸಂಪೂರ್ಣ ಹಿಕಪ್‌ನ ಸುತ್ತವೇ ಹೆಣೆಯಲಾಗಿದೆ. ಬರ್ಕ್ ದ್ವೀಪದ ಆದಿವಾಸಿಗಳಿಗೆ ಬೆಂಕಿಯುಗಳುವ ಡ್ರ್ಯಾಗನ್‌ಗಳ ಜೊತೆ ಸೆಣಸುವುದೇ ಬದುಕು. ಆಗಾಗ ಸಮುದ್ರ ತಳದಿಂದ ಮೇಲೆದ್ದು ಬರುವ ಡ್ರ್ಯಾಗನ್‌ಗಳು ಆದಿವಾಸಿಗಳ ಆಹಾರ ಕಬಳಿಸುತ್ತವೆ, ಮನೆಗಳನ್ನು ಧ್ವಂಸಗೊಳಿಸುತ್ತವೆ. ಇವುಗಳ ಸಮಸ್ಯೆಗೆ ಪುಟ್ಟ ಪೋರ ಹೇಗೆ ಪರಿಹಾರ ಕಲ್ಪಿಸುತ್ತಾನೆ ಎಂಬುದೇ ಈ ಚಿತ್ರದ ಕಥಾವಸ್ತು.

3ಡಿ ತಂತ್ರಜ್ಞಾನದ ಚಿತ್ರ ವೀಕ್ಷಿಸುವವರ ಸಂಖ್ಯೆ ಅಪಾರ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಬಾಲಕರನ್ನು ಸೆಳೆಯಲು ಇದೊಂದು ಪರಿಪೂರ್ಣ ಮಾಧ್ಯಮ ಎನಿಸಿದೆ. ಅದನ್ನೇ ಬಳಸಿ ಚಿತ್ರ ತಯಾರಿಸಲಾಗಿದ್ದು, ಬಿಡುಗಡೆಗೆ ಮುನ್ನವೇ ಯಶಸ್ಸಿನ ಲೆಕ್ಕಾಚಾರ ಹೆಣೆಯಲಾಗುತ್ತಿದೆ. ಕಥೆಯ ವಿವರ ನೋಡಿದಾಗ ದೈತ್ಯದೇಹಿ ವೈಕಿಂಗ್‌ಗಳ ಮುಖ್ಯಸ್ಥ ಸ್ಟೊಯಿಕ್‌ಗೆ ತನ್ನ ಮಗ ಜನಾಂಗದ ಇತರರಂತೆ ಸಶಕ್ತನಾಗಿಲ್ಲ, ಹೋರಾಟಕ್ಕೆ ಅಸಮರ್ಥ ಎಂಬ ಚಿಂತೆ. ತನ್ನ ಜನಾಂಗದವರು ಧರಿಸುವ ಕೋಡು ಎಂದರೆ ಆಗದು, ಸಣಕಲು ದೇಹದ ಮಗ ಸಾಹಸಿಯಲ್ಲ, ಮುಂದೆ ತನ್ನ ಜನಾಂಗ ಆಳಲು ಸಮರ್ಥನಲ್ಲ ಎಂಬ ಕೊರಗು ಇರುತ್ತದೆ.

ಅದಕ್ಕೆ ಸರಿ ಸಮನಾಗಿ ಆಗಾಗ ಏನಾದರೊಂದು ಸಾಹಸ ಮಾಡಲು ಹೋಗಿ ಯಡವಟ್ಟು ಮಾಡಿಕೊಳ್ಳುತ್ತಾನೆ ಹಿಕಪ್. ವಿಶೇಷ ಎಂದರೆ ಡ್ರ್ಯಾಗನ್‌ಗಳನ್ನು ಸಾಯಿಸುವ ಬದಲು ಅವುಗಳೊಂದಿಗೆ ಸ್ನೇಹ ಬೆಳೆಸಿ, ಜನರ ಜತೆ ಬೆರೆಯುವಂತೆ ಮಾಡುತ್ತಾನೆ. ಇದು ಚಿತ್ರದ ಕಥೆ.

'ಓವರ್ ಟು ಹೆಜ್', 'ಟಾಯ್ ಸ್ಟೋರಿ' 'ಟಾರ್ಜಾನ್' ಚಿತ್ರಗಳನ್ನು ನಿರ್ಮಿಸಿದ್ದ ಬೋನಿ ಅರ್ನಾರ್ಲ್ಡ್ ಈ ಚಿತ್ರದ ನಿರ್ಮಾಪಕ. ಕ್ರೆಸ್ಸಿಡಾ ಕೊವೆಲ್ ಪುಸ್ತಕ ಆಧರಿಸಿ ಕ್ರಿಸ್ ಸ್ಯಾಂಡರ್ಸ್ ಮತ್ತು ಡೀನ್ ಡೆ ಬ್ಲೊಯಿಸ್ ಸೂಕ್ತ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ.

ವೆಬ್ದುನಿಯಾವನ್ನು ಓದಿ