ಲವ್ ಆಜ್ ಕಲ್: ಇದು ಪ್ರೀತಿಯ ವಿವಿಧ ರೂಪ

ಲವ್ ಆಜ್ (ಈಗಿನ ಲವ್)
ಲಂಡನ್, ಸಾನ್‌ಫ್ರಾನ್ಸಿಸ್ಕೋ, ದೆಹಲಿ- 2009
ಜೈ ಹಾಗೂ ಮೀರಾ ಲಂಡನ್‌ನಲ್ಲಿರುವ ಆಧುನಿಕ ಪ್ರೇಮಿಗಳು. ಅವರಿಬ್ಬರೂ ಜತೆಗೆ ಇದ್ದಷ್ಟು ಕಾಲ ತುಂಬ ಸಂತೋಷವಾಗಿರುತ್ತಾರೆ. ಆದರೆ ಇಬ್ಬರೂ ಮದುವೆಯ ಗಂಟು ಹಾಕಿಕೊಳ್ಳುವ ಸಂಬಂಧದಲ್ಲಿ ನಂಬಿಕೆ ಇಟ್ಟಿರುವುದಿಲ್ಲ. ಹಾಗಾಗಿ ಜೀವನ ಇಬ್ಬರನ್ನೂ ಬೇರೆ ಬೇರೆ ದಿಕ್ಕಿನತ್ತ ಸೆಳೆಯುತ್ತದೆ. ಇಬ್ಬರೂ ಸೆಳೆದತ್ತ ವಾಲುತ್ತಾರೆ. ಅರ್ಥಾತ್ ಬೇರೆಬೇರೆಯಾಗುತ್ತಾರೆ. ರೋಮಿಯೋ- ಜೂಲಿಯಟ್ ತರಹದ ಜನುಮ ಜನುಮದ ಪ್ರೇಮಿಗಳು ಕೇವಲ ಕಾಣ ಸಿಗುವುದು ಕಥೆ ಪುಸ್ತಕಗಳಲ್ಲಿ ಮಾತ್ರ ಅಂತ ಜೈ ಹೇಳುತ್ತಾನೆ. ಆದರೆ ಜೀವನದಲ್ಲಿ ನಾವು ಪ್ರಾಕ್ಟಿಕಲ್ ಆಗಿರಬೇಕು ಎಂಬುದು ಜೈ, ಮೀರಾ ಅಭಿಪ್ರಾಯ.

ಲವ್ ಕಲ್ (ಹಿಂದಿನ ಲವ್)
ದೆಹಲಿ, ಕಲ್ಕತ್ತಾ- 1965.
ವೀರ್ ಸಿಂಗ್ ಒಮ್ಮೆ ಹರ್ಲೀನ್‌ಳನ್ನು ನೋಡಿ ಒಂದೇ ನೋಟದಲ್ಲಿ ಆಕೆಯೆಡೆಗೆ ಆಕರ್ಷಿತನಾಗುತ್ತಾನೆ. ಆಗಿಂದಾಗಲೇ ಆತ ಮರದಡಿಯಲ್ಲಿ ನಿಂತು ನನ್ನ ಈ ಜನ್ಮವೂ ಸೇರಿದಂತೆ ಮುಂದಿನ ಜನ್ಮದಲ್ಲೂ, ಜನುಮ ಜನುಮದಲ್ಲಿ ಹರ್ಲೀನ್ ಕೌರ್ ನನಗೆ ಪತ್ನಿಯಾಗಿಯೇ ಇರಬೇಕು ಎಂದು ಪ್ರತಿಜ್ಞೆ ಮಾಡುತ್ತಾನೆ. ಆಕೆಗಾಗಿ ಸಾವಿರಾರು ಕಿ.ಮೀ ಸಾಗುತ್ತಾನೆ. ಆಕೆಯ ಮನೆಯ ಬಾಲ್ಕನಿಯ ಅಡಿಯಲ್ಲೇ ನಿಲ್ಲುತ್ತಾನೆ. ಆಕೆಯ ಒಂದೇ ಕ್ಷಣದ ಮುಖದರ್ಶನಕ್ಕಾಗಿ ಹಪಹಪಿಸುತ್ತಾನೆ. ಆದರೂ, ಆಖೆಯನ್ನು ಕಂಡರೆ ಒಂದು ಮಾತೂ ಆತನಿಂದ ಹೊರಬರುವುದಿಲ್ಲ.


IFM
ಲವ್ ಆಜ್‌ ಕಲ್
ವೀರ್‌ಗೆ ಜೈ ಯಾಕೆ ಹೃದಯದ ಭಾವನೆಗಳನ್ನು, ಬ್ಯಾಂಕಿನಲ್ಲಿರುವ ಹಣದ ಟ್ರಾನ್ಸ್ಯಾಕ್ಷನ್ ತರಹ ನಿರ್ಭಾವುಕನಾಗಿ ನೋಡುತ್ತಾನೆ ಎಂಬುದೇ ಅರ್ಥವಾಗುವುದಿಲ್ಲ. ಆದರೆ ಜೈಗೆ ವೀರ್ ಯಾಕೆ ಹರ್ಲೀನ್ಳ ಪ್ರೇಮದಲ್ಲಿ ಕಳೆದುಹೋಗಿ ವೃಥಾ ತನ್ನ ಯೌವನವನ್ನು ವೇಸ್ಟ್ ಮಾಡುತ್ತಿದ್ದಾನೆ ಎಂಬುದು ಅರ್ಥವಾಗುವುದಿಲ್ಲ. ಈ ಎರಡು ಕಥೆಗಳು ಮುಗಿದಾಗ, ಲವ್ ಎನ್ನುವ ಅನುಭವ ಯಾವುದೇ ಕಾಲದಲ್ಲೂ ಎಲ್ಲರಿಗೂ ಒಂದೇ. ಆದರೆ ಸಂಬಂಧಗಳಲ್ಲಿ ಮಾತ್ರ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ ಎಂಬುದು ಅರ್ಥವಾಗುತ್ತದೆ.
ಹೀಗ್ ಲವ್ ಆಜ್ ಕಲ್ ಚಿತ್ರವೊಂದು ಎರಡು ಕಥಾನಕಗಳ ಮೂಲಕ ಪ್ರೀತಿಯ ಸಂಬಂಧಗಳ ವ್ಯತ್ಯಾಸವನ್ನು ಹೇಳುತ್ತಾ ಹೋಗುತ್ತದೆ. ಆಧುನಿಕ ಜೀವನಶೈಲಿಯ ಸ್ವಾತಂತ್ರ್ಯ, ಸ್ವೇಚ್ಛೆ ಸಂದೇಹ, ಸಂಶಯಗಳೊಂದಿಗೆ ಹಳೆಯ ಮುಗ್ಧತೆ, ಬದ್ಧತೆಗಳ ಕೊಂಡಿಯನ್ನು ವಿವರಿಸುತ್ತದೆ. ಸಂಬಂಧಗಳ ಅಂತರವಿಸ್ತರಿಸುತ್ತಾ, ದೂರವಾಗುತ್ತಾ ಹೋಗುತ್ತದೆ. ಇಬ್ಬರ ನಡುವೆ ಹೆಚ್ಚುವ ಗ್ಯಾಪ್‌ಗಳು ಹೆಚ್ಚಾದಂತೆ ಸೇತುವೆಯ ದೂರವೂ ಹೆಚ್ಚುತ್ತಾ ಹೋಗುವುದು ಇಲ್ಲಿರುವ ಭಾವುಕ ಕ್ಷಣಗಳು.

ಈ ಚಿತ್ರವನ್ನು ನೋಡಿದರೆ ಶೇ.99ರಷ್ಟು ಸೈಫ್‌ ಆಲಿಖಾನ್ ಅವರನ್ನು ಬಾಲಿವುಡ್‌ನ ಅತ್ಯಂತ ಸೆಕ್ಸೀ ಪುರುಷ ಎಂದು ಮಾನ್ಯ ಮಾಡುವ ಸಂಭವವಿದೆ ಎಂಬುದು ಹಲವರ ಅಭಿಪ್ರಾಯ. ಸೈಫ್ ಇದರಲ್ಲಿ ಇನ್ನೂ ತರುಣನಂತೆ ಕಂಗೊಳಿಸಿದ್ದರೆ, ದೀಪಿಕಾ ಸೌಂದರ್ಯ ಇನ್ನೂ ಇಮ್ಮಡಿಸಿದಂತೆ ಇದರಲ್ಲಿ ಕಾಣುತ್ತದೆ. ಸೈಫ್ ಚಿತ್ರದಲ್ಲಿ ಸಿಂಗ್ ವೇಷಧಾರಿಯಾಗಿ ಬಂದಾಗ ಸ್ವತಃ ಆತನ ಮನದನ್ನೆ ಕರೀನಾಗೆ ಗುರುತೇ ಸಿಕ್ಕಿರಲಿಲ್ಲವಂತೆ.

ಇನ್ನೊಂದು ವಿಶೇಷವೆಂದರೆ ಸೈಫ್ ಆಲಿಖಾನ್ ಅವರ ಹೋಂ ಪ್ರೊಡಕ್ಷನ್‌ನಲ್ಲಿ ತಯಾರಿಸಲಾದ ಮೊತ್ತ ಮೊದಲ ಚಿತ್ರ ಇದು. ಇಂತಿಯಾಜ್ ಅಲಿ ನಿರ್ದೇಶನ ಈ ಚಿತ್ರಕ್ಕಿದೆ. ಭಾರೀ ಪ್ರಚಾರ ಪಡೆಯವ ಜತೆಗೆ ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನೂ ಹುಟ್ಟುಹಾಕಿದ ಈ ಚಿತ್ರ ಜುಲೈ 31ರಂದು ಬಿಡುಗಡೆ ಕಾಣಲಿದೆ.
IFM