ಎನ್ಐಎ ದುರ್ಬಲ ಎಂದು ಅಮೆರಿಕಾಕ್ಕೆ ಹೇಳಿದ್ದ ಚಿದಂಬರಂ

ಶನಿವಾರ, 19 ಮಾರ್ಚ್ 2011 (14:43 IST)
ವಿಕಿಲೀಕ್ಸ್ ದಾಖಲೆಗಳಿಂದ ಸರಕಾರಕ್ಕಾಗುತ್ತಿರುವ ಮುಖಭಂಗ ಶನಿವಾರವೂ ಮುಂದುವರಿದಿದೆ. ಭಾರತದ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಕಾನೂನು ರೀತಿಯಲ್ಲಿ ದುರ್ಬಲ ಎಂದು ಅಮೆರಿಕಾದ ಹಿರಿಯ ಅಧಿಕಾರಿಯೊಬ್ಬರಿಗೆ ಕೇಂದ್ರ ಗೃಹಸಚಿವ ಪಿ. ಚಿದಂಬರಂ ಹೇಳಿದ್ದರು ಎಂದು ಆರೋಪಿಸಲಾಗಿದೆ.

ಚಿದಂಬರಂ ಅವರು ಹಣಕಾಸು ಸಚಿವಾಲಯದಿಂದ ಗೃಹ ಸಚಿವಾಲಯಕ್ಕೆ ವರ್ಗಾವಣೆಗೊಂಡ ಬಳಿಕ, 2008ರ ಮುಂಬೈ ಉಗ್ರರ ದಾಳಿಯ ನಂತರ ಅಸ್ತಿತ್ವಕ್ಕೆ ಬಂದಿದ್ದ ರಾಷ್ಟ್ರೀಯ ತನಿಖಾ ದಳವು ಭಯೋತ್ಪಾದನೆಯನ್ನು ಹತ್ತಿಕ್ಕುವ ತನಿಖೆಯ ಗುರಿ ಹೊಂದಿದೆ.

ಚಿದಂಬರಂ ಅವರಿಂದಲೇ ಮಸೂದೆ ಮಂಡನೆಯಾಗಿ ಅಸ್ತಿತ್ವಕ್ಕೆ ಬಂದಿದ್ದ ಎನ್ಐಎ ಬಗ್ಗೆ ಕೇವಲ ಎರಡು ತಿಂಗಳುಗಳ ಅವಧಿಯಲ್ಲೇ ಇಂತಹ ಹೇಳಿಕೆ ಬಂದಿತ್ತು.

ರಾಜ್ಯ-ಕೇಂದ್ರದ ನಡುವಿನ ಸಂಬಂಧಗಳ ಸಾಂವಿಧಾನಿಕ ವಿಧಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿರುವುದರಿಂದ, ಎನ್ಐಎ ಹೆಚ್ಚಿನ ಕಾನೂನಾತ್ಮಕ ರಕ್ಷಣೆಯನ್ನು ಹೊಂದಿಲ್ಲ ಎಂದು ಚಿದಂಬರಂ ಅವರು ಅಮೆರಿಕಾದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ನಿರ್ದೇಶಕ ರಾಬರ್ಟ್ ಮುಲ್ಲರ್ ಅವರಿಗೆ ಹೇಳಿದ್ದರು.

ಇದನ್ನು 2009ರ ಮಾರ್ಚ್ 4ರಂದು ದೆಹಲಿಯಲ್ಲಿನ ಅಮೆರಿಕಾ ರಾಯಭಾರ ಕಚೇರಿಯು ಯಥಾವತ್ತಾಗಿ ನಮೂದಿಸಿ ತನ್ನ ದೇಶಕ್ಕೆ ಕಳುಹಿಸಿತ್ತು. ಆ ದಾಖಲೆಯನ್ನು ಸಂಪಾದಿಸಿದ್ದ 'ವಿಕಿಲೀಕ್ಸ್' ಈಗ 'ದಿ ಹಿಂದೂ' ಪತ್ರಿಕೆಯ ಮೂಲಕ ಬಹಿರಂಗಪಡಿಸಿದೆ.

2009ರ ಮಾರ್ಚ್ 3ರಂದು ದೆಹಲಿಯಲ್ಲಿ ಮುಲ್ಲರ್ ಮತ್ತು ಚಿದಂಬರಂ ಮಾತುಕತೆ ನಡೆಸಿದ್ದರು. ಭಯೋತ್ಪಾದನೆಯನ್ನು ಹತ್ತಿಕ್ಕಲು ಎನ್ಐಎ ಒಂದು ಅಸ್ತ್ರ ಹೌದು. ಆದರೆ ಅದರ ಸಾಂವಿಧಾನಿಕತೆ ಬಗ್ಗೆ ಸಂಶಯಗಳಿವೆ ಎಂದು ಗೃಹಸಚಿವರು 'ಗುಟ್ಟಾಗಿ' ಹೇಳಿದ ಮರುದಿನವೇ ಅದು ಅಮೆರಿಕಾ ಗೃಹ ಸಚಿವಾಲಯಕ್ಕೆ ವರದಿಯಾಗಿ ರವಾನೆಯಾಗಿತ್ತು.

ಎನ್ಐಎ ಕಾಯ್ದೆಯ ಪ್ರಕಾರ, ಅದಕ್ಕೆ ಇರುವ ಕಾನೂನುಗಳ ಅಡಿಯಲ್ಲಿ ಪ್ರಕರಣಗಳ ತನಿಖೆ ನಡೆಸುವಾಗ ಮತ್ತು ಶಂಕಿತರನ್ನು ವಿಚಾರಣೆಗೊಳಪಡಿಸುವಾಗ ಯಾವುದೇ ರಾಜ್ಯದ ಪೊಲೀಸರನ್ನು ಲೆಕ್ಕಿಸದೆ, ಅವರ ಗಮನಕ್ಕೆ ತರದೆ ಕ್ರಮ ಕೈಗೊಳ್ಳಬಹುದು. ಅಪಹರಣ, ಬಾಂಬ್ ಸ್ಫೋಟಗಳು, ಪರಮಾಣು ಸ್ಥಾವರಗಳ ಮೇಲಿನ ದಾಳಿಗಳು ಅಥವಾ ಭಾರತದ ಐಕ್ಯತೆಗೆ ಧಕ್ಕೆಯನ್ನುಂಟು ಮಾಡುವ ಯಾವುದೇ ಪ್ರಕರಣಗಳು ಎನ್ಐಎ ಅಡಿಯಲ್ಲಿ ಬರುತ್ತದೆ.

ರಾಷ್ಟ್ರೀಯ ಭದ್ರತೆಗೆ ಕುರಿತ ವಿಚಾರಗಳನ್ನು ಕಾಂಗ್ರೆಸ್ ನಾಯಕರುಗಳು ಮತ್ತು ಸಚಿವರುಗಳು ಅಮೆರಿಕಾ ಅಧಿಕಾರಿಗಳೊಂದಿಗೆ ಹಂಚಿಕೊಂಡಿರುವ ವಿಚಾರ ಭಾರೀ ಟೀಕೆಗೊಳಗಾಗುತ್ತಿದ್ದು, ಸಂಸತ್ತಿನಲ್ಲೂ ಕೋಲಾಹಲಕ್ಕೆ ಕಾರಣವಾಗುತ್ತಿದೆ. ಚಿದಂಬರಂ ಹೇಳಿಕೆಯು ಮಂಗಳವಾರ ಸಂಸತ್ತಿನಲ್ಲಿ ಪ್ರತಿಧ್ವನಿಸುವ ಸಾಧ್ಯತೆಗಳಿವೆ.

ವೆಬ್ದುನಿಯಾವನ್ನು ಓದಿ