ಪ್ರತಿಪಕ್ಷದ ನಾಯಕರು, ರಾಜ್ಯದ ಸಚಿವರು, ಕೇಂದ್ರದ ಸಚಿವರು, ಸಂಸದರನ್ನೊಳಗೊಂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ನಿಯೋಗವು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿದ್ದು, ಹಲವು ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದೆ.
ಸೋಮವಾರ ಅಪರಾಹ್ನ ಪ್ರಧಾನಿಯವರನ್ನು ಭೇಟಿ ಮಾಡಿದ ಕರ್ನಾಟಕದ ನಿಯೋಗವು, ರಾಜ್ಯದ ರೇಷ್ಮೆ ಮತ್ತು ಅಡಿಕೆ ಬೆಳೆಗಾರರ ಸಂಕಷ್ಟ ಹಾಗೂ ಹೈದರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ಮಾತುಕತೆ ನಡೆಸಿತು.
ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ, ವಿಧಾನಪರಿಷತ್ ಪ್ರತಿಪಕ್ಷದ ನಾಯಕಿ ಮೋಟಮ್ಮ, ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ, ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರಂ ಸಿಂಗ್, ರಾಜ್ಯದ ಸಚಿವರುಗಳಾದ ವಿ.ಎಸ್. ಆಚಾರ್ಯ, ಎಸ್. ಸುರೇಶ್ ಕುಮಾರ್, ರೇವೂ ನಾಯಕ ಬೆಳಮಗಿ, ಬಿ.ಎನ್. ಬಚ್ಚೇಗೌಡ, ಉಮೇಶ್ ಕತ್ತಿ, ಬಸವರಾಜ ಬೊಮ್ಮಾಯಿ, ಎಸ್.ಎ. ರವೀಂದ್ರನಾಥ್ ಮುಂತಾದವರು ನಿಯೋಗದಲ್ಲಿದ್ದರು.
ಚೀನಾದ ರೇಷ್ಮೆಯನ್ನು ಭಾರತಕ್ಕೆ ಕಡಿಮೆ ದರದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದೆ. ಅದರ ಸುಂಕವನ್ನು ಕೂಡ ಶೇ.30ರಿಂದ ಶೇ.5ಕ್ಕೆ ಇಳಿಸಲಾಗಿದೆ. ಇದರಿಂದ ರಾಜ್ಯದ ರೇಷ್ಮೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜತೆಗೆ ರೇಷ್ಮೆ ಆಮದಿನ ಮೇಲೆ ಕೂಡ ನಿಯಂತ್ರಣ ಹೇರಬೇಕು ಎಂದು ನಿಯೋಗವು ಪ್ರಧಾನಿಯವರನ್ನು ಒತ್ತಾಯಿಸಿತು.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಗುಟ್ಕಾದ ಪ್ಲಾಸ್ಟಿಕ್ ಸ್ಯಾಷೆಗಳು ನಿಷೇಧಕ್ಕೊಳಗಾಗಿವೆ. ಇದರಿಂದ ಗುಟ್ಕಾ ಕಂಪನಿಗಳು ಅಡಿಕೆ ಖರೀದಿ ಮಾಡಲು ಹಿಂದೇಟು ಹಾಕುತ್ತಿವೆ. ಪರಿಣಾಮ ಕರ್ನಾಟಕದ ಅಡಿಕೆ ಬೆಳೆಗಾರರು ತೀವ್ರ ಕಂಗಾಲಾಗಿದ್ದಾರೆ. ಅವರಿಗೆ ವಿಶೇಷ ಪ್ಯಾಕೇಜ್ ರೂಪಿಸಬೇಕು ಎಂದೂ ಮನವಿ ಮಾಡಿಕೊಳ್ಳಲಾಗಿದೆ.
ತೀವ್ರವಾಗಿ ಹಿಂದುಳಿದಿರುವ ಹೈದರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ಸಾಧ್ಯವಿಲ್ಲ ಎಂದು ಇತ್ತೀಚೆಗಷ್ಟೇ ಕೇಂದ್ರ ಸರಕಾರವು ಹೇಳಿರುವುದಕ್ಕೆ ಮತ್ತೆ ಮನವಿ ಮಾಡಿದ ನಿಯೋಗವು, ಈ ದೆಸೆಯಲ್ಲಿ ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತರುವಂತೆ ಆಗ್ರಹಿಸಿತು.
ಕೇಂದ್ರ ಗೃಹಸಚಿವ ಪಿ. ಚಿದಂಬರಂ, ವಿತ್ತ ಸಚಿವ ಪ್ರಣಬ್ ಮುಖರ್ಜಿ, ಕೇಂದ್ರ ಕೃಷಿ ಸಚಿವ ಶರದ್ ಪವಾರ್, ಪರಿಸರ ಸಚಿವ ಜೈರಾಮ್ ರಮೇಶ್ ಮುಂತಾದವರನ್ನು ಕೂಡ ಈ ನಿಯೋಗ ಭೇಟಿ ಮಾಡಲಿದೆ.