ಗಾಯದ ಮೇಲೆ ಮತ್ತೆ ಬರೆ: ದ್ವಿಗುಣವಾದ ವಿಮಾನ ಇಂಧನ ದರ, ವಾಣಿಜ್ಯ ಸಿಲಿಂಡರ್‌ ಕೂಡ ತುಟ್ಟಿ

Sampriya

ಬುಧವಾರ, 1 ಏಪ್ರಿಲ್ 2026 (14:15 IST)
Photo Credit X
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಪರಿಣಾಮದಿಂದಾಗಿ ಭಾರತದಲ್ಲಿ ಕಚ್ಚಾ ತೈಲದ ಅಭಾವ ಹೆಚ್ಚಾಗಿದೆ. ಇದರ ಬೆನ್ನಲ್ಲೇ ವಾಣಿಜ್ಯ ಸಿಲಿಂಡರ್‌, ವಿಮಾನದಲ್ಲಿ ಬಳಸುವ ಇಂಧನದ ದರ ಏರಿಕೆಯಾಗಿದೆ. 

ವಾಣಿಜ್ಯ ಉದ್ದೇಶಕ್ಕೆ ಬಳಸುವ ಎಲ್‌ಪಿಜಿ ಸಿಲಿಂಡರ್ ದರ ₹195.50 ಹೆಚ್ಚಳವಾಗಿದ್ದರೆ, ವಿಮಾನಗಳಲ್ಲಿ ಬಳಸುವ ಇಂಧನ ಬೆಲೆ ದ್ವಿಗುಣಗೊಂಡಿದೆ. ವಿಮಾನ ಇಂಧನ ದರವು ಇದೇ ಮೊದಲ ಬಾರಿಗೆ ದಾಖಲೆಯ ಪ್ರತಿ ಕಿಲೋ ಲೀಟರ್‌ಗೆ ₹2 ಲಕ್ಷ ದಾಟಿದೆ.

ದೆಹಲಿಯಲ್ಲಿ ವಿಮಾನ ಇಂಧನ ದರವು ಪ್ರತಿ ಕಿಲೋ ಲೀಟರ್‌ಗೆ (ಒಂದು ಸಾವಿರ ಲೀಟರ್) ₹110,703 ಹೆಚ್ಚಳವಾಗಿ ₹207,341ಕ್ಕೆ ತಲುಪಿದೆ. ಅಂದರೆ ಬರೋಬ್ಬರಿ ಶೇ 114.5 ರಷ್ಟು ಬೆಲೆ ಏರಿಕೆ ಕಂಡಿದೆ.

022ರಲ್ಲಿ ರಷ್ಯಾ-ಉಕ್ರೇನ್ ಸಂಘರ್ಷದ ಸಮಯದಲ್ಲಿ ಪ್ರತಿ ಕಿಲೋ ಲೀಟರ್‌ಗೆ ₹1.1 ಲಕ್ಷ ಹೆಚ್ಚಿಸಲಾಗಿತ್ತು. ಇದು ಈವರೆಗಿನ ಗರಿಷ್ಠ ಮಟ್ಟವಾಗಿತ್ತು. ಸತತ ಎರಡನೇ ತಿಂಗಳು ಏರಿಕೆ ಕಂಡಿದೆ. ಮಾರ್ಚ್ 1ರಂದು ಶೇ 5.7ರಷ್ಟು (ಪ್ರತಿ ಕಿಲೋ ಲೀಟರ್‌ಗೆ 5,244.75) ಹೆಚ್ಚಿಸಲಾಗಿತ್ತು.

ಯುದ್ಧದಿಂದಾಗಿ ವಾಯುಪ್ರದೇಶ ಮುಚ್ಚಿದ್ದರಿಂದ ಪಶ್ಚಿಮ ಏಷ್ಯಾದ ಗಮ್ಯಸ್ಥಾನಗಳಿಗೆ ಹಾರಾಟ ನಡೆಸಲು ಈಗಾಗಲೇ ಹೆಚ್ಚಿನ ಇಂಧನ ಬಳಸುತ್ತಿರುವ ವಿಮಾನಯಾನ ಸಂಸ್ಥೆಗಳಿಗೆ ಇದು ಮತ್ತಷ್ಟು ಹೊರೆಯಾಗಲಿದೆ. ವಿಮಾನ ಕಾರ್ಯಾಚರಣೆಯ ಒಟ್ಟು ವೆಚ್ಚದ ಶೇ 40ರಷ್ಟು ಇಂಧನಕ್ಕೆ ತಗಲುತ್ತದೆ.

ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮಾರ್ಚ್ 7ರಂದು 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ ₹60 ಹೆಚ್ಚಿಸಲಾಗಿತ್ತು. ದೆಹಲಿಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ ದರ ₹913 ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ