ಇರಾನ್, ಅಮೆರಿಕಾ ಕದನ ವಿರಾಮದಲ್ಲಿ ಪಾಕಿಸ್ತಾನ ಪಾತ್ರ: ವಿಶ್ವಗುರು ಎನ್ನುವ ಮೋದಿ ಫೇಲ್ ಎಂದ ಜೈ ರಾಂ ರಮೇಶ್

Krishnaveni K

ಬುಧವಾರ, 8 ಏಪ್ರಿಲ್ 2026 (12:15 IST)
ನವದೆಹಲಿ: ಇರಾನ್ ಮತ್ತು ಅಮೆರಿಕಾ ನಡುವೆ ಕದನ ವಿರಾಮ ವಿಚಾರದಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿರುವ ಕುರಿತಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಜೈ ರಾಂ ರಮೇಶ್ ವಿಶ್ವ ಗುರು ಎಂದು ಕರೆಯಿಸಿಕೊಳ್ಳುವ ಮೋದಿ ಫೇಲ್ ಆಗಿರುವುದಕ್ಕೆ ಇದು ಉದಾಹರಣೆ ಎಂದಿದ್ದಾರೆ.

ಇರಾನ್ ಮೇಲೆ ಭೀಕರ ದಾಳಿ ನಡೆಸಲು ಹೊರಟಿದ್ದ ಅಮೆರಿಕಾ ನಿನ್ನೆ ದಿಡೀರ್ 15 ದಿನಗಳ ಕದನ ವಿರಾಮ ಘೋಷಿಸಿದೆ. ಕದನ ವಿರಾಮ ಘೋಷಿಸಲು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಸೇನಾ ನಾಯಕ ಆಸಿಫ್ ಮುನೀರ್ ನಡೆಸಿದ ಸಂಧಾನ ಪ್ರಮುಖ ಪಾತ್ರ ವಹಿಸಿದೆ ಎಂದು ಸ್ವತಃ ಟ್ರಂಪ್ ಹೇಳಿಕೆ ನೀಡಿದ್ದರು.

ಇದರ ಬೆನ್ನಲ್ಲೇ ಈಗ ಜೈರಾಂ ರಮೇಶ್ ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿ ಮೋದಿಯವರನ್ನು ಟೀಕಿಸಿದ್ದಾರೆ. ‘ಕದನ ವಿರಾಮ ವಿಚಾರದಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆ ಪ್ರಧಾನಿ ಮೋದಿಯವರ ವೈಭವೀಕರಿಸಿದ ರಾಜತಾಂತ್ರಿಕತೆಯ ವೈಫಲ್ಯತೆಗೆ ಸಾಕ್ಷಿಯಾಗಿದೆ. ಮುಂಬೈ ಭಯೋತ್ಪಾದಕ ದಾಳಿಯ ನಂತರ ಡಾ. ಮನಮೋಹನ್ ಸಿಂಗ್ ಅವರು ಪ್ರದರ್ಶಿಸಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ನಿರಂತರ ಬೆಂಬಲ ನೀಡುತ್ತಿರುವುದರಿಂದ ಪಾಕಿಸ್ತಾನವನ್ನು ಪ್ರತ್ಯೇಕಿಸುವ ಮತ್ತು ಅದು ವಿಫಲ ರಾಷ್ಟ್ರ ಎಂದು ಜಗತ್ತಿಗೆ ಮನವರಿಕೆ ಮಾಡಿಕೊಡುವ ನೀತಿಯು ಸ್ಪಷ್ಟವಾಗಿ ಯಶಸ್ವಿಯಾಗಿಲ್ಲ. ಬಾಹ್ಯ ದಾನಿಗಳ ನೆರವಿನ ಮೇಲೆ ಸಂಪೂರ್ಣವಾಗಿ ಅವಲಂಬಿತವಾದ ದಿವಾಳಿಯಾದ ಆರ್ಥಿಕತೆ ಮತ್ತು ಹಲವು ವಿಧಗಳಲ್ಲಿ ಮುರಿದುಬಿದ್ದ ದೇಶವು ಪ್ರಧಾನಿ ಮೋದಿಯವರ ರಾಜತಾಂತ್ರಿಕ ಕಾರ್ಯತಂತ್ರ ಮತ್ತು ನಿರೂಪಣಾ ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಎಲ್ಲೆಡೆ ಸ್ಪಷ್ಟವಾದ ಸಮಾಧಾನದ ಭಾವನೆ ಇದೆ. ವಿದೇಶಾಂಗ ಸಚಿವರು ಪಾಕಿಸ್ತಾನವನ್ನು ದಲ್ಲಾಳಿ ಎಂದು ತಳ್ಳಿಹಾಕಿದ್ದರು. ಆದರೆ ಈಗ ಸ್ವಯಂ ಘೋಷಿತ ವಿಶ್ವ ಗುರು ಸಂಪೂರ್ಣವಾಗಿ ಬಹಿರಂಗಗೊಂಡಿದ್ದಾರೆ - ಅವರ ಸ್ವಯಂ ಘೋಷಿತ 56 ಇಂಚಿನ ಎದೆ ಕುಗ್ಗಿದೆ’ ಎಂದು ಜೈ ರಾಂ ರಮೇಶ್ ಲೇವಡಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ