ಭುಜದ ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಸೋನಿಯಾ ಗಾಂಧಿ

ಶುಕ್ರವಾರ, 5 ಆಗಸ್ಟ್ 2016 (08:42 IST)
ಮಂಗಳವಾರ ಮಧ್ಯರಾತ್ರಿ ವಾರಾಣಸಿಯಲ್ಲಿ ರೋಡ್‌ ಷೋ ನಡೆಸುವ ವೇಳೆ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದ ಸೋನಿಯಾ ಗಾಂಧಿ ಅವರ ಆರೋಗ್ಯ ಸುಧಾರಿಸುತ್ತಿದ್ದು ಸದ್ಯದಲ್ಲೇ ಅವರನ್ನು ತೀವ್ರ ನಿಗಾ ಘಟಕದಿಂದ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಗಂಗಾರಾಂ ಆಸ್ಪತ್ರೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ. ಡಿ.ಎಸ್‌. ರಾಣಾ ತಿಳಿಸಿದ್ದಾರೆ.

ಅಸ್ವಸ್ಥರಾಗಿ ಕುಸಿದ ಸೋನಿಯಾ ಅವರ ಭುಜದ ಮೂಳೆ ಮುರಿದಿದ್ದರಿಂದ ಗುರುವಾರ ಶಸ್ತ್ರಚಿಕಿತ್ಸೆಗೊಳಗಾದರು.

‘ಇತ್ತೀಚಿಗೆ ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಮಂಡಿ ಶಸ್ತ್ರ ಚಿಕಿತ್ಸೆ ಮಾಡಿದ್ದ ಮುಂಬೈನ ತಜ್ಞ ವೈದ್ಯರಾದ ಸಂಜಯ್‌ ದೇಸಾಯಿ ಮತ್ತು ಗಂಗಾರಾಂ ಆಸ್ಪತ್ರೆಯ ಡಾ. ಪ್ರತೀಕ್‌ ಗುಪ್ತಾ ಅವರನ್ನು ಒಳಗೊಂಡ ಅಂತರರಾಷ್ಟ್ರೀಯ ಮಟ್ಟದ ವೈದ್ಯರ ತಂಡವು ಸೋನಿಯಾ ಅವರ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿತ್ತು ಡಾ.ರಾಣಾ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಶಸ್ತ್ರ ಚಿಕಿತ್ಸೆ ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆಯಾಗುತ್ತಿದ್ದು ಸದ್ಯವೇ ಐಸಿಯುನಿಂದ ಸ್ಥಳಾಂತರಿಸಲಾಗುವುದು. ಒಂದು ವಾರದಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಸಾಧ್ಯತೆಗಳಿವೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಮಂಗಳವಾರ ಮಧ್ಯರಾತ್ರಿ ವಾರಾಣಸಿಯಲ್ಲಿ ರೋಡ್‌ ಷೋ ನಡೆಸುವ ವೇಳೆ ಅಸ್ವಸ್ಥರಾಗಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಸೋನಿಯಾ ಅವರನ್ನು ದೇಹಲಿಯ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರನ್ನು ಗಂಗಾರಾಂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಮುಂದಿನ ಮೂರು ತಿಂಗಳಲ್ಲಿ  ಅವರ  ಭುಜದ ಚಲನೆ ಸುಗಮವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ