ಜಮ್ಮು-ಕಾಶ್ಮೀರ, ರಾಜಸ್ಥಾನದಲ್ಲಿ 5.7 ತೀವ್ರತೆಯ ಭೂಕಂಪನ

ಸೋಮವಾರ, 21 ಮಾರ್ಚ್ 2011 (16:29 IST)
ಜಪಾನ್ ಸುನಾಮಿ ಭೀತಿ ಮತ್ತು ಸೂಪರ್ ಮೂನ್ ವದಂತಿಗಳು ಜನತೆಯನ್ನು ಹೈರಾಣಾಗಿಸಿದ ಬೆನ್ನಿಗೆ ಜಮ್ಮು-ಕಾಶ್ಮೀರ ಮತ್ತು ರಾಜಸ್ಥಾನಗಳಲ್ಲಿ ಲಘು ಭೂಕಂಪನಗಳು ನಡೆದಿರುವ ವರದಿಗಳು ಬಂದಿವೆ.

ಸೋಮವಾರ ಅಪರಾಹ್ನ 3.19ರ ಹೊತ್ತಿಗೆ ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆ ದಾಖಲಾಗಿರುವ ಈ ಭೂಕಂಪನ ಜಮ್ಮು-ಕಾಶ್ಮೀರದ ಶ್ರೀನಗರ ಮತ್ತು ಜಮ್ಮು ನಗರಗಳಲ್ಲಿ ಹಾಗೂ ರಾಜಸ್ಥಾನದ ಜೈಪುರದಲ್ಲಿ ಅನುಭವಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆಯ ಭೂಕಂಪನ ಶ್ರೀನಗರ ಮತ್ತು ಇತರ ಪ್ರದೇಶಗಳಲ್ಲಿ ದಾಖಲಾಗಿದೆ ಎಂದು ಸ್ಥಳೀಯ ಹವಾಮಾನ ಕಚೇರಿಯ ನಿರ್ದೇಶಕಿ ಸೋನಮ್ ಲೋಟಸ್ ಖಚಿತಪಡಿಸಿದ್ದಾರೆ.

ಕಡಿಮೆ ತೀವ್ರತೆಯನ್ನು ಹೊಂದಿದ್ದ ಈ ಭೂಕಂಪನದ ಕೇಂದ್ರ ಬಿಂದು ಅಫಘಾನಿಸ್ತಾನದಲ್ಲಿರುವ ಹಿಂದೂಖುಷ್ ಪ್ರದೇಶ. ಇಲ್ಲಿಂದ ಉತ್ತರಕ್ಕೆ 36.5 ಡಿಗ್ರಿ ಅಕ್ಷಾಂಶ ರೇಖೆಯಲ್ಲಿ ಹಾಗೂ ಪೂರ್ವಕ್ಕೆ 17.9 ರೇಖಾಂಶದಲ್ಲಿ ಭೂಕಂಪನ ನಡೆದಿದೆ. ಘಟನೆಯಿಂದ ಯಾವುದೇ ಆಸ್ತಿಪಾಸ್ತಿ ಹಾನಿಯಾಗಿರುವ ಬಗ್ಗೆ ಇದುವರೆಗೆ ವರದಿಗಳು ಬಂದಿಲ್ಲ.

ಉತ್ತರ ಪಾಕಿಸ್ತಾನ ಮತ್ತು ದೆಹಲಿಯಲ್ಲೂ ಲಘು ಪ್ರಮಾಣದಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಇದರ ಪ್ರಮಾಣ 3.2ರಷ್ಟು ದಾಖಲಾಗಿದೆ.

ಕಳೆದ ಸೋಮವಾರ (ಮಾರ್ಚ್ 14) ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ 3.3 ತೀವ್ರತೆಯ ಭೂಕಂಪನ ವರದಿಯಾಗಿತ್ತು. ಅಂದು ಕೂಡ ಅಪರಾಹ್ನ 2.31ಕ್ಕೆ ಇದು ನಡೆದಿತ್ತು.

ವೆಬ್ದುನಿಯಾವನ್ನು ಓದಿ