ವಿದ್ಯಾರ್ಥಿಯನ್ನು ಬೆನ್ನಟ್ಟಿ ಗುಂಡಿಕ್ಕಿ ಕೊಂದ ಸಚಿವನ ಪುತ್ರ
ಸೋಮವಾರ, 21 ಮಾರ್ಚ್ 2011 (15:42 IST)
ಮಣಿಪುರ ಸಚಿವರೊಬ್ಬರ ಪುತ್ರ 21ರ ಹರೆಯದ ವಿದ್ಯಾರ್ಥಿಯೊಬ್ಬನನ್ನು ತುಂಬಾ ದೂರ ಬೆನ್ನಟ್ಟಿದ ನಂತರ ಗುಂಡಿಕ್ಕಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.
ಮಣಿಪುರದ ನೀರಾವರಿ, ನೆರೆ ನಿಯಂತ್ರಣ ಮತ್ತು ಕ್ರೀಡಾ ಸಚಿವ ಎನ್. ಬಿರೇನ್ ಸಿಂಗ್ ಅವರ 27ರ ಪುತ್ರ ಅಜಯ್ ಮೈತಾಯ್ ಎಂಬಾತನೇ ಆರೋಪಿ. ಬಲಿಯಾದ ವಿದ್ಯಾರ್ಥಿನಿಯನ್ನು ಇರೋಮ್ ರೋಜರ್ ಎಂದು ಗುರುತಿಸಲಾಗಿದೆ.
ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಭಾನುವಾರ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ರೋಜರ್ ತೆರಳುತ್ತಿದ್ದ ವಾಹನವನ್ನು ಬೆನ್ನಟ್ಟಿ ತನ್ನ ಎಂ-20 ಪಿಸ್ತೂಲಿನಿಂದ ಗುಂಡಿಕ್ಕಿ ಅಜಯ್ ಕೊಂದಿದ್ದಾನೆ. ಘಟನೆಯ ನಂತರ ಪೊಲೀಸರಿಗೆ ಪಿಸ್ತೂಲನ್ನು ಆರೋಪಿ ಒಪ್ಪಿಸಿದ್ದಾನೆ.
ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ರೋಜರ್ ಮನೆಯ ಆಸುಪಾಸಿನ ನೂರಾರು ನಿವಾಸಿಗಳು ಮುಖ್ಯಮಂತ್ರಿಯವರ ಮನೆಗೆ ತೆರಳಿ, ಸಚಿವರ ಪುತ್ರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸಚಿವ ಬಿರೇನ್ ಸಿಂಗ್ ನಿವಾಸದತ್ತ ಸಾರ್ವಜನಿಕರು ರ‌್ಯಾಲಿ ನಡೆಸಲು ಸಿದ್ಧತೆ ನಡೆಸಿರುವುದು ಗಮನಕ್ಕೆ ಬಂದ ನಂತರ ಮುನ್ನೆಚ್ಚೆರಿಕೆ ಕ್ರಮವಾಗಿ ಸಚಿವರ ಮನೆಗೆ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿದೆ.