ಟೆಸ್ಟ್‌ನಲ್ಲಿ ಅಗ್ರಸ್ಥಾನ ಹಂಚಿಕೊಂಡ ಸಚಿನ್, ಕಾಲಿಸ್

ಶನಿವಾರ, 8 ಜನವರಿ 2011 (10:14 IST)
ನೂತನವಾಗಿ ಬಿಡುಗಡೆಗೊಂಡಿರುವ ಐಸಿಸಿ ಬ್ಯಾಟಿಂಗ್ ರ‌್ಯಾಂಕಿಂಗ್ ಪಟ್ಟಿನಲ್ಲಿ ಅಗ್ರಸ್ಥಾನವನ್ನು ಭಾರತದ ಸಚಿನ್ ತೆಂಡೂಲ್ಕರ್ ಮತ್ತು ದಕ್ಷಿಣ ಆಫ್ರಿಕಾದ ಜಾಕ್ವಾಸ್ ಕಾಲಿಸ್ ಹಂಚಿಕೊಂಡಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವುದೇ ಇವರಿಬ್ಬರ ರ‌್ಯಾಂಕಿಂಗ್‌ನಲ್ಲಿ ಏರುಗತಿ ಕಾಣಲು ಕಾರಣವಾಗಿದೆ.

ಕೇಪ್‌ಟೌನ್ ಪಂದ್ಯದಲ್ಲಿ ಸಚಿನ್ 146 ಮತ್ತು ಅಜೇಯ 14 ಗಳಿಸಿದ್ದರೆ ಕಾಲಿಸ್ ಎರಡೂ ಇನ್ನಿಂಗ್ಸ್‌ಗಳಲ್ಲಿಯೂ ಅಮೋಘ ಶತಕಗಳ (161 ಮತ್ತು 109*) ಸಾಧನೆ ಮಾಡಿದ್ದರು. ಇದರಿಂದಾಗಿ ಶ್ರೀಲಂಕಾ ನಾಯಕ ಕುಮಾರ ಸಂಗಕ್ಕರ ತಮ್ಮ ಅಗ್ರಸ್ಥಾನ ಕಳೆದುಕೊಳ್ಳುವಂತಾಗಿದೆ.

ಸಮಾನ 883 ಅಂಕಗಳನ್ನು ಹೊಂದಿರುವ ಸಚಿನ್ ಮತ್ತು ಕಾಲಿಸ್ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಇದರಿಂದಾಗಿ ಸಂಗಕ್ಕರ ಮೂರನೇ ಸ್ಥಾನಕ್ಕೆ ಕುಸಿಯುವಂತಾಗಿದೆ.

ಇದರೊಂದಿಗೆ ಟೆಸ್ಟ್‌ನಲ್ಲಿ 10ನೇ ಬಾರಿಗೆ ಸಚಿನ್ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟರು. 1994ರಲ್ಲಿ ಮುಂಬೈನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ತನ್ನ 33ನೇ ಟೆಸ್ಟ್‌ ಪಂದ್ಯದಲ್ಲಿ ಸಚಿನ್ ಮೊದಲ ಬಾರಿಗೆ ಅಗ್ರ ಶಿಖರವನ್ನೇರಿದ್ದರು.

ಮತ್ತೊಂದೆಡೆ ಎರಡು ಸ್ಥಾಗಳ ಕುಸಿತ ಅನುಭವಿಸಿರುವ ವೀರೇಂದ್ರ ಸೆಹ್ವಾಗ್ ಆರಕ್ಕೆ ತಲುಪಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಕಳಪೆ ಸರಣಿಯೇ ವೀರು ಹಿನ್ನೆಡೆಗೆ ಕಾರಣವಾಗಿದೆ. ಆದರೆ ಕಲಾತ್ಮಕ ವಿವಿಎಸ್ ಲಕ್ಷ್ಮಣ್ (9) ಸ್ಥಾನದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಪರಿಣಾಮಕಾರಿ ಎನಿಸಿಕೊಂಡಿರುವ ಗೌತಮ್ ಗಂಭೀರ್ ಅಗ್ರ 20ರೊಳಗೆ ಲಗ್ಗೆಯಿಟ್ಟಿದ್ದು, 15ನೇ ಸ್ಥಾನಕ್ಕೆ ತಲುಪಿದ್ದಾರೆ.

ಬೌಲಿಂಗ್ ಪಟ್ಟಿಯನ್ನು ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್ ಮುನ್ನಡೆಸುತ್ತಿದ್ದು, ಭಾರತದ ಜಹೀರ್ ಖಾನ್ ಮತ್ತು ಹರಭಜನ್ ಸಿಂಗ್ ಕ್ರಮವಾಗಿ ಐದು ಮತ್ತು ಎಂಟನೇ ಸ್ಥಾನದಲ್ಲಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವೆಬ್ದುನಿಯಾವನ್ನು ಓದಿ