ಕ್ರಿಕೆಟ್ ಲೋಕದ ದೇವರು ಸಚಿನ್ ತೆಂಡುಲ್ಕರ್ ಜನ್ಮದಿನ: ಸಚಿನ್ ಗೆ ಸಚಿನ್ ಎಂದು ಹೆಸರಿಟ್ಟಿದ್ದೇಕೆ

Krishnaveni K

ಬುಧವಾರ, 24 ಏಪ್ರಿಲ್ 2024 (09:19 IST)
Photo Courtesy: Twitter
ಮುಂಬೈ: ಕ್ರಿಕೆಟ್ ಲೋಕ ಕಂಡ ಅಪ್ರತಿಮ ಸಾಧಕ, ಕ್ರಿಕೆಟ್ ದೇವರು ಎಂದೇ ಕರೆಯಿಸಿಕೊಳ್ಳುವ ಸಚಿನ್ ತೆಂಡುಲ್ಕರ್ ಜನ್ಮದಿನವಿಂದು. ಇಂದು ಅವರು 51 ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ.

ಭಾರತದ ಪರ 200 ಟೆಸ್ಟ್ ಪಂದ್ಯವಾಡಿ 15,000 ರನ್ ಮತ್ತು 463 ಏಕದಿನ ಪಂದ್ಯವಾಡಿ 18,000 ರನ್ ಗಳಿಸಿದ ರನ್ ಮೆಷಿನ್ ಸರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗನಾಗಿದ್ದಾರೆ. ಇತ್ತೀಚೆಗೆ ಕ್ರಿಕೆಟ್ ಲೋಕದ ಕಿಂಗ್ ಎಂದೇ ಕರೆಯಿಸಿಕೊಳ್ಳುವ ವಿರಾಟ್ ಕೊಹ್ಲಿಗೂ ಸಚಿನ್ ಎಂದರೆ ಆರಾಧ್ಯ ದೈವ.

ಸಚಿನ್ ಆಟದಲ್ಲಿ ಎಷ್ಟು ಚುರುಕಾಗಿದ್ದರೋ, ಬಾಲ್ಯದಲ್ಲಿ ಅಷ್ಟೇ ತುಂಟ. ಅವರ ತುಂಟಾಟ ವಿಪರೀತವಾಗಿ ಪೋಷಕರಿಗೂ ಅವರನ್ನು ಕಂಟ್ರೋಲ್ ಮಾಡಲು ಕಷ್ಟವಾಗುತ್ತಿಂತೆ. ನಾನೊಬ್ಬ ಹೈಪರ್ ಆಕ್ಟಿವ್ ಮಗುವಾಗಿದ್ದೆ ಎಂದು ಸ್ವತಃ ಸಚಿನ್ ಅನೇಕ ಬಾರಿ ಹೇಳಿದ್ದಿದೆ.

ಮಹಾರಾಷ್ಟ್ರದ ಸಾಂಪ್ರದಾಯಿಕ ಕುಟುಂದಲ್ಲಿ ಹುಟ್ಟಿದ್ದ ಸಚಿನ್ ತೆಂಡುಲ್ಕರ್ ತಂದೆ ರಮೇಶ್ ತೆಂಡುಲ್ಕರ್, ಪ್ರೊಫೆಸರ್, ಸಾಹಿತಿ ಕೂಡಾ ಆಗಿದ್ದರು. ಸಂಗೀತ ಪ್ರೇಮಿಯಾಗಿದ್ದ ಸಚಿನ್ ತಂದೆಗೆ ಅಂದು ಖ್ಯಾತರಾಗಿದ್ದ ಸಂಗೀತ ನಿರ್ದೇಶಕ ಸಚಿನ್ ದೇವ್ ಬರ್ಮನ್ ಎಂದರೆ ಅಚ್ಚುಮೆಚ್ಚಾಗಿದ್ದರಂತೆ.

ಹೀಗಾಗಿ ಅವರ ಮೇಲಿನ ಅಭಿಮಾನದಿಂದ ತಮ್ಮ ಮಗನಿಗೂ ರಮೇಶ್ ತೆಂಡುಲ್ಕರ್ ಸಚಿನ್ ಎಂದು ನಾಮಕರಣ ಮಾಡಿದ್ದರು. ಸಚಿನ್ 17 ರ ಪುಟ್ಟ ವಯಸ್ಸಿನಲ್ಲೇ ಪಾಕ್ ನ ಘಟಾನುಘಟಿ ವೇಗಿಗಳ ಎದೆ ನಡುಗಿಸಿದವರು. ಅವರ ದಿಟ್ಟ ಆಟ, ದಾಖಲೆಯ ಮೇಲೆ ದಾಖಲೆ ಮಾಡುವುದನ್ನು ನೋಡಿ ಎಷ್ಟೋ ಮಂದಿ ತಮ್ಮ ಮಕ್ಕಳೂ ಅವರಂತಾಗಲಿ ಎಂದು ಸಚಿನ್ ಎಂದು ಹೆಸರಿಟ್ಟಿದ್ದು ಇದೆ.  1989 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಆರಂಭಿಸಿದ ಸಚಿನ್ ಬಳಿಕ 2006 ವರೆಗೂ ಸಕ್ರಿಯವಾಗಿ ಕ್ರಿಕೆಟ್ ನಲ್ಲಿದ್ದರು. ದಾಖಲೆಗಳ ವೀರನಾಗಿದ್ದ ಸಚಿನ್ ಭಾರತ ರತ್ನ ಪಡೆದ ಏಕೈಕ ಕ್ರಿಕೆಟಿಗ. ಅವರ ಜನ್ಮದಿನಕ್ಕೆ ಅಭಿಮಾನಗಳೆಲ್ಲರೂ ಇಂದು ಶುಭ ಕೋರುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ