ಕಾಲ ಬದಲಾದರೂ ನೆನಪುಗಳು ಬದಲಾಗದು….

ಶನಿವಾರ, 26 ಅಕ್ಟೋಬರ್ 2019 (16:18 IST)
ಉಡುಪಿ: ಎಣ್ಣೆ ಸ್ನಾನ, ತುಳಸಿ ಪೂಜೆ, ಪ್ರತೀ ಗದ್ದೆಗೆ ಹೂ ದೀಪ ಹಚ್ಚೋದು, ಹಬ್ಬದಡುಗೆಯ ಖುಷಿ.....ಈ ಸಂಭ್ರಮಗಳ ತೂಕ ಒಂದಾದರೆ ನನ್ನಂತವರಿಗೆ ಈ ಗೋಪೂಜೆ ಯ ಸಂಭ್ರಮವೇ ಇನ್ನೊಂದು ತೂಕ!




ಬೆಳ್ಳಂಬೆಳಗ್ಗೆ  ದನಗಳಿಗೆಲ್ಲ ಸಾಲು ಸಾಲು ಸ್ನಾನ..ರಾತ್ರಿಯ ತುಳಸಿಪೂಜೆಯ ಬಿಳಿ ಹಳದಿ ಸೇವಂತಿಗೆ, ಮಲ್ಲಿಗೆ, ಸಿಂಗಾರದ ಹೂ(ಅಡಿಕೆ ಹೂ) ದಾಸವಾಳ, ತಾವರೆಯ ಹೂವುಗಳನ್ನೆಲ್ಲ ಬಾಳೆನಾರಿನಲ್ಲಿ ಮಾಲೆ ಮಾಡಿ ಗೌರಿ, ಕೆಂಪಿ, ಲಕ್ಷ್ಮಿ, , ಗುರು, ಇನ್ನೂ ಹೆಸರಿಡದ ತಿಂಗಳ ಅಂಬಾಬೂಚಿ ಇವುಗಳಿಗೆಲ್ಲ ಹಾರ ಹಾಕಿ..ಮೈಗೆಲ್ಲ ಅಕ್ಕಿಬಂದ/ಬಿಳಿಶೇಡಿ/ಕುಂಕುಮದ ದ್ರಾವಣ ಮಾಡಿ ಉರುಟುರುಟಾಗಿ ಮೈಗೆಲ್ಲ ಹಚ್ಚಿ ಅಲಂಕರಿಸಿ, ತಟ್ಟಯಲ್ಲಿಟ್ಟು ಕೊಟ್ಟ  ಕಡುಬುಗಳನ್ನೆಲ್ಲ ಗುಳುಂ ಗುಳುಂ ನುಂಗಿ ಮತ್ತೂ ಇಣುಕಿ, ಶ್ರದ್ದೆಯಿಂದ ಆರತಿ ಬೆಳಗಿ, ಶಂಖ, ಜಾಗಟೆ, ಪಟಾಕಿಯ ಹಿಮ್ಮೇಳದೊಂದಿಗೆ ಅವುಗಳನ್ನು ಮೇವಿಗಟ್ಟುವ ಹುರುಪದೆಷ್ಟು ಸಂಭ್ರಮ!!!!



ಜಾಗಟೆಯ ರಗಳೆಗೆ ಬಾಲವೆತ್ತಿ ಕಿವಿನಿಮಿರಿಸಿಕೊಂಡು ಚಂಗನೇ ಹಾರುವ ಬೆಣ್ಣೆಗರು, ಪಕ್ಕದ ದನದ ಕುತ್ತಿಗೆಯಲ್ಲಿನ ಹಾರದ ಹೂವನ್ನು ಕಿತ್ತು ತಿಂದು ಮುಗ್ಧವಾಗಿ ಮೇಲೆಕೆಳಗೆ ನೋಡುವ ಗೋವುಗಳು ಅದೆಷ್ಟು ಚಂದ.


ಇನ್ನು  ಪಟಾಕಿಗಳ ಸಂಭ್ರಮಕ್ಕೆ ಮನೆಯಿಂದ ಮಾರುದೂರ ಹೋಗಿ ಬರುವ ನಾಯಿ, ಪಡಸಾಲೆ ಕೋಣೆಯ ಅಟ್ಟದ ಮೂಲೆಯಲ್ಲೇ ಕಾದುಕೂತ ಬೆಕ್ಕು ಎಲ್ಲವಕ್ಕೂ ಮರುದಿನದ ನಾನ್ ವೆಜ್ಜೇ ಸಡಗರದ ಹಬ್ಬ ..

 
ಕಾಲ ಬದಲಾದರೂ ನೆನಪುಗಳು ಬದಲಾಗದು. ಅಮ್ಮಾ ಮತ್ತು ಅಂಬಾ ಈ ಎರಡೂ,  ಅದ್ಭುತ ಅನ್ನೋದರ ಪರ್ಯಾಯ ಪದ. ಗೋಪೂಜೆಯ ನೆನಪುಗಳೆಲ್ಲ ಈಗಿನ ಅನುಕೂಲಶಾಸ್ತ್ರದ ಆಚರಣೆಯೆಡೆಯಲ್ಲಿ ಮನದಂಗಳದಲ್ಲಿ ಸದ್ದು ಮಾಡುತ್ತಾ ಹಾದು ಹೋದಂಗಾಯ್ತು.



-ವಾಣಿ ಶೆಟ್ಟಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ