ಯಡಿಯೂರಪ್ಪ 'ಜೈಲು ಯಾತ್ರೆ'ಯೂ, ಮಾಧ್ಯಮಗಳ ಕರ್ತವ್ಯ ಪ್ರಜ್ಞೆಯೂ!

ಅವಿನಾಶ್ ಬಿ.
1984ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ನಂತರ, ಆಕೆಯನ್ನು ಅವರ ಸಿಖ್ ಸಮುದಾಯದ ಅಂಗರಕ್ಷಕ ಗುಂಡಿಟ್ಟು ಕೊಂದನೆಂಬ ಏಕೈಕ ಕಾರಣಕ್ಕೆ ಸಾವಿರಾರು ನಿಷ್ಪಾಪಿ ಸಿಖ್ಖರನ್ನು ಕೊಚ್ಚಿ ನರಮೇಧ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದರು - "ಹೆಮ್ಮರವೊಂದು ಉರುಳಿ ಬಿದ್ದಾಗ, ಭೂಮಿಯೇ ಅದುರುವುದು ಸಹಜ"! ಇದು ನೆನಪಾಗಿದ್ದು, ಜನಸಂಘದ ಕಾಲದಿಂದಲೂ ಪಕ್ಷ ಕಟ್ಟುತ್ತಾ, ಇಬ್ಬರೇ ಶಾಸಕರಿದ್ದ ಬಿಜೆಪಿಯನ್ನು ಕರ್ನಾಟಕದಲ್ಲಿ ಅಧಿಕಾರದ ಪಟ್ಟಕ್ಕೇರಿಸಿ, ಇದೀಗ 'ಮಹಾ ಪತನ'ಗೊಂಡ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಎಂಬ ಹೋರಾಟಗಾರ ಪರಪ್ಪನ ಅಗ್ರಹಾರದ ಜೈಲಿನೊಳಗೆ ಹೋದಾಗ. ಇದು ರಾಜ್ಯದ ಅತಿದೊಡ್ಡ ದುರಂತಗಳಲ್ಲಿ ಒಂದು ಎಂಬುದರಲ್ಲಿಯೂ ಎರಡು ಮಾತಿಲ್ಲ ಅಂತ ಮೊದಲೇ ಹೇಳಿಬಿಡುತ್ತೇನೆ.

WD
ಹೋರಾಟಗಾರ ಎಂಬ ಪದಕ್ಕೆ ಕೆಲವರ ಆಕ್ಷೇಪವಿರಬಹುದು. ಆದರೆ, 1975ರಲ್ಲಿ ತುರ್ತು ಪರಿಸ್ಥಿತಿ ಕಾಲದಲ್ಲಿ 45 ದಿನಗಳ ಕಾಲ ಹುಬ್ಬಳ್ಳಿ ಮತ್ತು ಬೆಂಗಳೂರು ಕೇಂದ್ರ ಕಾರಾಗೃಹಗಳಲ್ಲಿ ಕಳೆದಿದ್ದ ಯಡಿಯೂರಪ್ಪ ಅವರಿಗೆ ಜೈಲು ಎಂಬುದು ತೀರಾ ಅರಿಯದ ಸಂಗತಿಯೇನಲ್ಲವಾದರೂ, ಈಗ ಜೈಲು ಪಾಲಾಗಿರುವುದು ತಮ್ಮ ಪುತ್ರವ್ಯಾಮೋಹದಿಂದಾಗಿ ಜಮೀನನ್ನು ಡೀನೋಟಿಫೈ ಮಾಡಿ, ತಮ್ಮ ಮಕ್ಕಳಿಗೆ ಅದೇ ಜಮೀನನ್ನು ಕಡಿಮೆ ದುಡ್ಡಿಗೆ ಕೊಡಿಸಿದರು ಎಂಬ ಆರೋಪಕ್ಕೆ ಸಂಬಂಧಿಸಿದ ಖಾಸಗಿ ಕೇಸುಗಳ ರಾಶಿಯಿಂದಾಗಿ. ಅವರು ಪೊಲೀಸರ ಬಂಧನಕ್ಕೆ ಸಿಲುಕದೆ, ತಾವಾಗಿಯೇ ಶರಣಾಗತರಾಗಿ, ಬಿಜೆಪಿ ಮತ್ತು ತಮ್ಮ ಮಾನ ಉಳಿಸಲು ನೋಡಿದ್ದಾರೆ. ಆದರೆ, ಕೋರ್ಟಿನಿಂದ ಜೈಲು, ಜೈಲಿನಿಂದ ಆಸ್ಪತ್ರೆ ಮತ್ತು ಮರಳಿ ಜೈಲಿಗೆ ಹೋದ ಈ ಘಟನಾವಳಿಗಳನ್ನು ದೃಶ್ಯ ಮಾಧ್ಯಮಗಳಲ್ಲಿ ವೀಕ್ಷಿಸುತ್ತಿದ್ದಾಗ, ಮತ್ತು ವೆಬ್‌ದುನಿಯಾ ಓದುಗರು ಕೆಲವರು ಸುದ್ದಿಗಳಲ್ಲಿ ದಾಖಲಿಸಿದ ಕಾಮೆಂಟುಗಳನ್ನು ನೋಡಿದಾಗ ಈ ಬಗ್ಗೆ ಬರೆಯಲೇಬೇಕೆನಿಸಿತು.

ಒಂದು ಕಾಲವಿತ್ತು. 'ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು' ಅಂತ ಸ್ವತಃ ವಿರೋಧ ಪಕ್ಷಗಳವರೂ ಒಪ್ಪುತ್ತಿದ್ದ ಕಾಲವದು. ಇನ್ನು ಇಪ್ಪತ್ತು ವರ್ಷ ಈ ಯಡಿಯೂರಪ್ಪನೇ ಸರ್ಕಾರ ನಡೆಸುತ್ತಾನೆ ಅಂತ ಅವರೇ ಹಲವು ಸಭೆ ಸಮಾರಂಭಗಳಲ್ಲಿ ಆತ್ಮವಿಶ್ವಾಸದಿಂದ ಹೇಳಿಕೊಂಡದ್ದಿದೆ ಮತ್ತು ಪ್ರತಿ ಉಪ ಚುನಾವಣೆಗಳಲ್ಲಿಯೂ ಅವರು ಬಿಜೆಪಿಗೆ ವಿಜಯ ದೊರಕಿಸಿಕೊಡುವ ಮೂಲಕ ಅದನ್ನು ಸಾಧಿಸಲು ಹೊರಟಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಷಯ. ಬಹುಶಃ ಇದುವೇ ಎಡವಟ್ಟಾಗಿರುವುದು.

ಆದರೆ, ನಾಲ್ಕನೇ ಆಧಾರಸ್ಥಂಭವಾದ ಸುದ್ದಿ ಮಾಧ್ಯಮದ ನಡೆ ಎತ್ತ...?
ಇಷ್ಟು ಹೇಳಿ, ಒಂದು ಪ್ರಜಾಪ್ರಭುತ್ವದ ಅಳಿವು ಉಳಿವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದೊಂದಿಗೆ ಮಾಧ್ಯಮರಂಗವೂ ನಾಲ್ಕನೇ ಸ್ತಂಭವಾಗಿದೆ ಎಂಬ ಚರ್ವಿತ ಚರ್ವಣ ಮಾತನ್ನು ಈಗಲೂ ಕೇಳುತ್ತಿದ್ದೇವೆ. ಕಾರ್ಯಾಂಗ ಮತ್ತು ಶಾಸಕಾಂಗಗಳಿಗೆ ಭ್ರಷ್ಟತೆಯ ಬಣ್ಣ ಅಂಟಿಕೊಂಡು ಅದೆಷ್ಟೋ ಸಮಯ ಕಳೆದಿದೆ. ಆದರೀಗ, ಮಾಧ್ಯಮ ರಂಗಕ್ಕೂ ಈ ಕಳಂಕ ಬಂದಿದೆ ಮತ್ತು ಅದನ್ನು ಎಗ್ಗಿಲ್ಲದೆ ತೋರ್ಪಡಿಸಿಕೊಳ್ಳಲಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ಈ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಸಾಕ್ಷಿ. 2ಜಿ ಹಗರಣಕ್ಕೆ ಸಂಬಂಧಿಸಿದಂತೆ ನೀರಾ ರಾಡಿಯಾ ಎಂಬ ಕಾರ್ಪೊರೇಟ್ ಕುಳ ಬಯಲಿಗೆಳೆದ ಮಾಹಿತಿಯನ್ನೇ ನೋಡಿ, ಹಲವು 'ಮಹಾನ್' ಪತ್ರಕರ್ತರ ಬಣ್ಣ ಬಯಲಾಗಿದೆ. ಆ ನಂತರ, ನೋಟಿಗಾಗಿ ಓಟು ಅಥವಾ ಓಟಿಗಾಗಿ ನೋಟು ಎಂಬ, ಈ ದೇಶದ ಪ್ರಜಾತಂತ್ರ ವ್ಯವಸ್ಥೆಗೇ ಕಪ್ಪು ಚುಕ್ಕೆಯಾಗಿಬಿಟ್ಟ ಹಗರಣದಲ್ಲಿ ಮತ್ತೊಂದು ದೃಶ್ಯ ಮಾಧ್ಯಮದ ಹೆಸರಿಗೆ ಸೆಗಣಿ ಮೆತ್ತಿಕೊಂಡಿತ್ತು. ಇವುಗಳನ್ನೆಲ್ಲಾ ಒತ್ತಟ್ಟಿಗಿರಿಸಿ, ಕರ್ನಾಟಕದ ಮಾಧ್ಯಮರಂಗದಲ್ಲೂ ಇಂಥದೇ ಬೆಳವಣಿಗೆಯಾಗುತ್ತಿದೆಯೇ ಎಂಬ ಶಂಕೆಯೇ ಆತಂಕಕಾರಿ ಸಂಗತಿ.

ಈಗ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಮೀನನ್ನು ಡೀನೋಟಿಫೈ ಮಾಡಿಸಿ, ತಮ್ಮ ಪುತ್ರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಮತ್ತು ಇದು ಭ್ರಷ್ಟಾಚಾರ ಎಂಬ ಕಾರಣಕ್ಕೆ ಅವರ ವಿರುದ್ಧ ಕೇಸು ದಾಖಲಾಗಿದೆ, ಅವರು ನ್ಯಾಯಾಂಗ ಬಂಧನಕ್ಕೆ ಹೋಗುವ ಮೂಲಕ ಅವರ ನಾಲ್ಕು ದಶಕಗಳ ಹೋರಾಟದ ಗರಿಮೆಗೆ ಮಸಿ ಬಳಿದಂತಾಗಿದೆ. ಈ ಬಗ್ಗೆ ನೆಲದ ಕಾನೂನು ತನ್ನದೇ ಕ್ರಮವನ್ನು ಕೈಗೊಳ್ಳುತ್ತಿದೆ. ಇದರಿಂದಾಗಿ ಯಡಿಯೂರಪ್ಪ ಅವರು ತಲೆಮರೆಸಿಕೊಳ್ಳದೆ (ಆದರೆ, ಮಾಧ್ಯಮಗಳ ಕಣ್ಣಿಗೆ ಸಿಲುಕದೆ), ನ್ಯಾಯಾಲಯಕ್ಕೆ ಶರಣಾಗಿದ್ದಾರೆ, ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನೂ ಪಡೆದಿದ್ದಾರೆ, ಮತ್ತೆ ಜೈಲು ಪಾಲಾಗಿದ್ದಾರೆ.

ಆದರೆ, ಕೇಸು ದಾಖಲಾಗಿ, ಜಾಮೀನು ನಿರಾಕರಣೆಯಾದಾಗ, ಯಡಿಯೂರಪ್ಪ ಅವರು ಕಾನೂನಿನ ಕೈಯಿಂದ ನುಣುಚಿಕೊಳ್ಳಲು ಓಡಿಹೋಗುತ್ತಾರೆ ಎಂದೆಲ್ಲಾ ಇದೇ ಮಾಧ್ಯಮಗಳು ಬಿಂಬಿಸಿದವು. ಕೊನೆಗೆ ಅವರು ಮಾಧ್ಯಮಗಳ ಕ್ಯಾಮರಾ ಕಣ್ಣುಗಳಿಗೆ ಸಿಲುಕದೆ ಇದ್ದಾಗ "ಇದು ತಪ್ಪು, ಮಾಧ್ಯಮಗಳಿಂದ ತಪ್ಪಿಸಿಕೊಂಡು ಅವರು ಮನೆಯಿಂದಲೇ ಅಜ್ಞಾತ ಸ್ಥಳಕ್ಕೆ ಪರಾರಿಯಾದರು" ಅಂತೆಲ್ಲಾ ಮೊದಲು ಬಿಂಬಿಸಲ್ಪಟ್ಟು, ನಂತರ, ನ್ಯಾಯಾಲಯದಲ್ಲಿ ಅವರು ಶರಣಾದಾಗಲೂ, ಬಿಎಸ್‌ವೈ ಅವರ ಕಾರ್ಟೂನುಗಳನ್ನು ಹಾಕಿ, ಅಳುತ್ತಿರುವಂತಹಾ ದೃಶ್ಯಗಳನ್ನು, ಕಂಬಿ ಎಣಿಸುವ ಕ್ಯಾರಿಕೇಚರ್‌ಗಳನ್ನು ಪ್ರದರ್ಶಿಸಿದವು. ವ್ಯಂಗ್ಯಚಿತ್ರಗಳೊಂದಿಗೆ ಆನಿಮೇಶನ್‌ಭರಿತ ಹಾಡುಗಳೆಲ್ಲವೂ ಜನರನ್ನು ರಂಜಿಸಿದವು. ಕೆಲವು ಪತ್ರಿಕೆಗಳಂತೂ ಧಾರಾವಾಹಿ ರೂಪದಲ್ಲಿ, ಯಡಿಯೂರಪ್ಪ ಅವರ ಒಂದೊಂದು ನಡೆಯನ್ನೂ ಇಂಚಿಂಚಾಗಿ ವಿಶ್ಲೇಷಿಸಿ, ನ್ಯೂಸ್ ಬದಲು ವ್ಯೂಸ್ (views) ಹೆಚ್ಚು ತುರುಕಿ, ಓದುಗರಿಗೆ ರಸದೌತಣವನ್ನೇ ನೀಡಿದವು. ಅಲ್ಲಿ ವಸ್ತುನಿಷ್ಠತೆಗೆ, ವಿಶ್ವಾಸಾರ್ಹತೆಗೆ ಬೆಲೆ ಇರಲಿಲ್ಲ.

ಆ ಬಳಿಕ, ಯಡಿಯೂರಪ್ಪ ಜಾಮೀನಿಗೆ ಅರ್ಜಿ ಸಲ್ಲಿಸಿ, ಇತರೆಲ್ಲ ಆರೋಪಿಗಳೂ ಮಾಡಿರುವಂತೆಯೇ, ಅನಾರೋಗ್ಯ ಕಾರಣಗಳನ್ನು ಮುಂದಿಡುತ್ತಿದ್ದಾರೆ, ಹೈ ಡ್ರಾಮಾ ಮಾಡುತ್ತಿದ್ದಾರೆ ಎಂಬುದು ಅತೀ ಹೆಚ್ಚು ವರ್ಣರಂಜಿತವಾಗಿ ಚರ್ಚೆಗೆ ಗ್ರಾಸವಾಯಿತು. ಅವರು ಜೈಲಿನಿಂದ ಆಸ್ಪತ್ರೆ, ಆಸ್ಪತ್ರೆಯಿಂದ ಜೈಲಿಗೆ ರವಾನೆಯಾಗುವ ದೃಶ್ಯಾವಳಿಗಳು ರನ್ನಿಂಗ್ ಕಾಮೆಂಟರಿ ರೂಪದಲ್ಲಿ ಹರಿದುಬಂದವು. ನಾವು ಹೆಚ್ಚು ಕವರೇಜ್ ನೀಡುತ್ತಿದ್ದೇವೆ ಎಂಬ ಹೆಗ್ಗಳಿಕೆಗಾಗಿ, ಟಿಆರ್‌ಪಿ ಏರಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಚಾನೆಲ್‌ಗಳೂ ಹಗಲು ರಾತ್ರಿ ಕೆಲಸ ಮಾಡಿದವು. ಎಲ್ಲೆಲ್ಲೂ ಕ್ಯಾಮರಾಗಳೇ ಕಾಣಿಸುತ್ತಿದ್ದವೇ ಹೊರತು, ಯಡಿಯೂರಪ್ಪ ಕಾಣಿಸಲಿಲ್ಲ. ಅಂತೂ ಅವರು ಕೊನೆಗೆ, ಕ್ಯಾಮರಾ ಕಣ್ಣುಗಳಿಗೆ ಬೀಳದಂತಾಗಲೂ ಬೆಡ್‌ಶೀಟ್ ಕವರ್ ಮೂಲಕ ಆಂಬ್ಯುಲೆನ್ಸ್‌ಗೆ ಹೋಗಬೇಕಾದ ಪ್ರಸಂಗವೂ ಬಂತು. ಮಾಧ್ಯಮಗಳಲ್ಲೆಲ್ಲಾ ಅವಮಾನಕಾರಿ ಲೇಖನಗಳು ಬಂದವು. ಊಹಾಪೋಹದ ವರದಿಗಳಿಗೆ ಹೆಚ್ಚು ಪ್ರಾಮುಖ್ಯತೆ ದೊರೆತು, ತೇಜೋವಧೆ, ಚಾರಿತ್ರ್ಯಹನನವೇ ಜಾಸ್ತಿಯಾಗತೊಡಗಿದಾಗ ರೋಸಿ ಹೋದ ಯಡಿಯೂರಪ್ಪ, "ಚಿಕಿತ್ಸೆಯೇ ಬೇಡ, ಜೈಲಿಗೇ ಹೋಗುತ್ತೇನೆ, ಅಲ್ಲಿಯೇ ಚಿಕಿತ್ಸೆ ತೆಗೆದುಕೊಳ್ಳುತ್ತೇನೆ" ಅಂದುಬಿಟ್ಟರು ಮತ್ತು ಜೈಲಿಗೆ ಮರಳಿದರು. ಇದನ್ನೂ ಕೂಡ, ಐಷಾರಾಮಿ ಜೈಲು ಯಾತ್ರೆ ಎಂದು ಕರೆಯಲಾಯಿತು.

ಹಾಗಂತ, ಇದು ಯಡಿಯೂರಪ್ಪರಿಗೆ ಮಾತ್ರ ಸೀಮಿತವಾಗಿರಲಿಲ್ಲ. ನಟ ದರ್ಶನ್ ಬಂಧನ ವಿಷಯದಲ್ಲಾಗಲೀ, ಎಚ್.ಡಿ.ಕುಮಾರಸ್ವಾಮಿ ಪತ್ನಿಸಮೇತರಾಗಿ ನ್ಯಾಯಾಲಯಕ್ಕೆ ಬರುತ್ತಿರುವ ವಿಚಾರವಾಗಲೀ, ದೆಹಲಿಯಲ್ಲಿ ಎ.ರಾಜಾ, ಕನಿಮೋಳಿ ಮುಂತಾದವರು ಜೈಲುಪಾಲಾದ ವಿಚಾರಗಳಲ್ಲಾಗಲೀ, ಮಾಧ್ಯಮಗಳು ಮಾಡಿದ್ದು ಇದೇ ರೀತಿಯಲ್ಲವೇ?

[ಮುಂದಿನ ಪುಟಗಳಲ್ಲಿ: ಮಾಧ್ಯಮಗಳ ಈ ಪರಿ ವರ್ತನೆ ಮತ್ತು ಯಡಿಯೂರಪ್ಪ ವಿರುದ್ಧ ಪಕ್ಷದೊಳಗಿನ, ಹೊರಗಿನ ಸಂಚ]


ಮೂರು ದಶಕಗಳ ಹೋರಾಟದ ರಾಜಕೀಯ ಚರಿತ್ರೆಯುಳ್ಳ ಯಡಿಯೂರಪ್ಪ ಅವರಿಗೆ ಅಂಟಿಕೊಂಡ ಈ ಕಳಂಕವು ಖಂಡಿತವಾಗಿಯೂ ಅವರ ಹೋರಾಟದ ಬದುಕಿಗೊಂದು ಕಪ್ಪು ಚುಕ್ಕೆಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಅವರು ಮೂರು ವರ್ಷಗಳ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳಿಗೆ ದೊರೆತದ್ದಕ್ಕಿಂತ ಅವರ ವಿರುದ್ಧದ ಸಂಚು-ಒಳಸಂಚುಗಳಿಗೇ ದೊರೆತ ಪ್ರಚಾರವೇ ಗರಿಷ್ಠ.

ಇಲ್ಲಿ ಪ್ರಶ್ನೆ ಇರುವುದೆಂದರೆ, ಮಾಧ್ಯಮಗಳಿಗೂ ಯಾಕೆ ಕಳಂಕ ತಟ್ಟಿಕೊಳ್ಳಬೇಕು ಎಂಬುದು. ವಸ್ತುನಿಷ್ಠ ವರದಿ ನೀಡಿದರೆ ಮಾಧ್ಯಮಗಳ ಬಗ್ಗೆ ಯಾರೂ ಕೈಯೆತ್ತಿ ತೋರಿಸುವಂತಿಲ್ಲ. ಆದರೆ ಇತ್ತಿತ್ತಲಾಗಿ, ಸರಕಾರದಿಂದ ಸೈಟು ಪಡೆದುಕೊಂಡಿದ್ದಾರೆ, ಅಲ್ಲಲ್ಲಿ ಸೈಟುಗಳನ್ನು ಮಾಡಿಕೊಂಡಿದ್ದಾರೆ, ವಾಣಿಜ್ಯ ಕಟ್ಟಡ ಕಟ್ಟಿಸಿದ್ದಾರೆ, ಅಕ್ರಮ ಗಣಿ ಕಪ್ಪ ಪಡೆದುಕೊಂಡಿದ್ದಾರೆ ಎಂಬೆಲ್ಲಾ ಆರೋಪಗಳು ಜೋರಾಗಿ ಮತ್ತು ಬಲವಾಗಿ ಕೇಳಿಬರುತ್ತಿರುವುದು ಖಂಡಿತವಾಗಿಯೂ ಕನ್ನಡದ ಮಾಧ್ಯಮಲೋಕಕ್ಕೆ ಹಿತವಲ್ಲ.

ಯಡಿಯೂರಪ್ಪ ಅಧಿಕಾರಕ್ಕೇರಿದಾಗಿನಿಂದ ಚರ್ಚುಗಳ ಮೇಲೆ ದಾಳಿ, ರೈತರ ಮೇಲೆ ಗೋಲೀಬಾರ್, ನೈಸ್ ರಸ್ತೆಯ ಹೋರಾಟ, ಅಕ್ರಮ ಗಣಿಗಾರಿಕೆ, ಭೂಹಗರಣ ಮುಂತಾದವುಗಳ ಕುರಿತು ಮಾಧ್ಯಮಗಳ ಅಬ್ಬರದ ಕವರೇಜ್ (ಅದು ಏಕಪಕ್ಷೀಯವೋ ಅಥವಾ ನಿಷ್ಪಕ್ಷಪಾತವೋ ಎಂಬುದನ್ನು ಓದುಗರು, ಪ್ರೇಕ್ಷಕರು ನಿರ್ಧರಿಸಬೇಕು) ನೋಡಿದಾಗ, ಈ ಮಾಧ್ಯಮದ ಮಂದಿಯೇಕೆ ಅವರ ವಿರುದ್ಧ ಮಾತ್ರ ಅಷ್ಟೊಂದು ಬಂಡೆದ್ದು ನಿಂತಿದ್ದಾರೆ? ವೈಯಕ್ತಿಕವಾಗಿ ಯಡಿಯೂರಪ್ಪ ಮೇಲೆ, ಶೋಭಾ ಕರಂದ್ಲಾಜೆ ಮೇಲೆ ಅವರಲ್ಲಿ ಕೆಲವರಿಗೆ ಎಷ್ಟೊಂದು ಆಕ್ರೋಶವಿರಬಹುದು ಎಂಬೆಲ್ಲಾ ಪ್ರಶ್ನೆಗಳು ಉದ್ಭವವಾಗುತ್ತಿದೆ. ಯಾಕೆಂದರೆ ಗಣಿ ಹಗರಣದ ಲೋಕಾಯುಕ್ತ ವರದಿಯಲ್ಲಿ ಯಡಿಯೂರಪ್ಪ ಮತ್ತು ಜನಾರ್ದನ ರೆಡ್ಡಿ ಇಬ್ಬರ ಹೆಸರು ಮಾತ್ರವೇ ಅಲ್ಲವಲ್ಲ ದಾಖಲಾಗಿದ್ದುದು? ಪಕ್ಷಾತೀತವಾಗಿಯೇ ಇಲ್ಲಿ ಕೊಳ್ಳೆ ಹೊಡೆಯಲಾಗಿದೆ ಅಂತಲೇ ಉಲ್ಲೇಖವಿತ್ತಲ್ಲ?

ಒಟ್ಟಾರೆಯಾಗಿ, ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದ ದಿನ ಪುಟಗಟ್ಟಲೆ ಪ್ರಕಟವಾದ, ಗಂಟೆಗಟ್ಟಲೆ ಪ್ರಸಾರವಾದ ಮಾಹಿತಿಗಳು, ಆ ನಂತರ ಅವರ ಶರಣಾಗತಿಯ ಸಂದರ್ಭದಲ್ಲಿ ನಮ್ಮ ನಿಮ್ಮೆಲ್ಲರ ಕಣ್ಣೆದುರು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮದ ಪರಿಯನ್ನು ನೋಡಿದರೆ, ಮಾಧ್ಯಮಗಳು ಕೂಡ ಯಾವುದೋ ಒಂದು ಸಂಚಿನ ಭಾಗವಾಗಿ, ಯಾರದೋ ಕೈಯಲ್ಲಿ ಆಡುತ್ತಿರುವ ಗೊಂಬೆಗಳಂತೆ ಗೋಚರಿಸುತ್ತಾರೆ. ಸಮಾಜದ ಏಳಿಗೆಗೆ, ಅಭಿವೃದ್ಧಿಪರ ಕಾರ್ಯಗಳಿಗೆ, ಭವ್ಯ ಭವಿಷ್ಯದ ಭಾವೀ ಪ್ರಜೆಗಳು ಎಂದು ಪರಿಗಣಿಸಲಾಗುವ ಮಕ್ಕಳ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮವನ್ನು ತುಂಬಬೇಕಿರುವ ಮಾಧ್ಯಮಗಳೇ ಹಾದಿ ತಪ್ಪುತ್ತಿವೆಯೇ ಎಂಬ ಪ್ರಶ್ನೆ ಉದ್ಭವವಾಗಿರುವುದು ಖಂಡಿತಾ ಅಪಾಯಕಾರಿ ಬೆಳವಣಿಗೆಯೇ.

ಏಕ ಪಕ್ಷೀಯ ವರದಿಗಳು ಮತ್ತು ವ್ಯಕ್ತಿ ಕೇಂದ್ರಿತ ತೇಜೋವಧೆ ಅಭಿಯಾನವೇ ಮಾಧ್ಯಮಗಳಿಗೆ ಕಳಂಕ ತಂದಿರುವುದು. ನಮ್ಮಲ್ಲಿ ಎಂತೆಂಥಾ ಪತ್ರಕರ್ತರಿದ್ದಾರೆ! ಅದೆಷ್ಟೋ ಹಗರಣಗಳನ್ನು ತನಿಖಾ ವರದಿಯ ಮೂಲಕ ಬಯಲಿಗೆಳೆದವರಿದ್ದಾರೆ! ಆದರೆ, ಯಡಿಯೂರಪ್ಪ ಒಬ್ಬರೇ ಭೂಮಿ ನುಂಗಿದವರು, ಡೀನೋಟಿಫಿಕೇಶನ್ ಮಾಡಿಸಿದವರು, ಆಪ್ತರಿಗೆ, ನೆಂಟರಿಗೆ, ಕುಟುಂಬಿಕರಿಗೆ ಸೈಟು ಕೊಡಿಸಿದವರು ಎಂಬ ಬಗ್ಗೆ ಮಾತ್ರವೇ ತನಿಖೆಯಾಗಿದೆ. ಬೇರೆ ನಾಯಕರು, ಬೇರೆ ಪಕ್ಷಗಳ ಮೇಲೂ ಅಲ್ಲೊಂದಿಲ್ಲೊಂದು ಹಗರಣದ ಮಾತು ಕೇಳಿ ಬಂದವಾದರೂ, ಅವುಗಳ ಮೇಲೆ ಬೆಳಕು ಚೆಲ್ಲಲೇ ಇಲ್ಲ. ಇದು ವ್ಯಕ್ತಿಕೇಂದ್ರಿತ ತೇಜೋವಧೆ ಕಾರ್ಯಾಚರಣೆ ಅಂತ ಯಡಿಯೂರಪ್ಪರ ರಾಜಕೀಯ ಕಾರ್ಯದರ್ಶಿ ಪುಟ್ಟಸ್ವಾಮಿ ಅವರು ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದುದು ನೆನಪಾಗುತ್ತಿದೆ. ಹೀಗಾಗಿ ಮಾಧ್ಯಮಗಳ ವಸ್ತುನಿಷ್ಠತೆ, ವಿಶ್ವಾಸಾರ್ಹತೆಯು ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ಮಾಧ್ಯಮ ಮಿತ್ರರ ಕೈಯಲ್ಲೇ ಇದೆ.

ಹಾಗಂತ ಮಾಧ್ಯಮಗಳು ಬರೇ ನೆಗೆಟಿವ್ ತೋರಿಸುತ್ತವೆ ಎನ್ನುವಂತಿಲ್ಲ. ಅಣ್ಣಾ ಹಜಾರೆಯವರ ಉಪವಾಸ ಸತ್ಯಾಗ್ರಹಕ್ಕೆ ಯಶಸ್ಸು ದೊರಕಿಸಿಕೊಡುವಲ್ಲಿ. 2ಜಿ ಹಗರಣ ಬಯಲಿಗೆಳೆಯುವಲ್ಲಿ, ಗಣಿ ಹಗರಣವನ್ನು ಬಯಲಿಗೆಳೆಯುವಲ್ಲಿ, ರಾಜ್ಯದ ಭೂಹಗರಣವನ್ನು ಕೆದಕುವಲ್ಲಿ ಕೂಡ ಮಾಧ್ಯಮಗಳು ಅತ್ಯಂತ ಶ್ಲಾಘನಾರ್ಹ ಪಾತ್ರ ವಹಿಸಿರುವುದನ್ನು ಖಂಡಿತಾ ಮರೆಯುವಂತಿಲ್ಲ. ಮತ್ತು ಭ್ರಷ್ಟಾಚಾರದ ವಿರುದ್ಧ, ಭ್ರಷ್ಟರ ವಿರುದ್ಧ, ಅವರೆಷ್ಟೇ ದೊಡ್ಡವರಾಗಲೀ, ಯಾವುದೇ ಪಕ್ಷದವರಾಗಲೀ, ವಸ್ತುನಿಷ್ಠ ವರದಿ ಮಾಡಲೇಬೇಕು ಎಂಬುದರಲ್ಲಿಯೂ ಎರಡು ಮಾತಿಲ್ಲ. ಅದೇ ಒಂದು ಪರಿಸ್ಥಿತಿ ನೆನಪಿಸಿಕೊಳ್ಳಿ. ಯಡಿಯೂರಪ್ಪ ಹೇಗೂ ಜೈಲೋ, ಆಸ್ಪತ್ರೆಯೋ ಸೇರುತ್ತಾರೆ ಎಂಬುದು ಗ್ಯಾರಂಟಿ. ಇಡೀ ಎರಡು-ಮೂರು ದಿನ ಯಡಿಯೂರಪ್ಪಗೆ ಕವರೇಜ್ ನೀಡುವ ಬದಲು, ಇಂತಿಂಥಾ ಊರಲ್ಲಿ ರಸ್ತೆ ಸರಿ ಇಲ್ಲ, ಮೂಲ ಸೌಕರ್ಯ ಇಲ್ಲ ಅಂತೆಲ್ಲಾ ಜನ-ಪರವಾದ ವಿಶೇಷ ವರದಿಗಳನ್ನು ಮಾಡಿದರೆ ಎಷ್ಟು ಹಿತವಾಗಿರುತ್ತದೆ, ಅಲ್ಲವೇ?

ಮುಂದಿನ ಪುಟದಲ್ಲಿ : ಪಕ್ಷದೊಳಗಿನ ಮತ್ತು ಹೊರಗಿನ ಸಂಚು


ಪಕ್ಷದೊಳಗಿನ ಮತ್ತು ಹೊರಗಿನ ಸಂಚು
ಎಚ್.ಆರ್.ವಿಶ್ವನಾಥ್ ಎಂಬ ವಕೀಲರೊಬ್ಬರು ಹೈಕೋರ್ಟಿನಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ನೋಡಿದಾಗ ಇದು ಖಚಿತವಾಗಿಬಿಟ್ಟಿತು. ಯಡಿಯೂರಪ್ಪ ಅವರ ವಿರುದ್ಧ ಅವರ ಕಟ್ಟಾ ರಾಜಕೀಯ ವಿರೋಧಿ ಅನಂತ್ ಕುಮಾರ್, ರಾಜ್ಯಪಾಲರು, ಲೋಕಾಯುಕ್ತ ನ್ಯಾಯಮೂರ್ತಿಗಳು, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಕೈಜೋಡಿಸಿ, ಒಂದು ಸಂಚಿನ ಭಾಗವಾಗಿ ಇವೆಲ್ಲವನ್ನೂ ಮಾಡುತ್ತಿದ್ದಾರೆ ಎಂದಿದ್ದಾರೆ ಅವರು ತಮ್ಮ ಸಾರ್ವಜನಿಕ ಹಿತಾಸಕ್ತಿ ದೂರಿನಲ್ಲಿ. ಅದರ ವಿಚಾರಣೆ ನಡೆಯುತ್ತಿರುವುದನ್ನು ನೀವು ಗಮನಿಸಿರಬಹುದು.

ನಿಮಗೆ ನೆನಪಿರಬಹುದು. "ನನ್ನ ವಿರುದ್ಧ ಗೌಡ ಕುಟುಂಬದ ಅಪ್ಪ ಮಕ್ಕಳು ಸಂಚು ಮಾಡುತ್ತಿದ್ದಾರೆ, ಕಾಂಗ್ರೆಸ್‌ನವರು ಸಂಚು ರೂಪಿಸುತ್ತಿದ್ದಾರೆ" ಎಂದು ಹೇಳುತ್ತಲೇ ಇದ್ದ ಯಡಿಯೂರಪ್ಪ, ಒಂದು ಹಂತದಲ್ಲಂತೂ, "ಇನ್ನು ಇಪ್ಪತ್ತು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಮತ್ತು ಇದನ್ನು ಸಹಿಸದೆ ಕಾಂಗ್ರೆಸ್, ಜೆಡಿಎಸ್ ಚಡಪಡಿಸುತ್ತಿವೆ" ಎಂದೆಲ್ಲಾ ಹೇಳಿದ್ದರು. ಬಹುಶಃ ಪಕ್ಷದೊಳಗಿನಿಂದಲೇ ಅವರ ವಿರುದ್ಧ ಒಂದು ಸಂಚು ರೂಪಿಸಲು ಕಾರಣವಾಗಿದ್ದಿರಬಹುದು. (ಈ ಬಗ್ಗೆ ಯಡಿಯೂರಪ್ಪ ಅವರ ವಕೀಲ ರವಿ ಬಿ.ನಾಯಕ್ ಅವರೇ "ಪಕ್ಷದೊಳಗಿನಿಂದ ಮತ್ತು ಹೊರಗಿನಿಂದ ಸಂಚು ನಡೆದಿದೆ, ಸಿರಾಜಿನ್ ಬಾಷಾಗೆ ಇಷ್ಟೊಂದು ಬೆಂಬಲ ಹೇಗೆ, ಇದಕ್ಕಾಗುವ ಹಣಕಾಸು ಎಲ್ಲಿಂದ ಪೂರೈಕೆಯಾಗುತ್ತದೆ" ಎಂದೆಲ್ಲಾ ಶಂಕೆ ವ್ಯಕ್ತಪಡಿಸಿದ್ದನ್ನು ಗಮನಿಸಿ) ಈ ಅಧಿಕಾರಯುತ ಮಾತುಗಳೇ ಬಹುಶಃ ಯಡಿಯೂರಪ್ಪ ವಿರೋಧಿಗಳಿಗೆ ನುಂಗಲಾರದ ತುತ್ತಾಗಿದ್ದು. ಮತ್ತು ಪ್ರತೀ ಚುನಾವಣೆಯಲ್ಲಿಯೂ ಯಡಿಯೂರಪ್ಪ ನಾಯಕತ್ವವೇ ಎದ್ದುಕಂಡು, ಇಷ್ಟೆಲ್ಲಾ ಭ್ರಷ್ಟಾಚಾರ ಆರೋಪಗಳಿದ್ದ ಹೊರತಾಗಿಯೂ ಬಿಜೆಪಿಗೆ ಸುಖಾಸುಮ್ಮನೆ ವಿಜಯ ದೊರೆಯುತ್ತಿದ್ದುದು, ಬಿಜೆಪಿಯಲ್ಲಿರುವವರಿಗೆ ಕೂಡ "ಇನ್ನು ನಮ್ಮ ಆಟ ನಡೆಯುವುದು ಅಸಾಧ್ಯ" ಎಂಬ ಭಾವನೆ ಬಂದಿರಬಹುದು.

ಯಡಿಯೂರಪ್ಪ ಇರುವವರೆಗೂ ನಾವು ಕರ್ನಾಟಕ ರಾಜಕಾರಣದಲ್ಲಿ ಮೇಲೆ ಬರುವುದು ಅಸಾಧ್ಯ ಎಂಬುದು ಅರಿವಾದಾಗ, ಇದು ದ್ವೇಷದ ರಾಜಕಾರಣವಾಗಿ ಪರಿವರ್ತನೆಗೊಂಡು, ಸಂಚೊಂದು ರೂಪುಗೊಂಡಿತು. ಅದು ಪಕ್ಷದ ಹೊರಗೆ ಇದ್ದೇ ಇತ್ತಾದರೂ ಪಕ್ಷದೊಳಗೆ ಹೆಚ್ಚು ವ್ಯಾಪಿಸಿತು ಅಂತ ಅಂದುಕೊಳ್ಳಬಹುದು.

ಮೂರು ವರ್ಷಗಳ ಕಾಲ ಮಾನಸಿಕ ಕಿರುಕುಳ, ಒತ್ತಡಗಳು ಕಾಡುತ್ತಲೇ ಇದ್ದರೂ ಯಡಿಯೂರಪ್ಪ ಅವರ ಧೃತಿ ಕುಂದಿಸಲಾಗಲಿಲ್ಲ ಎಂಬುದರಿಂದ ಹತಾಶೆಗೊಂಡ ವಿರೋಧಿಗಳು, ತೇಜೋವಧೆಯ ಕಾರ್ಯಾಚರಣೆ ಶುರು ಮಾಡಿದ್ದರು ಎಂಬ ಶಂಕೆಯೂ ಓದುಗರಲ್ಲಿ ಮೂಡಿರುವ ಬಗ್ಗೆ ಈಗಾಗಲೇ ವೆಬ್‌ದುನಿಯಾ ಓದುಗರು ಅಲ್ಲಲ್ಲಿ ದಾಖಲಿಸಿದ ಕಾಮೆಂಟುಗಳಿಂದ ಸ್ಪಷ್ಟವಾಗುತ್ತದೆ. ಇದಕ್ಕೆ ಪುಷ್ಟಿ ನೀಡುವಂತೆ ಕಾಂಗ್ರೆಸ್ ಮುಖಂಡರೆಲ್ಲರೂ ಯಡಿಯೂರಪ್ಪ ಬಂಧನದ ವಾರಂಟ್ ಹೊರಡಿಸಿದಾಕ್ಷಣ ಶಿವಮೊಗ್ಗದ ಸಭೆಯಲ್ಲಿ ಪರಸ್ಪರ ಕೈಕುಲುಕುತ್ತಾ, ಕೇಕೆ ಹಾಕುತ್ತಾ ಸಂಭ್ರಮಿಸಿದ ಪರಿ ಈಗಲೂ ಕಣ್ಣಿಗೆ ಕಟ್ಟುವಂತಿದೆ.

ಹೋರಾಟದ ಹಿನ್ನೆಲೆಯಿಂದ ಬಂದು, ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಹಂತ ಹಂತವಾಗಿ ಮೇಲೇರುತ್ತಾ, ಈ ಮಟ್ಟಕ್ಕೆ ಬೆಳೆದ ವ್ಯಕ್ತಿಯ ಹೋರಾಟದ ಬದುಕಿಗೆ ಈ ರೀತಿಯ ಕಳಂಕಿತ ಅರ್ಧವಿರಾಮ ಅಸಹ್ಯ. ಆದರೆ, ನಮ್ಮ ನಿಮ್ಮಂಥವರನ್ನು ನೋಡಲು ಆಸ್ಪತ್ರೆಗೆ ಯಾರೂ ಬರಲಾರರು. ಆದರೆ ಇಷ್ಟೊಂದು ಮಂದಿ ಸ್ವಾಮೀಜಿಗಳು, ಮಂತ್ರಿಗಳು, ಅಭಿಮಾನಿಗಳು, ಗಣ್ಯರೆಲ್ಲಾ ಬಂದು ನೋಡುತ್ತಾರೆ ಎಂದರೆ ಯಡಿಯೂರಪ್ಪ ಒಬ್ಬ ಮಾಸ್ ಲೀಡರ್ ಎಂಬುದರಲ್ಲಿ ಎರಡು ಮಾತಿಲ್ಲ. ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ ವ್ಯಕ್ತಿಯೊಬ್ಬರು, ತಮ್ಮ ಆರೋಗ್ಯದ ಕುರಿತಾಗಿ ಮಾಧ್ಯಮಗಳು ನಡೆಸುತ್ತಿರುವ ತೇಜೋವಧೆ ಯತ್ನದಿಂದ ರೋಸಿ ಹೋಗಿ, "ನನಗೆ ಇಲ್ಲಿ ಚಿಕಿತ್ಸೆಯೇ ಬೇಡ, ಜೈಲಿಗೆ ಸೇರಿಸಿ. ಇದ್ದರೂ ಸತ್ತರೂ ಅಲ್ಲೇ ಇರುತ್ತೇನೆ" ಎಂದು ಮನನೊಂದು ನುಡಿದು, ಈಗ ಜೈಲಿಗೆ ಮರಳಿದ್ದಾರೆ. ಇದು ಮಾಧ್ಯಮಗಳ ಮೇಲೆ ಜನರ ದೃಷ್ಟಿ ಮತ್ತೊಮ್ಮೆ ಬೀಳುವಂತೆ ಮಾಡಿದೆ. ಹೀಗಾಗಿ ನಮ್ಮ ಮಾಧ್ಯಮಗಳು ಸ್ವಚ್ಛವಾಗಿರಲಿ, ಅವುಗಳಿಗೆ ಕಳಂಕ ಅಂಟಿಕೊಳ್ಳದಿರಲಿ ಎಂಬುದು ಸದಾಶಯ.

ನ್ಯಾಯಾಲಯ - ಕಾರ್ಗತ್ತಲಲ್ಲಿ ಬೆಳ್ಳಿ ಚುಕ್ಕಿ
ಇನ್ನೊಂದು ಮಾತು ಹೇಳಲೇಬೇಕು. ಈ ದೇಶದಲ್ಲಾಗಲೀ, ರಾಜ್ಯದಲ್ಲಾಗಲೀ ಆಡಳಿತ ವ್ಯವಸ್ಥೆಯು ಧನದಾಹಿಗಳ ಕಪಿಮುಷ್ಟಿಯಲ್ಲಿ ಸಿಲುಕಿ, ಕೆಟ್ಟು ಕೆರ ಹಿಡಿದು ಹೋಗಿರುವಾಗ ನಮ್ಮ ನಿಮ್ಮಂಥ ಜನ ಸಾಮಾನ್ಯರಿಗೆ ಅತಿದೊಡ್ಡ ಆಶಾವಾದ, ಮುಳುಗುತ್ತಿರುವವರಿಗೆ ಹುಲ್ಲುಕಡ್ಡಿಯ ಆಸರೆ ಅಂತ ಗೋಚರಿಸುತ್ತಿರುವುದು ನ್ಯಾಯಾಲಯಗಳು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ ಮುಂತಾಗಿ, ರಾಜ್ಯದಲ್ಲಿ ಮಂತ್ರಿ ಮಾಗಧರಾಗಿ ಮೆರೆದವರೆಲ್ಲರೂ ಜೈಲು ಸೇರಿತ್ತಿದ್ದಾರೆಂದರೆ, ಈ ಕಾನೂನು ಎಷ್ಟರ ಮಟ್ಟಿಗೆ ಬಲಿಷ್ಠವಾಗಿದೆ ಎಂಬುದು ನಮಗೆ ವೇದ್ಯವಾಗುತ್ತದೆ. ಹೀಗಾಗಿ ಭ್ರಷ್ಟಾಚಾರ ಮಾಡಲು ಅಡ್ಡಿಯಾಗುತ್ತಿರುವ ಇಂಥಹಾ ನ್ಯಾಯಾಲಯಗಳಿಗಿದೋ ಸಾವಿರ ಸಾವಿರ ನಮನಗಳು. ಇನ್ನಾದರೂ ಅಧಿಕಾರಸ್ಥರು ದುರಾಸೆ ಬಿಡುತ್ತಾರೆ ಎಂದು ಹಾರೈಸೋಣ.

ವೆಬ್ದುನಿಯಾವನ್ನು ಓದಿ