ನವದೆಹಲಿ : ನೀಟ್ -ಯುಜಿ ಪರೀಕ್ಷೆ ಬರೆಯಲು ಗರಿಷ್ಠ ವಯಸ್ಸಿನ ಮಿತಿಯನ್ನು ರದ್ದುಗೊಳಿಸಲಾಗಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗವು ಇಂದು(ಬುಧವಾರ ) ಈ ನಿರ್ಧಾರವನ್ನು ಪ್ರಕಟಿಸಿದ್ದು, ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಇನ್ಮುಂದೆ ಎಲ್ಲಾ ವಯೋಮಾನದ ಅಭ್ಯರ್ಥಿಗಳು ಪರೀಕ್ಷೆ ನೀಟ್ -ಯುಜಿ ಬರೆಯಬಹುದು. ಈ ಮೊದಲು ನೀಟ್ ಯುಜಿ ಪರೀಕ್ಷೆ ಬರೆಯಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ ಮತ್ತು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ 30 ವರ್ಷ ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿತ್ತು.
ಸದ್ಯ ನಿಗದಿಯಾಗಿರುವ ವಯೋಮಿತಿ ಕೈಬಿಡಲು ರಾಷ್ಟ್ರೀಯ ವೈದ್ಯಕೀಯ ಆಯೋಗದ ಸಲಹೆಯ ಮೇರೆಗೆ ಪದವಿ ವೈದ್ಯಕೀಯ ಶಿಕ್ಷಣ ಮಂಡಳಿಯು ಈ ನಿರ್ಧಾರಕ್ಕೆ ಬಂದಿದೆ.
MBBS, BDS ಮತ್ತು ಇತರ ಕೆಲವು ಸಂಬಂಧಿತ ಕೋರ್ಸ್ಗಳಿಗೆ ಪ್ರವೇಶಕ್ಕಾಗಿ NEET ಭಾರತದಲ್ಲಿನ ಏಕೈಕ ಪ್ರವೇಶ ಪರೀಕ್ಷೆಯಾಗಿದೆ. ಪ್ರತಿ ವರ್ಷ ಸುಮಾರು 15 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯುತ್ತಾರೆ.
ಕಳೆದ ವರ್ಷದಿಂದ, ಬಿಎಸ್ಸಿ ನರ್ಸಿಂಗ್ ಮತ್ತು ಬಿಎಸ್ಸಿ ಆರೋಗ್ಯ ವಿಜ್ಞಾನ ಕೋರ್ಸ್ಗಳ ಪ್ರವೇಶಕ್ಕೂ ಈ ಪರೀಕ್ಷೆಯನ್ನು ಬಳಸಲಾಗುತ್ತಿದೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಪರೀಕ್ಷೆ ನಡೆಸಲಾಗಿತ್ತು. 2022ನೇ ಸಾಲಿನ ನೀಟ್ -ಯುಜಿ ಪರೀಕ್ಷೆ ದಿನಾಂಕ ಮತ್ತು ಸಮಯವನ್ನು NTA ಇನ್ನೂ ಪ್ರಕಟಿಸಿಲ್ಲ.