ಸಿಖ್ ವಿರೋಧಿ ಗಲಭೆ: ರಾಹುಲ್ ಹೇಳಿಕೆಯಿಂದ ಸಂಕಟದಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್

ಶುಕ್ರವಾರ, 31 ಜನವರಿ 2014 (11:56 IST)
PR
PR
ನವದೆಹಲಿ: ರಾಹುಲ್ ಗಾಂಧಿ ಟಿವಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಸಿಖ್ ವಿರೋಧಿ ಗಲಭೆಯನ್ನು ರಾಜಕೀಯ ಚರ್ಚೆಗೆ ತಂದಿರುವುದು ಕಾಂಗ್ರೆಸ್‌ಗೆ ಕಳವಳವುಂಟುಮಾಡಿದೆ. ಗುಜರಾತಿನಲ್ಲಿ ಮುಸ್ಲಿಂ ವಿರೋಧಿ ಕಗ್ಗೊಲೆಯನ್ನು ಮುಂದಿಟ್ಟುಕೊಂಡು ಮೋದಿ ವಿರುದ್ಧ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ವಾಗ್ದಾಳಿ ನಡೆಸಬೇಕೆಂದು ಯೋಚಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಈಗ ಎಲ್ಲವೂ ಉಲ್ಟಾ ಹೊಡೆಯುವಂತೆ ಭಾಸವಾಗುತ್ತಿದೆ.ಸಿಖ್ ಸಂಘಟನೆಗಳ ಏರಿದ ಪ್ರತಿಭಟನೆ ಮತ್ತು ಸುದ್ದಿ ಬುಲೆಟಿನ್‌ಗಳಲ್ಲಿ 1984ರ ಗಲಭೆಯದ್ದೇ ಸುದ್ದಿಯಿಂದ ಸಜ್ಜನ್ ಕುಮಾರ್ ಮತ್ತು ಟೈಟ್ಲರ್ ಮುಂತಾದ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿದ್ದ ಕಾಂಗ್ರೆಸ್‌ಗೆ ಸಿಖ್ ವಿರೋಧಿ ಗಲಭೆಯ ಭೂತ ಕಾಡುತ್ತಿದೆ.

ಸಿಖ್ ಗಲಭೆ ಮುಖಪುಟಗಳಲ್ಲಿ ರಾರಾಜಿಸಿದರೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಒಂದೇ ಎಂಬ ಭಾವನೆ ಮತದಾರರಲ್ಲಿ ಮೂಡಲಿದೆ. ಇನ್ನು ಮೋದಿ ಪ್ರತಿಯೊಂದು ಸಾರ್ವಜನಿಕ ಪ್ರಚಾರದಲ್ಲಿ 1984ರ ಸಿಖ್ ವಿರೋಧಿ ಗಲಭೆಯನ್ನೇ ಪ್ರಸ್ತಾಪಿಸಬಹುದೆನ್ನುವುದು ಕಾಂಗ್ರೆಸ್‌ಗೆ ಆತಂಕ ಮೂಡಿಸಿದೆ.

PR
PR
ಕಾಂಗ್ರೆಸ್ ಈಗ ತನ್ನನ್ನು ಸಮರ್ಥಿಸಿಕೊಳ್ಳಬೇಕಿದ್ದು, ಮೋದಿ ವಿರುದ್ಧ ಹೋರಾಟದ ಮೊನಚು ಕಳೆದುಹೋಗುತ್ತಿದೆಯೇ ಎಂಬ ಭಾವನೆ ಕಾಂಗ್ರೆಸ್ ವಲಯದಲ್ಲಿ ಆವರಿಸಿದೆ. ಈಗ ಬಿಜೆಪಿ ಕೂಡ ಜಾತ್ಯತೀತ ಬೇರುಗಳನ್ನು ಹೊಂದಿದ ಪಕ್ಷಗಳ ಜತೆ ಮೈತ್ರಿಗೆ ಮುಂದಾಗಿರುವುದರಿಂದ ಚುನಾವಣೆ ಪೂರ್ವ ಸನ್ನಿವೇಶದ ಮೇಲೆ ಪರಿಣಾಮ ಬೀರಲಿದೆ.ಶರದ್ ಪವಾರ್ ಗುಜರಾತ್ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಾರೆಂಬ ಸುದ್ದಿ ಇದಕ್ಕೆ ಪುಷ್ಠಿ ನೀಡಿದೆ. ರಾಹುಲ್ ಸಿಖ್ ಗಲಭೆಯ ಪ್ರಶ್ನೆಯನ್ನು ಸರಿಯಾಗಿ ನಿಭಾಯಿಸಲಿಲ್ಲ ಎಂಬ ವಿಷಾದ ಕಾಂಗ್ರೆಸ್‌ನಲ್ಲಿ ಮನೆಮಾಡಿದೆ.

ಇದಕ್ಕೆ ಬದಲಾಗಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಮತ್ತು ಪ್ರಧಾನಮಂತ್ರಿ ಮನಮೋಹನ್ ಸಿಂಗ್ 10 ವರ್ಷಗಳ ಹಿಂದೆ ಕೇಳಿದ್ದ ಕ್ಷಮೆಗಳನ್ನು ಉಲ್ಲೇಖಿಸಬಹುದಿತ್ತು. ಹಿರಿಯ ಕಾಂಗ್ರೆಸ್ ನಾಯಕರ ಜತೆ ರಾಹುಲ್ ಕೂಡ ಕ್ಷಮೆ ಕೇಳಿ ವಿಷಯವನ್ನು ಮುಚ್ಚಿಹಾಕಬಹುದಿತ್ತು. ಮುಂದಿನ ಟಿವಿ ಸಂದರ್ಶನಗಳಲ್ಲಿ ರಾಹುಲ್ ಈ ದೋಷಗಳಿಗೆ ಪರಿಹಾರ ಹುಡುಕುತ್ತಾರೆಂಬ ಆಶಾಭಾವನೆಯೂ ಕಾಂಗ್ರೆಸ್‌ನಲ್ಲಿದೆ.

ವೆಬ್ದುನಿಯಾವನ್ನು ಓದಿ