ಅಧ್ಯಯನ ಪ್ರವಾಸ ನೆಪದಲ್ಲಿ ಮೋಜು, ಮಸ್ತಿ ಮಾಡುವ ಶಾಸಕರು

ಗುರುವಾರ, 26 ಡಿಸೆಂಬರ್ 2013 (20:29 IST)
PR
PR
ಊರಿನಲ್ಲಿ ಅನೇಕ ಸಮಸ್ಯೆಗಳನ್ನು ಇಟ್ಟುಕೊಂಡು ವಿದೇಶಗಳ ಪ್ರವಾಸಕ್ಕೆ ಹೋಗಲು ಶಾಸಕರ ಒಂದು ತಂಡ ಸಜ್ಜಾಗುತ್ತಿದೆ. ಇವರು ಅಧ್ಯಯನ ಪ್ರವಾಸದ ಹೆಸರಿನಲ್ಲಿ ತೆರಳುತ್ತಿದ್ದು, ಬ್ರೆಜಿಲ್‌ನ ಮಳೆ ಅರಣ್ಯ, ಅರ್ಜೈಂಟೀನಾ ಮತ್ತು ಪೆರುವಿಗೆ ಭೇಟಿ ನೀಡಲಿದ್ದಾರೆ. ವಿದೇಶಗಳಿಗೆ ಹೋಗಿ ಏನು ಅಧ್ಯಯನ ಮಾಡ್ತಾರೆ, ರಾಜ್ಯದ 98 ವಿಧಾನಸಭೆ ಕ್ಷೇತ್ರಗಳಲ್ಲಿ ಬರ ತಾಂಡವವಾಡುತ್ತಿದೆ. ಕುಡಿಯಲು ನೀರಿಲ್ಲ, ತಿನ್ನಲು ಆಹಾರವಿಲ್ಲ. ಆದರೆ ಊರಿನ ಸಮಸ್ಯೆಯನ್ನು ಮೊದಲು ನೀಗಿಸದೇ ಶಾಸಕರು ಅಧ್ಯಯನ ನೆಪದಲ್ಲಿ ಮೋಜು, ಮಸ್ತಿ ಮಾಡ್ತಿದ್ದಾರೆ ಎಂಬ ಕೂಗು ಕೇಳಿಬಂದಿದೆ.

ಜನರ ತೆರಿಗೆ ದುಡ್ಡಿನಲ್ಲಿ ಮೋಜು, ಮಸ್ತಿ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವವಾಗಿದೆ. ಇಷ್ಟು ವರ್ಷಗಳಿಂದ ಅಧ್ಯಯನ ಪ್ರವಾಸ ಎಂದು ವಿದೇಶಗಳಿಗೆ ಹೋದ ಶಾಸಕರು ಏನು ಕಡಿದು ಕಟ್ಟೆ ಹಾಕಿದ್ದಾರೆ? ರಾಜ್ಯದಲ್ಲಿ ಹಲವು ಸಮಸ್ಯೆಗಳಿದ್ದರೂ ಶಾಸಕರಿಗೆ ಮಾತ್ರ ಪರಿವೇ ಇಲ್ಲ. ಈಗಾಗಲೇ ಶಾಸಕರ ಒಂದು ತಂಡ ವಿದೇಶಿ ಪ್ರವಾಸಕ್ಕೆ ಹೋಗಿದ್ದಾರೆ. ಈ ತಂಡ ಸದ್ಯಕ್ಕೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಮೋಜು ಮಾಡ್ತಿದ್ದಾರೆ.

ಇದಾದ ನಂತರ ಗುತ್ತೇದಾರ್ ನೇತೃತ್ವದ 17 ಶಾಸಕರ ತಂಡ ತೆರಳಲಿದೆ. ಒಬ್ಬೊಬ್ಬರಿಗೆ ಖರ್ಚಾಗೋದು 60 ಲಕ್ಷಕ್ಕಿಂತ ಹೆಚ್ಚು. ಅಷ್ಟೇ ಅಲ್ಲದೇ ಅವರ ಕುಟುಂಬದ ವೆಚ್ಚವನ್ನು ಕೂಡ ಸರ್ಕಾರವೇ ಭರಿಸುತ್ತದೆ. 'ಇದು ಲೆಜಿಸ್ಲೇಚರ್ ಕಮಿಟಿಯಲ್ಲಿ ತೀರ್ಮಾನವಾಗುತ್ತದೆ. ನಾವು ತೀರ್ಮಾನ ಮಾಡೋದು ಅಲ್ಲ' ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಆದರೆ ಲೆಜಿಸ್ಲೇಟಿರ್ ಕಮಿಟಿಯ ಮೇಲೆ ನಿಯಂತ್ರಣ ಹಾಕುವ ಅಧಿಕಾರ ಸಿಎಂಗೆ ಇಲ್ಲವೇ? ಇವರ ಸ್ವಂತ ದುಡ್ಡಿನಲ್ಲಿ ವಿದೇಶಕ್ಕೆ ತೆರಳಿ ಏನು ಬೇಕಾದ್ರೂ ಮಾಡ್ಲಿ, ಆದರೆ ಜನರ ತೆರಿಗೆ ದುಡ್ಡಿನಿಂದ, ಜನರು ಕಷ್ಟಪಟ್ಟು ದುಡಿದು ಸಂಪಾದಿಸಿ ಕಟ್ಟುವ ತೆರಿಗೆ ದುಡ್ಡಿನಲ್ಲಿ ವಿದೇಶ ಪ್ರವಾಸಕ್ಕೆ ಹೋಗುವುದು ಎಷ್ಟು ಸರಿ ಎಂಬ ಪ್ರಶ್ನೆ ಕೇಳಿಬಂದಿದೆ.

ವೆಬ್ದುನಿಯಾವನ್ನು ಓದಿ