ದೆಹಲಿ ಗ್ಯಾಂಗ್ ರೇಪ್‌ನ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ್ದೇಕೆ?

ಶುಕ್ರವಾರ, 13 ಸೆಪ್ಟಂಬರ್ 2013 (16:49 IST)
PR
PR
2012ರಲ್ಲಿ ನಡೆದ ದೆಹಲಿ ಗ್ಯಾಂಗ್ ರೇಪ್ ಪ್ರಕರಣ ಅತ್ಯಾಚಾರ ಮತ್ತು ಹತ್ಯೆಯನ್ನು ಒಳಗೊಂಡ ಕ್ರೌರ್ಯ, ಹಿಂಸಾತ್ಮಕ ವರ್ತನೆಯ ಪ್ರದರ್ಶನವಾಗಿದೆ. ನವದೆಹಲಿಯ ನೆರೆಯ ಮುನ್ರಿಕಾದಲ್ಲಿ 2012ರ ಡಿಸೆಂಬರ್ 16ರಂದು ಈ ದುರಂತ ಜರುಗಿತು. 23 ವರ್ಷ ವಯಸ್ಸಿನ ಫಿಸಿಯೋಥೆರಪಿ ಇನ್‌ಟರ್ನ್ ವಿದ್ಯಾರ್ಥಿನಿ ತನ್ನ ಪುರುಷ ಸಂಗಾತಿಯ ಜತೆ ಬಸ್‌ನಲ್ಲಿ ತೆರಳುತ್ತಿದ್ದಾಗ ಅವಳನ್ನು ಥಳಿಸಿ, ಗ್ಯಾಂಗ್‌ರೇಪ್ ಮಾಡಲಾಯಿತು. ಬಸ್‌ನಲ್ಲಿ ಚಾಲಕ ಸೇರಿದಂತೆ 6 ಮಂದಿಯಿದ್ದು, ಎಲ್ಲರೂ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದರು. ಯುವತಿ 13 ದಿನಗಳ ನಂತರ ಸಿಂಗಪುರದಲ್ಲಿ ತುರ್ತು ಚಿಕಿತ್ಸೆ ಪಡೆಯುವಾಗ ಮೃತಪಟ್ಟಳು. ದೆಹಲಿ ಗ್ಯಾಂಗ್‌ರೇಪ್ ಪ್ರಕರಣವನ್ನು ಅಪರೂಪದಲ್ಲಿ ಅಪರೂಪದ ಪ್ರಕರಣವೆಂದು ತೀರ್ಮಾನಿಸಿದ ಕೋರ್ಟ್ ನಾಲ್ವರಿಗೂ ಗಲ್ಲು ಶಿಕ್ಷೆಯನ್ನು ವಿಧಿಸಿತು.

ಇಂತಹ ಕ್ರೂರ, ಹೇಯ ಅಪರಾಧ ಎಸಗಿದ ಕಾಮುಕರಿಗೆ ಗಲ್ಲು ಶಿಕ್ಷೆಯೇ ಸೂಕ್ತ ಎಂದು ನ್ಯಾಯಾಧೀಶರು ಪರಿಗಣಿಸಿದರು.ಆರೋಪಿ ರಾಮ್‌ಸಿಂಗ್ ತಿಹಾರ್ ಜೈಲಿನಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಇನ್ನೊಬ್ಬ ಬಾಲಾಪರಾಧಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು. ಬಸ್‌ನಲ್ಲಿ ಕಾಮುಕರು ತೋರಿದ ಕ್ರೌರ್ಯ, ಅಮಾನುಷ ವರ್ತನೆಯೇ ಅವರಿಗೆ ಗಲ್ಲುಶಿಕ್ಷೆ ನೀಡುವುದಕ್ಕೆ ಮುಖ್ಯ ಕಾರಣವಾಗಿದೆ. ಬಸ್ಸಿನಲ್ಲಿ ಯುವತಿಯ ಸ್ನೇಹಿತನಿಗೆ ಥಳಿಸಿದ ದುಷ್ಕರ್ಮಿಗಳು ಅವನಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಪ್ರಜ್ಞೆ ತಪ್ಪಿಸಿದರು. ಬಳಿಕ ಯುವತಿಯನ್ನು ಬಸ್ಸಿನ ಹಿಂಭಾಗಕ್ಕೆ ಒಯ್ದು, ರಾಡ್‌ನಿಂದ ಹೊಡೆದು ಐವರು ಯುವತಿ ಮೇಲೆ ರೇಪ್ ಮಾಡುವಾಗ ಬಸ್ ಮುಂದೆ ಚಲಿಸುತ್ತಲೇ ಇತ್ತು.

PR
PR
ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರಿಂದ ಅವಳ ಹೊಟ್ಟೆ, ಕರುಳುಗಳು ಮತ್ತು ಗುಪ್ತಾಂಗಕ್ಕೆ ತೀವ್ರ ಗಾಯಗಳಾಗಿವೆಯೆಂದು ವೈದ್ಯಕೀಯ ವರದಿ ತಿಳಿಸಿದೆ. ದುಷ್ಕರ್ಮಿಗಳು ತುಕ್ಕು ಹಿಡಿದ ಕಬ್ಬಿಣದ ರಾಡ್‌ಅನ್ನು ಗುಪ್ತಾಂಗದೊಳಕ್ಕೆ ತುರುಕಿದ್ದರಿಂದ ಕರುಳುಗಳು ಹೊರಗೆ ಬಂದಿತ್ತು. ಅಪ್ರಾಪ್ತ ವಯಸ್ಕ ಬಾಲಕ ಅತ್ಯಂತ ಕ್ರೂರ ದಾಳಿ ನಡೆಸಿ ಯುವತಿಯ ಮೇಲೆ ಎರಡು ಬಾರಿ ಅತ್ಯಾಚಾರ ಮಾಡಿದ್ದಲ್ಲದೇ ಕೈಗಳಿಂದ ಯುವತಿಯ ಕರುಳನ್ನು ಹೊರಕ್ಕೆ ಎಳೆದು, ಕೇಕೆ ಹಾಕಿದ್ದ. ಆದರೆ ಅವನನ್ನು ಬಾಲಾಪರಾಧಿ ಎಂದು ಘೋಷಿಸಿ ಕೇವಲ ಮೂರು ವರ್ಷಗಳ ಶಿಕ್ಷೆ ವಿಧಿಸಲಾಯಿತು.

ಯುವತಿ ಮಾರಣಾಂತಿಕ ಸ್ಥಿತಿಯಲ್ಲೂ ದಾಳಿಕೋರರ ಜತೆ ಹೋರಾಡಿ, ಆರೋಪಿಗಳನ್ನು ಕಚ್ಚಿ ಗಾಯಗೊಳಿಸಿದ್ದಳು. ಆದರೆ ಆರು ಮಂದಿ ಕಾಮಪಿಪಾಸುಗಳ ದಾಳಿಗೆ ನಲುಗಿ ಹೋದ ಯುವತಿ ಸಾವು, ಬದುಕಿನ ನಡುವೆ ಹೋರಾಡುತ್ತಿದ್ದಳು. ಅತ್ಯಾಚಾರ ಬಳಿಕ ಯುವತಿಯನ್ನು ಮತ್ತು ಯುವಕನನ್ನು ಚಲಿಸುತ್ತಿದ್ದ ಬಸ್‌ನಿಂದ ಹೊರಕ್ಕೆಸೆದಿದ್ದರು. ಇಂತಹ ಅಮಾನುಷ ಕ್ರೌರ್ಯ ಪ್ರದರ್ಶಿಸಿದ ಕಾಮುಕರಿಗೆ ಗಲ್ಲು ಶಿಕ್ಷೆಯಲ್ಲದೇ ಮತ್ತೇನು ಕೊಡಬೇಕು?

ವೆಬ್ದುನಿಯಾವನ್ನು ಓದಿ