ಬಿಜೆಪಿಗೆ ಮರುಸೇರ್ಪಡೆಯಾದ ಯಡಿಯೂರಪ್ಪಗೆ ಸಿಕ್ಕಿದ್ದೇನು?

ಮಂಗಳವಾರ, 28 ಜನವರಿ 2014 (13:56 IST)
PR
PR
ಇಂದು ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಮುಖಂಡ ಯಡಿಯೂಪ್ಪ ಕೊನೆಗೂ ಪಾಲ್ಗೊಳ್ಳುವ ಮೂಲಕ ಆಂತರಿಕವಾಗಿ ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದರೂ ಬಹಿರಂಗವಾಗಿ ತೋರಿಸಿಕೊಳ್ಳುವ ಯತ್ನ ಮಾಡಿಲ್ಲ. ಚುನಾವಣೆ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ನೀಡುವುದಾಗಿ ಹೇಳಿ ಇನ್ನೂ ನೀಡದಿರುವುದರಿಂದ ಯಡಿಯೂರಪ್ಪ ಸಹಜವಾಗಿ ಮುನಿಸಿಕೊಂಡು, ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳದೇ ದೂರವುಳಿದಿದ್ದರು. ಕೆಜೆಪಿಯನ್ನು ತೊರೆದು ಬಿಜೆಪಿ ಸೇರಿದ ತಮ್ಮ ಪಕ್ಷದ ಮುಖಂಡರಿಗೆ ಕೂಡ ಯಾವುದೇ ಸ್ಥಾನಮಾನ ನೀಡಿಲ್ಲ. ಮಾತೃಪಕ್ಷದಲ್ಲಿ ಸೂಕ್ತ ಸ್ಥಾನ ಸಿಗುತ್ತೆ ಎಂಬ ನಿರೀಕ್ಷೆ ಇಟ್ಟುಕೊಂಡು ಕೆಜೆಪಿಯ ಶಾಸಕರು ಬಿಜೆಪಿಗೆ ಸೇರಿದ್ದರು. ಆದರೆ ಈಗ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎನ್ನುವ ಸ್ಥಿತಿ ಕೆಜೆಪಿ ಮಾಜಿ ಶಾಸಕರ ಪರಿಸ್ಥಿತಿಯಾಗಿದೆ.

ಬಿಜೆಪಿ ಪಕ್ಷದ ರೀತಿ,ನೀತಿಗಳ ಬಗ್ಗೆ ಬೇಸರಗೊಂಡು ಬಿಜೆಪಿಯನ್ನು ತ್ಯಜಿಸಿ ಕೆಜೆಪಿ ಪಕ್ಷವನ್ನು ಯಡಿಯೂರಪ್ಪ ಕಟ್ಟಿ ಬೆಳೆಸಿದ್ದರು. ಆದರೆ ಯಡಿಯೂರಪ್ಪ ಬಿಜೆಪಿ ತೊರೆದ ಮೇಲೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸಮರ್ಥ ನಾಯಕತ್ವದ ಕೊರತೆ ಮತ್ತು ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ನೆಲಕಚ್ಚಿತು.

PR
PR
ಆ ಹಿನ್ನೆಲೆಯಲ್ಲಿ ಪಕ್ಷಕ್ಕೆ ಪುನಶ್ಚೇತನ ನೀಡುವ ದೃಷ್ಟಿಯಿಂದ ಮತ್ತು ಬಿಜೆಪಿಯ ಮತಗಳು ಹರಿದು ಹಂಚಿಹೋಗದಂತೆ ಮಾಡಲು ಯಡಿಯೂರಪ್ಪ ಅವರನ್ನು ಬಿಜೆಪಿಗೆ ತರುವ ಶತಪ್ರಯತ್ನ ಮಾಡಿದ ಬಿಜೆಪಿ ರಾಜ್ಯಮುಖಂಡರು ಅದರಲ್ಲಿ ಯಶಸ್ವಿಯೂ ಆಗಿದ್ದರು. ಯಡಿಯೂರಪ್ಪ ಅವರಿಗೆ ಚುನಾವಣೆ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ಸಿಗುವ ಭರವಸೆಯನ್ನು ಕೂಡ ರಾಜ್ಯ ಬಿಜೆಪಿ ನಾಯಕರು ನೀಡಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಅದಕ್ಕೆ ಅಂತಿಮ ಮುದ್ರೆ ಒತ್ತಬೇಕಾಗಿದ್ದು, ಹೈಕಮಾಂಡ್‌ನಿಂದ ಯಾವುದೇ ಸಂದೇಶ ಬರದಿರುವುದು ಯಡಿಯೂರಪ್ಪ ಅವರಿಗೆ ಅಸಮಾಧಾನ ಮೂಡಿಸಿದೆ. ಇದನ್ನು ಬಾಯಿಬಿಟ್ಟು ಹೇಳದಿದ್ದರೂ, ವಿಧಾನಸಭೆ ಕಲಾಪಕ್ಕೆ ಹಾಜರಾಗದಿರುವ ಮೂಲಕ ಪರೋಕ್ಷವಾಗಿ ಅಸಮಾಧಾನವನ್ನು ಅವರು ತೋಡಿಕೊಂಡಿದ್ದರು.

ಈಗ ಯಡಿಯೂರಪ್ಪನವರಿಗೆ ಅತ್ತ ಕೆಜೆಪಿ ಪಕ್ಷವೂ ಇಲ್ಲ, ಇತ್ತ ಬಿಜೆಪಿ ಪಕ್ಷದಲ್ಲಿ ಯಾವುದೇ ಸ್ಥಾನಮಾನವೂ ಸಿಗದೇ ಅತಂತ್ರಸ್ಥಿತಿಗೆ ತಲುಪಿದ್ದಾರೆ. ಬಿಜೆಪಿ ಹೈಕಮಾಂಡ್ ತಮಗೇನಾದರೂ ಶುಭಸುದ್ದಿ ತರುತ್ತದೆಯೇ ಎಂದು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ