ಭಯ ಬೇಡ, ಸುನಾಮಿಗೆ ಕಾರಣ 'ಸೂಪರ್ ಮೂನ್' ಅಲ್ಲ : ತಜ್ಞರು

PR
ಮಾರ್ಚ್ 19ರಂದು ಭೂಮಿಯ ಉಪಗ್ರಹವಾಗಿರುವ ಚಂದ್ರನು ನಮಗೆ ಹತ್ತಿರ ಬರುತ್ತಿದ್ದಾನೆ. ಈ 'ಸೂಪರ್ ಮೂನ್' ಎಂಬ ಪ್ರಕ್ರಿಯೆಯ ಪರಿಣಾಮವಾಗಿ ಭಾರೀ ಪ್ರಾಕೃತಿಕ ವಿಕೋಪಗಳು ಘಟಿಸುತ್ತವೆ ಎಂಬ ಬಗ್ಗೆ ಜನ ಸಾಮಾನ್ಯರ ಆತಂಕ ಸಾಧುವಲ್ಲ ಎನ್ನುತ್ತಾರೆ ತಜ್ಞರು.

ಈ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಭೌತಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಟಿ.ಎನ್.ಕೇಶವ ಅವರನ್ನು ವೆಬ್‌ದುನಿಯಾ ಸಂಪರ್ಕಿಸಿದಾಗ ಅವರು, ವಿವರಣೆ ನೀಡಿದ್ದು ಹೀಗೆ:

ಚಂದ್ರನು ಭೂಮಿಗೆ ಹತ್ತಿರ ಬರುವುದು ಅತ್ಯಂತ ಸಹಜವಾದ ನೈಸರ್ಗಿಕ ಪ್ರಕ್ರಿಯೆ. ಇದೇನೂ ಅಪರೂಪದ್ದೇನಲ್ಲ. ಚಂದ್ರನು ಭೂಮಿಯ ಸುತ್ತ ಸುತ್ತುವುದು ಅಂಡಾಕಾರದ ಚಲನೆಯ ಮೂಲಕ. ಈ ಚಲನೆಯ ಹಾದಿಯಲ್ಲಿ ಭೂಮಿಗೆ ಹತ್ತಿರ ಬರುವುದು ಅತ್ಯಂತ ಸಾಮಾನ್ಯ. (ವೃತ್ತಾಕಾರದಲ್ಲಿ ಚಲಿಸುತ್ತಿದ್ದರೆ ಚಂದ್ರನ ದೂರ ಭೂಮಿಯಿಂದ ಸದಾ ಕಾಲ ಒಂದೇ ಅಂತರವಿರುತ್ತದೆ.)

ಮತ್ತು ಈ ರೀತಿಯ ಸಹಜ ಕ್ರಿಯೆ ನಡೆದಾಗಲೇ ಭಯಂಕರವಾದ ಪ್ರಾಕೃತಿಕ ವಿಕೋಪ ಘಟನೆ ಸಂಭವಿಸಿದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಸಾಗರ ಗರ್ಭದಲ್ಲಿ ಭೂಕಂಪ ಸಂಭವಿಸಿದಾಗ ಸುನಾಮಿ ಅಲೆಗಳು ಏಳುತ್ತವೆ. ಭೂಕಂಪಕ್ಕೂ ಚಂದ್ರನು ಹತ್ತಿರ ಬರುವುದಕ್ಕೂ ಯಾವುದೇ ಸಂಬಂಧ ಇಲ್ಲ.

ಶುಕ್ರವಾರ ಕಾಣಿಸಿಕೊಂಡ ಸುನಾಮಿಗೂ ಚಂದ್ರನು ಹತ್ತಿರ ಬರುವುದಕ್ಕೂ ಏನೂ ಸಂಬಂಧವಿಲ್ಲ. ಸುನಾಮಿ ಬಂದಿದ್ದು ಭೂಕಂಪದಿಂದ. ಹಾಗಂತ, ಚಂದ್ರನು ಭೂಮಿಯ ಸಮೀಪ ಇರುವುದರಿಂದ ಯಾವುದೇ ಪ್ರಭಾವ ಆಗಿಲ್ಲ ಅಂತಲೂ ಹೇಳಲು ಬರುವುದಿಲ್ಲ. ಆಗಿರಲೂಬಹುದು. ಹೇಗೆಂದರೆ, ಚಂದ್ರನಿಗೂ ಸಮುದ್ರದ ನೀರಿನ ಏರಿಳಿತಕ್ಕೂ ಸಂಬಂಧವಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಹುಣ್ಣಿಮೆಯಂದು ಉಬ್ಬರ ಇಳಿತ ಹೆಚ್ಚಾಗಿರುತ್ತದೆ. ಅದೇ ರೀತಿ, ಚಂದ್ರನು ಭೂಮಿಯ ಸಮೀಪ ಬಂದಾಗ ಇದರ ಬಲವು ಒಂದಷ್ಟು ಹೆಚ್ಚೇ ಇರುವ ಕಾರಣ, ಸಮುದ್ರದ ಅಲೆಗಳ ಅಬ್ಬರಕ್ಕೆ ತೀಕ್ಷ್ಣತೆಯನ್ನು ನೀಡಿದ್ದಿರಬಹುದು.

ಅಂದರೆ, ಇಂದಿನ ಪ್ರಕರಣದಲ್ಲಿ, ಚಂದ್ರನು ಭೂಮಿಗೆ ಹತ್ತಿರ ಬಂದಿರುವ ಕಾರಣ ಸುನಾಮಿಯ ತೀಕ್ಷ್ಣತೆ ಹೆಚ್ಚಾಗಿರಬಹುದೇ ಹೊರತು, ಚಂದ್ರನಿಂದಾಗಿಯೇ ಈ ಸುನಾಮಿ ಅಥವಾ ಪ್ರಕೃತಿ ವಿಕೋಪ ಆಯಿತೆಂಬುದರಲ್ಲಿ ಹುರುಳಿಲ್ಲ. ಚಂದ್ರನು ತನ್ನ ಅಂಡಾಕಾರದ ಕಕ್ಷೆಯಲ್ಲಿ ಚಲನೆ ಮಾಡುವ ಸಂದರ್ಭ ಮಾರ್ಚ್ 19ರಂದು ಭೂಮಿಗೆ ತೀರಾ ಹತ್ತಿರ ಬರುತ್ತಾನೆ. ಒಂದು ವಾರ ಮೊದಲು ಮತ್ತು ಒಂದು ವಾರದ ನಂತರದ ಅವಧಿಗೆ ಇದರ ಪ್ರಭಾವವು ಇರುತ್ತದೆ. ಅಂದರೆ, ಸಮುದ್ರದಲ್ಲಿ ಒಂದಿಷ್ಟು ಉಬ್ಬರ ಹೆಚ್ಚಾಗಬಹುದು.

ಅದೇ ರೀತಿ, ಮಂಗಳೂರು ವಿವಿಯ ಸಾಗರ - ಭೂಗರ್ಭಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಕೃಷ್ಣಯ್ಯ ಅವರು ಕೂಡ ಇದೇ ಮಾತನ್ನು ಹೇಳುತ್ತಾರೆ. ಮತ್ತು ಸಾಗರಗರ್ಭದಲ್ಲಿ ಭಾರೀ ತೀವ್ರತೆಯ ಭೂಕಂಪನವಾದಾಗ ಸಮುದ್ರದಲ್ಲಿ ಸುನಾಮಿ ಅಲೆಗಳು ಏಳುವುದು ಸಹಜ. ಅಲ್ಲಿನ ಭೂತಳದಲ್ಲಿ ಆದ ಈ ಕಂಪನ ಮತ್ತು ಸುನಾಮಿ ಅಲೆಗಳ ಅಬ್ಬರವು, ಭಾರತದ ಕಡೆಗೆ ಬರುವಾಗ ದುರ್ಬಲವಾಗಿರುತ್ತದೆ. ಭೂಕಂಪದಿಂದಾಗಿ ನೀರಿನೊಳಗೆ ಕಂದಕವೇರ್ಪಟ್ಟು, ಅದಕ್ಕೆ ನುಗ್ಗುವ ನೀರು ಅಷ್ಟೇ ಅಥವಾ ಅದಕ್ಕಿಂತ ಬಲವಾಗಿ ವಾಪಸು ಬರುವಾಗ, ಈ ಸುನಾಮಿ ಅಲೆಗಳು ಏಳುತ್ತವೆ. 2004ರ ಡಿಸೆಂಬರ್ 26ರಂದು ಸುನಾಮಿ ಬಂದಾಗಲೂ, ಕರ್ನಾಟಕದ ಕರಾವಳಿ ತೀರದಲ್ಲಿ ಒಂದಿಷ್ಟು ಉಬ್ಬರ ಕಂಡು ಬಂದಿತ್ತು. ಹೀಗಾಗಿ ನಮ್ಮ ರಾಜ್ಯದಲ್ಲಿಯೂ ಸಮುದ್ರ ತೀರಕ್ಕೆ ಹೋಗುವಾಗ ಉಬ್ಬರ ಹೆಚ್ಚಿರಬಹುದಾದ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ ಎಂದಿದ್ದಾರೆ ಪ್ರೊ.ಕೃಷ್ಣಯ್ಯ.

ವೆಬ್ದುನಿಯಾವನ್ನು ಓದಿ