ಲೋಕಸಭೆ ಚುನಾವಣೆ ಮೇಲೆ ಕಣ್ಣಿರಿಸಿ ಕೇಜ್ರಿವಾಲ್ ರಾಜೀನಾಮೆ ನೀಡಿದ್ರೆ?

ಸೋಮವಾರ, 17 ಫೆಬ್ರವರಿ 2014 (19:38 IST)
PR
PR
ಆಮ್ ಆದ್ಮಿ ಪಕ್ಷ ತಾನು ದೆಹಲಿ ಜನತೆಗೆ ನೀಡಿದ ಮುಖ್ಯ ಭರವಸೆಯಾದ ಜನಲೋಕ ಪಾಲ್ ಜಾರಿಗೆ ವಿಫಲವಾದ್ದರಿಂದ ಅಧಿಕಾರವನ್ನು ತ್ಯಜಿಸಿತು. ಕೇಜ್ರಿವಾಲ್ ಅವರ ಈ ಕ್ರಮ ಲೆಕ್ಕಾಚಾರದಿಂದ ಕೂಡಿತ್ತು. ಸದನದಲ್ಲಿ ಜನಲೋಕಪಾಲ ವಿಧೇಯಕ ಮಂಡನೆಗೆ ವಿಫಲನಾದರೆ ಒಂದು ನಿಮಿಷವೂ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ಹೇಳಿದ್ದ ಕೇಜ್ರಿವಾಲ್ ತಮ್ಮ ಮಾತಿನಂತೆ ಮಹತ್ವದ ಮಸೂದೆ ಬೆಳಕು ಕಾಣುವುದಿಲ್ಲ ಎಂದು ಸ್ಪಷ್ಟವಾದ ಕ್ಷಣವೇ ರಾಜೀನಾಮೆ ಬಿಸಾಕಿದರು. ತಾವು ನೈತಿಕತೆಯ ಆಧಾರದ ಮೇಲೆ ರಾಜೀನಾಮೆ ನೀಡುತ್ತಿರುವುದಾಗಿ ಕೇಜ್ರಿವಾಲ್ ಹೇಳಿದರು. ಕೇಜ್ರಿವಾಲ್ ರಾಜೀನಾಮೆ ನಿಲುವು ತೆಗೆದುಕೊಂಡ ಬಳಿಕ ಅವರು ಯಾವ ಸ್ಥಿತಿಯಲ್ಲಿ ಉಳಿದಿದ್ದಾರೆ?

ಅನೇಕ ಮಂದಿ ದಕ್ಷ, ಭ್ರಷ್ಟಾಚಾರ ಮುಕ್ತ ಆಡಳಿತದ ಪ್ರತೀಕವಾಗಿ, ಆಶಯ ಮತ್ತು ಕನಸಾಗಿ ಅವರನ್ನು ಕಂಡಿದ್ದಾರೆ. ಕೇಜ್ರಿವಾಲ್ ಬಗ್ಗೆ ಮತದಾರರಲ್ಲಿ ಸಹಾನುಭೂತಿ ಇನ್ನಷ್ಟು ಹೆಚ್ಚಿದೆ. ಜನತೆಗೆ ನೀಡಿದ್ದ ಭರವಸೆಗೆ ಚ್ಯುತಿ ಬಂದಾಗ, ಕೇಜ್ರಿವಾಲ್ ಅಧಿಕಾರದ ಅಂಟಿ ಕುಳಿತುಕೊಳ್ಳುವ ಜಾಯಮಾನದವರಲ್ಲ ಎಂದು ಜನತೆಗೆ ಮನದಟ್ಟುಮಾಡಿದ್ದಾರೆ. ದೆಹಲಿಯಲ್ಲಿ ಶೀಘ್ರದಲ್ಲೇ ಚುನಾವಣೆ ನಡೆದರೆ ಆಮ್ ಆದ್ಮಿ ಗೆಲ್ಲುತ್ತದೆಂದು ಸಮೀಕ್ಷೆಯೊಂದು ಕೂಡ ವಿಶ್ಲೇಷಣೆ ಮಾಡಿದೆ.

PR
PR
ಕೇಜ್ರಿವಾಲ್ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟು ರಾಜೀನಾಮೆ ನೀಡಿರಬಹುದೆಂದು ಸಿಎನ್‌ಎನ್ ಐಬಿಎನ್‌ನ ರಾಜದೀಪ್ ಸರ್ದೇಸಾಯಿ ಹೇಳಿದರು. ಆದರೆ ತಾವು ಲೋಕಸಭೆ ಚುನಾವಣೆಗೆ ಮುಖ್ಯಮಂತ್ರಿ ಸ್ಥಾನ ತ್ಯಜಿಸದೇ ಸ್ಪರ್ಧಿಸಬಹುದಿತ್ತು ಎಂದು ಕೇಜ್ರಿವಾಲ್ ಹೇಳಿದರು. ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ಮೋದಿ ಗುಜರಾತ್ ಮುಖ್ಯಮಂತ್ರಿ ಹುದ್ದೆ ತ್ಯಜಿಸಿದ್ದಾರೆಯೇ ಎಂದು ಕೇಜ್ರಿವಾಲ್ ಮರುಪ್ರಶ್ನೆ ಹಾಕಿದರು. ದೆಹಲಿಯಲ್ಲಿ ಅನೇಕ ಸರ್ಕಾರಗಳು ವರ್ಷಾವಧಿಗಳ ಕಾಲ ಸಾಧಿಸದಿರುವುದನ್ನು ತಾವು 49 ದಿನಗಳಲ್ಲಿ ಸಾಧಿಸಿದ್ದಾಗಿ ಕೇಜ್ರಿವಾಲ್ ಸರ್ಕಾರ ಪ್ರತಿಪಾದಿಸಿದೆ.

ಅವರು ದೆಹಲಿಯಲ್ಲಿ ಕೈಗೊಂಡ ಕ್ರಮಗಳು ಪ್ರಚಾರಪ್ರಿಯ ಕ್ರಮಗಳು ಎಂದು ಕೇಜ್ರಿವಾಲ್ ಶತ್ರುಗಳು ಹೇಳಿದವು. ತಮ್ಮ ಸರ್ಕಾರ ಯಾವಾಗ ಬೇಕಾದರೂ ಉರುಳುತ್ತದೆಂಬುದು ಕೇಜ್ರಿವಾಲ್‌ಗೆ ಅರಿವಿತ್ತು. ಹೀಗಾಗಿ ಲೋಕಸಭೆ ಚುನಾವಣೆಗೆ ಹೆಚ್ಚಿನ ಮೈಲೇಜ್ ಪಡೆಯುವುದಕ್ಕೆ ಇವೆಲ್ಲವನ್ನೂ ಮಾಡ್ತಿದ್ದಾರೆ ಎಂದು ಟೀಕಿಸಿದವು.

ಟೀಕಾಕಾರರು ಏನೇ ಹೇಳಲಿ, ಕೇಜ್ರಿವಾಲ್ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ದೆಹಲಿಯ ಅನೇಕ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಣೆ ಸುಧಾರಿಸಿತು. ಉದಾಹರಣೆಗೆ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ದಳ್ಳಾಳಿಗಳು ಮಾಯವಾದರು. ಆದರೆ ಡ್ಯಾನಿಷ್ ಮಹಿಳೆಯ ಗ್ಯಾಂಗ್ ರೇಪ್ ಮತ್ತು ಕಿರ್ಕಿ ಘಟನೆ ಸರ್ಕಾರದ ವರ್ಚಸ್ಸಿಗೆ ಧಕ್ಕೆಯುಂಟು ಮಾಡಿತು.ಕಿರ್ಕಿ ಘಟನೆಯನ್ನು ಕೇಜ್ರಿವಾಲ್ ಸಮರ್ಥಿಸಿಕೊಂಡರೂ, ಪಕ್ಷಕ್ಕೆ ಸ್ವಲ್ಪಮಟ್ಟಿಗೆ ಋಣಾತ್ಮಕ ಪ್ರಚಾರ ನೀಡಿತು. ಆದರೆ ಜನಲೋಕಪಾಲ ಜಾರಿಗಾಗಿ ಅಧಿಕಾರವನ್ನು ತ್ಯಜಿಸಿದ ಕೇಜ್ರಿವಾಲ್ ಹುತಾತ್ಮರೆಂಬ ಭಾವನೆ ಜನರಮನಸ್ಸಿನಲ್ಲಿದೆ. ಈ ಭಾವನೆ ಎಷ್ಟರಮಟ್ಟಿಗೆ ಆಮ್ ಆದ್ಮಿ ಮತಬುಟ್ಟಿಯನ್ನು ತುಂಬಿಸುತ್ತದೆಂದು ಚುನಾವಣೆಯಲ್ಲಿ ಕಾದುನೋಡಬೇಕು.

ವೆಬ್ದುನಿಯಾವನ್ನು ಓದಿ