ಬರೋಬ್ಬರಿ 1236 ಹುಡುಗಿಯರಿಗೆ ಮದುವೆ ಆಮಿಷ ಒಡ್ಡಿ ಹಣ ಕಿತ್ತ ವಂಚಕ

ಗುರುವಾರ, 9 ಅಕ್ಟೋಬರ್ 2014 (13:13 IST)
ವಂಚನೆ ಮಾಡಲು ವ್ಯಕ್ತಿಯೊಬ್ಬ ಎಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾನೆನ್ನುವುದಕ್ಕೆ ಉದಾರಣೆಯಾಗಿ ಒಂದು ವಿಲಕ್ಷಣ ಘಟನೆಯೊಂದು ವರದಿಯಾಗಿದ್ದು, ಮುಂಬಯಿಯ  ಕಿರಣ್ ಬಾಗ್ವೆ ಎಂಬ ಯುವಕನೊಬ್ಬ ಮದುವೆಯ ಆಮಿಷ ಒಡ್ಡಿ ಸಾವಿರಕ್ಕಿಂತ ಹೆಚ್ಚು ಹುಡುಗಿಯರಿಗೆ ಮೋಸ ಮಾಡಿದ್ದಾನೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ. 

ತನ್ನನ್ನು ವಿವಾಹವಾಗಲು ಒಪ್ಪಿಕೊಂಡ ಹುಡುಗಿಯರಿಗೆ ಭಾವನಾತ್ಮಕ ಬ್ಲಾಕ್ಮೇಲ್ ಮಾಡಿದ ಆತ, ಆರೋಗ್ಯ ಸರಿಯಿಲ್ಲ ಎಂಬ ನೆಪ ಹೇಳಿ ತನ್ನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವಂತೆ ಹೇಳಿ ಅನಾಯಾಸವಾಗಿ ಹಣ ದೋಚಿದ.
 
ಆರೋಪಿ ಕಿರಣ್‌ನನ್ನು ಸೈಬರ್ ಪೋಲಿಸರು ಬುಧವಾರ ಬಂಧಿಸಿ, ವಿಚಾರಣೆ ನಡೆಸಿದ್ದಾರೆ. 
 
"ತಾನು 1236 ಯುವತಿಯರಿಗೆ ಮದುವೆಯ ಪ್ರಸ್ತಾಪದ ವಿನಂತಿ ಕಳುಹಿಸಿದ್ದೆ. ಅದರಲ್ಲಿ 1207 ಜನ ನನ್ನ ಬಲೆಗೆ ಬಿದ್ದರು. ಅವರಲ್ಲಿ ಹೆಚ್ಚಿನವರ ಬಳಿ ಅಸೌಖ್ಯದ ನೆಪ ಹೇಳಿ ಸಾಕಷ್ಟು ಮೊತ್ತದ ಹಣವನ್ನು ತನ್ನ ಬ್ಯಾಂಕ್ ಖಾತೆಗೆ  ವರ್ಗಾಯಿಸಿಕೊಂಡೆ " ಎಂದು ವಿಚಾರಣೆ ವೇಳೆ ಆತ ಪೋಲಿಸರಲ್ಲಿ ಬಾಯ್ಬಿಟ್ಟಿದ್ದಾನೆ. 
 
11ನೇ ತರಗತಿಯವರೆಗೆ ಓದಿರುವ ಆತ  ಕಳೆದ ವರ್ಷ ಪ್ರತಿಷ್ಠಿತ ಕಂಪನಿಯೊಂದರ ಉದ್ಯೋಗಿಯಾಗಿರುವ ಯುವತಿಯ ಬಳಿ ತಾನು ಎಂಜಿನಿಯರ್ ಎಂದು ಹೇಳಿ ಮದುವೆಯ ಪ್ರಸ್ತಾಪ ಇಟ್ಟಿದ್ದ. ಆಕೆ ಅವನನ್ನು ಒಪ್ಪಿಕೊಂಡಿದ್ದಳು. ಅವರಿಬ್ಬರು ಮೊಬೈಲ್ ಮತ್ತು ಇಂಟರ್‌ನೆಟ್ ಮೂಲಕ ನಿರಂತರ ಸಂಪರ್ಕದಲ್ಲಿದ್ದರು. 
 
ಒಂದು ದಿನ ಆಕೆಗೆ ಕಿರಣ್ ತಾನು ಗಂಭೀರ ಅನಾರೋಗ್ಯದ ಸಮಸ್ಯೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಸಂದೇಶ ಕಳುಹಿಸಿದ.  ಆಕೆ ಅದನ್ನು ನಂಬಿದಳು. ಚಿಕಿತ್ಸೆಯ ನೆಪದಲ್ಲಿ ಆತ ಆಕೆಯಿಂದ ಸ್ವಲ್ಪ,ಸ್ವಲ್ಪ ಎಂದು 1 ಲಕ್ಷ, 57 ಸಾವಿರ ಹಣವನ್ನು ಲಪಟಾಯಿಸುವಲ್ಲಿ ಯಶಸ್ವಿಯಾದ. ಸತತವಾಗಿ ಆತನಿಗೆ ಹಣವನ್ನು ವರ್ಗಾಯಿಸುತ್ತಿದ್ದ ಆಕೆ ಒಂದು ದಿನ ನೀನು ಯಾವ ಆಸ್ಪತ್ರೆಯಲ್ಲಿ ದಾಖಲಾಗಿರುವೆ? ಎಂದು ಪ್ರಶ್ನಿಸಿದಾಗ ಆತನ ಉತ್ತರ ಮಾತ್ರ ಅಸ್ಪಷ್ಟವಾಗಿತ್ತು. ಸಂದೇಹಗೊಂಡ ಯುವತಿ ಮುಂಬಯಿ ಪೋಲಿಸ್ ಅಪರಾಧ ವಿಭಾಗದಲ್ಲಿ ದೂರು ದಾಖಲಿಸಿದಳು.  ತನಿಖೆ ನಡೆಸಿದ ಪೋಲಿಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ