ರೈಲು ಮಿಸ್ ಆಯಿತೆಂದು ವಿಮಾನವನ್ನೇರಿದ...

ಗುರುವಾರ, 11 ಡಿಸೆಂಬರ್ 2014 (12:03 IST)
ವಿಮಾನ ಮಿಸ್ ಆಯಿತು ಅಂತ ರೈಲನ್ನೇರಿ ಹೋಗುವವರನ್ನು ನೋಡಿದ್ದೇವೆ.. ಕೇಳಿದ್ದೇವೆ.... ಆದರೆ, ರೈಲು ಮಿಸ್ ಆಯ್ತು ಅಂತ ವಿಮಾನವನ್ನೇರಿ ಪ್ರಯಾಣ ಬೆಳೆಸಿದ ಸುದ್ದಿಯನ್ನೇನಾದರೂ ಕೇಳಿದ್ದೀರಾ...? ಅಥವಾ ನೋಡಿದ್ದೀರಾ...? ಅಂತಹದ್ದೊಂದು ಸ್ವಾರಸ್ಯಕರ ಪ್ರಸಂಗ ಸೂರತ್‌ನಲ್ಲಿ ನಡೆದಿದೆ.
ಈ ಅನಿವಾರ್ಯ ಸನ್ನಿವೇಶದ, ರಸವತ್ತಾದ ಘಟನೆಯ ನಾಯಕ ಸಿಕಂದರಾಬಾದ್‌ನಲ್ಲಿ ಇಂಜಿನಿಯರ್ ಆಗಿರುವ ಮುರುಳಿ ಕೃಷ್ಣ. 
 
ರಾಜಸ್ಥಾನದ ಜೈಸಲ್ಮೇರ್ ನಿವಾಸಿಯಾಗಿರುವ ಮುರಳಿ ಕೃಷ್ಣ, ಸಿಕಂದರಾಬಾದ್‌ನಲ್ಲಿ ಎಂಜಿನಿಯರ್ ಆಗಿದ್ದಾರೆ. ಕಳೆದ ಶುಕ್ರವಾರ ಅವರು ಜೋಧಪುರ-ಬಿಕಾನೇರ್-ಸಿಕಂದರಾಬಾದ್ ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಶನಿವಾರ ಆ ರೈಲು ಸೂರತ್ ರೇಲ್ವೆ ನಿಲ್ದಾಣದಲ್ಲಿ ನಿಂತಿತ್ತು. ಆ ಸಂದರ್ಭದಲ್ಲಿ ನೀರು ತರಲೆಂದು ಟ್ರೈನ್ ಇಳಿದು ಹೋಗಿದ್ದರವರು. ಮರಳಿ ಬರುವಷ್ಟರಲ್ಲಿ ಅವರು ಪ್ರಯಾಣಿಸುತ್ತಿದ್ದ ರೈಲು ಅಲ್ಲಿಂದ ಹೊರಟು ಹೋಗಿತ್ತು. 
 
ಒಂದು ಕ್ಷಣ ಮುರಳಿ ಕೃಷ್ಣ ತೀವೃ ಆಘಾತಕ್ಕೀಡಾದರು. ಅವರ ಕೆಲವು ಮುಖ್ಯ ದಾಖಲೆ ಪತ್ರಗಳು, ಮತ್ತಿತರ ಅಗತ್ಯ ವಸ್ತುಗಳಿದ್ದ ಬ್ಯಾಗ್‌ ರೈಲಿನಲ್ಲಿತ್ತು . ಈ ಕುರಿತು ರೇಲ್ವೆ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಿದರು. ಆದರೆ, ತಾನು ಯಾವ ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳದ ಕಾರಣ ಅವರ ಬ್ಯಾಗ್ ಪತ್ತೆ ಹಚ್ಚಲು ಅಧಿಕಾರಿಗಳಿಂದ ಸಾಧ್ಯವಾಗಲಿಲ್ಲ.
 
ಏನು ಮಾಡಬೇಕೆಂದು ತೋಚದೆ ತಲೆ ಮೇಲೆ ಕೈ ಹೊತ್ತು ಕುಳಿತ ಅವರಿಗೆ ಒಮ್ಮಿಂದೊಮ್ಮೆಲೆ ಒಂದು ಯೋಚನೆ ಹೊಳೆಯಿತು.  ಧಡಕ್ಕನೆ ಕುಳಿತಲ್ಲಿಂದ ಎದ್ದ ಅವರು ಮುಂಬಯಿ ವಿಮಾನ ನಿಲ್ದಾಣಕ್ಕೆ ಹೋಗಿ ಹೈದರಾಬಾದ್ ಟಿಕೆಟ್ ತೆಗೆದುಕೊಂಡು ವಿಮಾನವನ್ನೇರಿಯೇ ಬಿಟ್ಟರು. ಅಲ್ಲಿಂದ ಕಾರಿನಲ್ಲಿ ಸಿಕಂದರಾಬಾದ್ ರೇಲ್ವೆ ನಿಲ್ದಾಣಕ್ಕೆ ತೆರಳಿದರು. ಇಲ್ಲಿ ಅವರ ಅವರ ಅದೃಷ್ಟ ಕೈಕೊಡಲಿಲ್ಲ. ರೈಲಿನಲ್ಲಿದ್ದ್ ಬ್ಯಾಗ್ ಹಾಗೂ ಅಗತ್ಯ ಕಾಗದ ಪತ್ರಗಳು ಸುರಕ್ಷಿತವಾಗಿದ್ದವು.

ವೆಬ್ದುನಿಯಾವನ್ನು ಓದಿ