ಆತ ಕೇಳಿದ್ದು 200, ಎಟಿಎಂ ನೀಡಿತ್ತು 24 ಲಕ್ಷ !

ಮಂಗಳವಾರ, 23 ಸೆಪ್ಟಂಬರ್ 2014 (15:49 IST)
ಎಟಿಎಂನಿಂದ ಹಣವನ್ನು ಪಡೆಯಲು ಹೋದಾಗ, ಕ್ಯಾಷ್ ಬಾಕ್ಸ್ ತೆರೆದಿರುವದನ್ನು ನೋಡಿದ ಯುವಕನೊಬ್ಬ ತಕ್ಷಣ ಪೋಲಿಸರಿಗೆ ಮಾಹಿತಿ ನೀಡುವುದರ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾನೆ. 

ಶುಕ್ರವಾರ ರಾತ್ರಿ  ಈ ಘಟನೆ ನಡೆದಿದ್ದು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಎಟಿಎಂನಿಂದ ಹಣ ಪಡೆಯಲು ಹೋದ ಶೇಖ್ ಲತೀಫ್  ನಗದು ಬಾಕ್ಸ್ ತೆರೆದಿರುವುದನ್ನು ಗಮನಿಸಿದ ಮತ್ತು ಪೋಲಿಸರಿಗೆ ತಿಳಿಸಿದ್ದಾನೆ. ಮಾಹಿತಿ ಪಡೆದ ಪೋಲಿಸರು ಸ್ಥಳಕ್ಕೆ ಬಂದು ನೋಡಿದಾಗ ಆ ಬಾಕ್ಸ್‌ನಲ್ಲಿ 24 ಲಕ್ಷ ಇರುವುದು ಪತ್ತೆಯಾಗಿದೆ. ಇನ್ನೊಂದು ವಿಷಯವೇನೆಂದರೆ ಅಲ್ಲಿ ಸಿಸಿ ಕ್ಯಾಮರಾ ಕೂಡ ಇರಲಿಲ್ಲ. 
 
ಬಿ.ಟೆಕ್ ಓದುತ್ತಿರುವ ಶೇಖ್ ಲತೀಫ್ ಸಂಜೀವ್ ರೆಡ್ಡಿ ನಗರದ ಪುರುಷರ ವಸತಿ ನಿಲಯದಲ್ಲಿ ವಾಸಿಸುತ್ತಿದ್ದಾನೆ. 
 
"ಎಟಿಎಂ ಒಳಕ್ಕೆ ಹೋಗಿ 200 ರೂಪಾಯಿ ಪಡೆದ ನಂತರ ಯಂತ್ರದ ಒಂದು ಬದಿಯಲ್ಲಿ ಇದ್ದ ನಗದು ಡಬ್ಬ ಕೆಳಕ್ಕೆ ಬಿದ್ದಿತು ಮತ್ತು ನೋಟಿನ ಕಂತುಗಳು ಕೆಳಕ್ಕೆ ಚೆಲ್ಲಿದವು. ಅದನ್ನು ನೋಡಿ ದಂಗಾದ ನಾನು ಹೊರಗೆ ನನಗಾಗಿ ಕಾಯುತ್ತಿದ್ದ ಸ್ನೇಹಿತರಿಗೆ ಸೆಕ್ಯೂರಿಟಿ ಗಾರ್ಡ್‌ ಇದ್ದಾನೋ ಎಂದು ಪರಿಶೀಲಿಸಲು ಹೇಳಿದೆ. ಆದರೆ ಅಲ್ಲಿ ಯಾರೂ ಇರಲಿಲ್ಲ. ತಕ್ಷಣ ಪೋಲಿಸರಿಗೆ ಕರೆ ಮಾಡಿದೆ. 7 ನಿಮಿಷಗಳೊಳಗೆ ಅವರು ಸ್ಥಳಕ್ಕೆ ಆಗಮಿಸಿದರು ಎನ್ನುತ್ತಾನೆ ಅಲಿ.
 
ಯಂತ್ರವನ್ನು ಸರಿಯಾಗಿ ಲಾಕ್ ಮಾಡಲು ಮರೆತ ಬ್ಯಾಂಕ್ ಸಿಬ್ಬಂದಿಯ ಅಸಡ್ಡೆಯಿಂದ ನಗದು ಡಬ್ಬ ತೆರೆಯಲ್ಪಟ್ಟಿತು ಎನ್ನುತ್ತಾರೆ ಡಿಟೆಕ್ಟಿವ್ ಇನ್ಸ್‌ಪೆಕ್ಟರ್ ಎನ್ ಶಂಕರ್. 
 
"200 ರೂಪಾಯಿ ಪಡೆಯಲು ಬಂದ ಯುವಕರಿಗೆ ಭಾರೀ ಮೊತ್ತದ ಹಣ ಕಂಡಿತು. ಸ್ಥಳದಲ್ಲಿ ಸೆಕ್ಯೂರಿಟಿ ಗಾರ್ಡ್ ಕೂಡ ಇರಲಿಲ್ಲ ಮತ್ತು  ಎಟಿಎಂನಲ್ಲಿ ಸಿಸಿ ಕ್ಯಾಮರಾವನ್ನು ಕೂಡ ಅಳವಡಿಸಿರಲಿಲ್ಲ. ಆ ಹುಡುಗರು ತಮಗಿಷ್ಟ ಬಂದ ಹಾಗೆ ಮಾಡಬಹುದಿತ್ತು. ಆದರೆ  ಅವರು ಪ್ರಾಮಾಣಿಕತೆಯನ್ನು ಮೆರೆದು ನಮಗೆ ಮಾಹಿತಿ ನೀಡಿದರು" ಎನ್ನುತ್ತಾರೆ ಶಂಕರ್.
 
ವಿದ್ಯಾರ್ಥಿಗಳ ಪ್ರಾಮಾಣಿಕತೆಯನ್ನು ಮೆಚ್ಚಿದ  ಸ್ಥಳೀಯ ಪೊಲೀಸ್ ಆಯುಕ್ತ ಎಂ ಮಹೇಂದರ್ ರೆಡ್ಡಿ ಮೂವರಿಗೂ ನಗದು ಬಹುಮಾನ ಮತ್ತು ಪ್ರಮಾಣಪತ್ರ ನೀಡಿ ಸನ್ಮಾನಿಸಿದರು. 

ವೆಬ್ದುನಿಯಾವನ್ನು ಓದಿ