ನಸೀಮಾಳ ಪ್ರೇಮಪಾಶದ ಸುತ್ತ

ಶನಿವಾರ, 22 ನವೆಂಬರ್ 2014 (15:56 IST)
ಸತತವಾಗಿ ನಾಲ್ಕು ದಿನಗಳವರೆಗೆ ಕಾಡಿಹೋಗುತ್ತಿರುವ ಬಿಳಿ ಹುಡುಗಿಯರ ನೆನಪಿಗೆ ಈ ಕಥೆಯನ್ನು ಅರ್ಪಿಸಿರುವೆ. ನನ್ನ ಪಿಯೂಸಿ ಫಲಿತಾಂಶ ಬಂದು ಇಂದಿಗೆ ಒಂದು ತಿಂಗಳು ಸಂದಿವೆ. ಕಿತ್ತು ತಿನ್ನುವ ಬಡತನವು ನಮ್ಮ ಕುಟುಂಬವನ್ನು ಆವರಿಸಿದ್ದರಿಂದ, ನನಗೆ ಪದವಿ ತರಗತಿಗೆ ಹೋಗಲು ಅಸಾಧ್ಯ ಎಂಬಂತಹ ಪರಿಸ್ಥಿತಿ ಕಂಡುಬಂದಿತ್ತು. ಈ ಮಧ್ಯ ನಾನು ತಂದೆಯೊಡನೆ "ಹೆಚ್ಚು ಕಲಿಯಬೇಕೆಂಬ ಆಸೆ...ಬಾಪಾ..." ಎಂದು ನುಡಿದಿದ್ದೆ. ತಂದೆಯೂ ಅಷ್ಟೆ .ನಾನು ಕಲಿತು ಏನಾದರೊಂದು ಸಾಧಿಸಬೇಕೆಂಬ ಕನಸು ಕಂಡವರು. ಆದರೆ ನನ್ನ ತಾಯಿ ಅವನು ಆ ಹಾಳಾದ ಶಾಲೆ ವಿದ್ಯೆ ಕಲಿತು ಏನಾಗಲಿದೆ? ಅದನ್ನೆಲ್ಲಾ ಅವನ ಮಂಡೆಗೆ ತುರುಕಿಸಲು ಅಷ್ಟೊಂದು ಆದಾಯವಾದರೂ ಇದೆಯಾ? ಎಲ್ಲೊ ಹೋಟೆಲಲ್ಲೋ, ಕಾರ್ಖಾನೆಯಲ್ಲೋ ಮೈ ಮುರಿದು ದುಡಿದರೆ ಈ ಬಡತನವಾದರೂ ಕರಿದು ಹೋದೀತು ಎಂಬ ಭಾವನೆಯನ್ನು ಹೊಂದಿದವರು. ಇದೇ ಸಮಯದಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ನನ್ನ ತಂದೆ, ತಾಯಿಯ ಚುಚ್ಚು ಮಾತಿನಿಂದ ಮೂಕರಾಗಿದ್ದರು. ದಿನಾ ನಡೆಯುತ್ತಿದ್ದ ಈ ಕೌಟುಂಬಿಕ ಕಲಹದಿಂದಾಗಿ ನಾನು ರೋಸಿ ಹೋಗಿದ್ದೆ.ಮನೆ ಹಿತ್ತಲಿನ ಕಲ್ಲು ಬೆಂಚಿನಲ್ಲಿ ಕುಳಿತು ಯೋಚಿಸಿದರೆ ದುರಾಲೋಚನೆಯನ್ನು ಕೈಗೆತ್ತಿಕೊಳ್ಳುವಂತೆ ನನ್ನ ಮನ ನನ್ನನ್ನೇ ಹುರಿದುಂಬಿಸುತ್ತಿತ್ತು.
 
"ಬಾಪಾ...ನನ್ನನ್ನು ಕಾಲೇಜಿಗೆ ಸೇರಿಸಿ....ಇಲ್ಲಾ ನನ್ನ ದಾರಿ ನಾನು ಹಿಡಿಯುವೆ..." ಎಂದು ನಾನು ತಂದೆಯಲ್ಲಿ ಯಾಚಿಸಿದರೆ, ತಾಯಿಯು ಮಾತಿಗೆ ಅಡ್ಡ ಬಂದು "ಮೋನೇ...ನೀನು ಇಷ್ಟು ಕಲಿತಿರುವೆಯಲ್ಲಾ...ನಮ್ಮ ಕಷ್ಟ ನಿನಗೆ ಅರ್ಥವಾಗ್ತದಾ...?ಏನು..ನಿನ್ನ ಬಾಪಾ ಎದ್ದು ಹೋಗುವಾಗ ಸಂಪತ್ತು ಕೂಡಿಟ್ಟು ಹೋಗಿದ್ದಾರಾ?ಎಂದು ನುಡಿಯುತ್ತಾರೆ. ಅವರ ಕೊಂಕು ನುಡಿಗೆ ಬೇಸತ್ತ ನಾನು ಮತ್ತೆ... ದು ಯಾರು?ನನ್ನ ಬಾಪಾ ಅಲ್ವಾ?"  ಎಂದು ದುರುಗುಟ್ಟಿ ಪ್ರಶ್ನಿಸಿದಾಗ ತಾಯಿ ತತ್ತರಿಸಿ ಹೋಗಿದ್ದರು. ಹೀಗೆ ಒಂದು ಸೋಮವಾರ ನನ್ನ ತಂದೆ ನನ್ನ ಬಳಿ ಬಂದು "ಮೋನೇ ... ನಾ ನಿನ್ನ ಕಾಲೇಜಿಗೆ ಸೇರಿಸ್ತೇನೆ ಬಾ..."ಎನ್ನುತ್ತಾ ಮುಗುಳ್ನಕ್ಕಾಗ ನಾನು ಮೆತ್ತಗೆ ಅವರ ಹೆಜ್ಜೆಯ ಮೇಲೆ ನನ್ನ ಹೆಜ್ಜೆಯನ್ನು ಇಟ್ಟೆ.                              
                                                       *******
ಇದೀಗ ನಾನು ದಿನಾ ಕಾಲೇಜಿಗೆ ಹೋಗುವುದು ಸಂಪ್ರದಾಯಕ್ಕೆ ಶರಣು ಹೋಗಿರುವ ನನ್ನ ಊರವರಿಗೆ ನುಂಗಲಾರದ ತುತ್ತಾಗಿತ್ತು. ವಾಸ್ತವ ಪ್ರಪಂಚದಲ್ಲಿ ನಾಲ್ಕು ಜನರ ಮಧ್ಯೆ ಮುಕ್ತ ಮನಸ್ಸಿನಿಂದ ಬೆರೆತು ಯಾರ ಹಂಗೂ ಇಲ್ಲದೆ ಜೀವಿಸಬೇಕಾದರೆ ಶಿಕ್ಷಣ ಅತ್ಯಗತ್ಯ ಎಂದು ಮನಗಂಡಿದ್ದ ನಾನು ಹಂತಹಂತವಾಗಿ ಕಾಲೇಜು ಮೆಟ್ಟಿಲು ತುಳಿದು ಜೀವನದಲ್ಲಿ ಏನಾದರೊಂದು ಸಾಧಿಸಿ ಹತ್ತು ಜನರಿಂದ ಪ್ರಶಂಸೆಗೆ ಒಳಗಾಗಬೇಕೆಂಬ ನನ್ನ ಬಯಕೆಯನ್ನಿಟ್ಟೆ. ಅಂದು ಶುಕ್ರವಾರ. ಜುಮ್ಮಮಸ್ಜಿದ್‌ನ ಮೂಲೆಯೊಂದರಲ್ಲಿ ಕೂತು ಜಪ ಕೂತು ಜಪ ಹೇಳುತ್ತಿದ್ದ 'ಮಸೀದಿ ಅಧ್ಯಕ್ಷರು' ನನ್ನನ್ನು ಕಂಡು ಕೈಸನ್ನೆಯಿಂದ ಠೀವಿಯ ನೋಟ ಬೀರಿ ತನ್ನ ಬಳಿ ಕರೆದರು. ನಾನು ಒಂದೆರಡು ಬಾರಿ ಕ್ರಾಪು ತೀಡುತ್ತಾ...ಮೇಕಪ್ ಮಾಡುತ್ತಾ... ಧೈರ್ಯ ತಂದು ಅವರ ಬಳಿ ಕಾಲೆಳೆದೆ." ಬಿಳಿ ಹುಡುಗಾ...ಆ ಹಾಳು ಶಾಲೆ ವಿದ್ಯೆ ಕಲಿಯುತ್ತಿಯಲ್ಲಾ...ಅದರಿಂದ ಪ್ರಯೋಜನವಾದರೂ ಏನು?ನಿನ್ನ ಉಮ್ಮ ಕೆಮ್ಮಿ ಹಾಸಿಗೆ ಹಿಡಿದಿರುವಳಲ್ಲಾ...?ಸ್ವಲ್ಪ ಮೈಮುರಿದು ದುಡಿದರೆ ನಿಮ್ಮ ಸಂಸಾರ ಹಾಯಾಗಿ ನಡೆಯುತ್ತಿತ್ತಲ್ಲಾ..?"ಎಂದು ಮೆತ್ತಗೆ ಪ್ರಶ್ನಿಸಿದರು. 
 
ನಾನು ಅವರ ಪ್ರಶ್ನೆಗೆ ಉತ್ತರ ಕಂಡು ಹುಡುಕುವ ಗೋಜಿಗೆ ಹೋಗದೆ ಇದ್ದುದನ್ನು ಅರಿತ ಅವರು "ನಾಳೆಯಿಂದ ಕಾಲೇಜು ಕೈದು ಮಾಡಬೇಕೆಂಬ ಬಾಸೆ ಕೊಡು"ಎನ್ನುತ್ತಾ ತನ್ನ ಕೈಯನ್ನು ನನ್ನ ಬಳಿ ಚಾಚಿದರು."ಸಾಬ್..ನನ್ನನ್ನು ಅರ್ಥೈಸಿಕೊಳ್ಳಿ. ಈ ಲೋಕದಲ್ಲಿ ಮಾನವನಂತೆ ಜೀವಿಸಬೇಕಾದರೆ ಶಿಕ್ಷಣ ಅತ್ಯಗತ್ಯ...ಅದು ಇಲ್ಲದಿದ್ದಲ್ಲಿ ನಾಳೆ ಮನುಷ್ಯ ಮೃಗವಾಗಿ ವರ್ತಿಸಿಯಾನು... "ಎಂದು ಹೇಳಿದೆ."ನಿನ್ನ ವಕಾಲತ್ತು ಬೇಡ... ಕಾಲೇಜಿಗೆ ಗುಡ್ ಬೈ ಹೇಳಿದರೆ ನಾಳೆಯಿಂದ ನನ್ನ ಟೈಲ್ಸ್ ಫಾಕ್ಟರಿಯಲ್ಲಿ ಕೆಲಸ ಕೊಡುವೆ..." ಮತ್ತೊಮ್ಮೆ ಅಧ್ಯಕ್ಷರು ನನ್ನ ಮೇಲೆ ಬಲೆ ಬೀಸತೊಡಗಿದರು."ಇಲ್ಲ... ನಾನು ಕಾಲೇಜಿಗೆ ಹೋಗಿಯೇ ತೀರುವೆನು"ನಾನು ಮೊಂಡು ಧೈರ್ಯ ತಂದು ನುಡಿದೆ."ಕೆಟ್ಟ ಹುಡುಗಾ.. ಯಾಕೆ ನೀ ಶಾಲೆಗೆ ಹೋಗುವುದು?ಹೆತ್ತು, ಹೊತ್ತು, ಸಾಕಿ ಸಲಹಿದ ತಂದೆ-ತಾಯಿ ಮತ್ತು ಹುಟ್ಟಿನಿಂದಲೇ ಅರಗಿಸಿಕೊಂಡು ಬಂದಿರುವ ಧರ್ಮವನ್ನು ಬಿಟ್ಟು ಹೋಗಲಾ...?" ಅಧ್ಯಕ್ಷರ ಸ್ವರದಲ್ಲಿ ಗಡುಸಿತ್ತು."ಇಲ್ಲಾ..ಸಾಬ್ ನಾನು ಎಂದೂ ಧರ್ಮ ದ್ರೋಹಿಯಾಗಲಾರೆ..ತಂದೆ-ತಾಯಿಯನ್ನ..""ನಮ್ಮ ಹುಡುಗರು ಮೊದಲು ಹೀಗೇ ಹೇಳುವುದು..ನಾಳೆ ಎಲ್ಲಾ ಕಲ್ತು ಆದ ಮೇಲೆ ರಾತ್ರಿ-ಹಗಲಾಗುವುದರೊಳಗೆ ಎಲ್ಲಾ ಕಾರ್ಯ ಮುಗಿಸಿ ಕೈ ತೊಳೆಯುವುದು ಕಲ್ತ ನಮ್ಮ ಹುಡುಗರ ಹಣೆಬರಹ...!ನೋಡು...ಆ ರಶ್ದಿ..ತಸ್ಲಿಮಾಳನ್ನು ಅವರಿಗೆಲ್ಲಾ ಕುರಾನಿನ ವಿರುದ್ಧ ಬರೆಯುವ ಸ್ಫೂರ್ತಿ ಎಲ್ಲಿಂದ ಬಂತು?ಈ ಹಾಳು ವಿದ್ಯೆಯಿಂದ ಅಲ್ವಾ? ಇಂತಹ ಕೆಟ್ಟ ಶಿಕ್ಷಣ ನಮ್ಮ ಹುಡುಗರಿಗೆ ಕೊಡಿಸಿದ್ದರಿಂದಲೇ ಈ ರೀತಿ ಆಯಿತು..." ಅಧ್ಯಕ್ಷರು ನುಡಿಯುತ್ತಾ ತನ್ನ ಭೀಮ ಬಲದ ಕೈಯನ್ನು ನನ್ನ ಬುಜಕ್ಕೆ ಊರಿದಾಗ ನಾನು ಭೂಮಿಗಿಳಿದಿದ್ದೆ. 
 
ನಾನು ಕಾಲೇಜು ಸೇರಿ ನಾಲ್ಕು ತಿಂಗಳು ಉರುಳಿದೆ. ಸಿಕ್ಕ ಸಮಯದಲ್ಲೆಲ್ಲಾ ದೋಸ್ತಿಗಳೊಡನೆ ಕೂಡಿ ಕಾಲೇಜ್ ಕ್ಯಾಂಪಸ್, ಲೈಬ್ರೆರಿ, ನನ್ನ ಜೂನಿಯರ್ ಕ್ಲಾಸ್‌ಗಳಿಗೆ ಹೋಗಿ ಬರುತ್ತಿದ್ದೆ. ಮನೆಯಲ್ಲಿನ ಬಡತನ, ಊರವರ ವಿರೋಧಗಳಿಂದ ನಾನು ಮುಕ್ತನಾಗುವುದು ಕಾಲೇಜಿಗೆ ಬಂದಾಗ ಮಾತ್ರ. ದಿನಾ ಕಾಲೇಜು ವರಾಂಡದಲ್ಲಿ ಕೂತು ದೋಸ್ತಿಗಳೊಡನೆ ಹರಟೆ ಹೊಡೆಯುವಾಗ ನನ್ನ ಕ್ಲಾಸ್ ಹುಡುಗಿಯರು ಕೂಡಾ ಅಲ್ಲಿಗೆ ಬಂದು ಏನಾದರೊಂದು ವಿಷಯದ ಬಗ್ಗೆ ಪ್ರಸ್ಥಾಪವೆತ್ತಲು ತುದಿಗಾಲಲ್ಲಿ ನಿಲ್ಲುವರು. ಗೆಳೆಯರನ್ನು ಆಕರ್ಷಣೆಗೆ ಒಳಪಡಿಸುವ 'ಭಂಗಿ'ಗಳಲ್ಲಿ ಮೆರೆಯುವರು. ಈ ಮೂಕ ಪ್ರಾಣಿಗಳ ನೋಟದಿಂದ ನಾನು ತತ್ತರಿಸಿದ್ದೆ. ರೋಸಿ ಹೋಗಿದ್ದೆ. ಯಾಕೆಂದರೆ ಅವರ ಆ  ನೋಟದಲ್ಲಿ ಭಾತೃತ್ವವಿರಲಿಲ್ಲ. ಬದಲಾಗಿ ಕಾಮ ತುಂಬಿಹೋಗಿತ್ತು. ನನಗೆ ಬಿಳಿ ಹುಡುಗಿಯರನ್ನು ಕಂಡರೆ ತುಂಬಾ ಇಷ್ಟ. ಅವಳೊಡನೆ ಮಾತಾಡಬೇಕೆನಿಸುತ್ತೆ. ಸರಸ-ಸಲ್ಲಾಪ  ಅಥವಾ ಮದ್ವೆಯಾಗಬೇಕೆನಿಸುತ್ತೆ. ಆದರೆ ದಿನಾ ಹತ್ತಾರು ಬಿಳಿ ಹುಡುಗಿಯರನ್ನು ಕಂಡರೆ ಯಾರನ್ನು ಆರಿಸಲಿ? ಅದಲ್ಲದೆ ನನ್ನಲ್ಲಿ ಮತ್ತೊಂದು ಮನೋದೌರ್ಬಲ್ಯ ಕೂಡಾ ಇತ್ತು. ಚೆಂದದ ಬಿಳಿ ಹುಡುಗಿಯರನ್ನು ಕಂಡಾಗ ಮಾತಾಡುವ ತವಕ.ಅವಲ ಬಿಳಿ ಕಾಲಿನ ಬಳಿ ನನ್ನ ಕಾಲುಎಳೆಯಬೇಕೆನಿಸುತ್ತದೆ. ಹಾಯ್...ಎನ್ನುತ್ತಾ ಮಾತಿಗೆ ನಾಂದಿ ಹಾಕಬೇಕೆನಿಸುತ್ತದೆ. ಆದರೆ ಅವಳು ಕಣ್ಮುಂದೆ ಇಂಚು ಅಂತರದಲ್ಲಿ ನಿಂತರೂ ಕೂಡಾ ನನ್ನ ನಾಲಿಗೆ ಮಾತಿಗಾಗಿ ತಡಕಾಡುತ್ತದೆ. ಕಂಪಿಸಿದಂತೆ ತಲೆ ತಿರುಗಿ ಬಿದ್ದಂತೆ ಆಗುತ್ತದೆ. ರಾತ್ರಿ ಹಾಸ್ಟೆಲ್‌ನಲ್ಲಿ ಗೆಳೆಯರಲ್ಲಿ ನನ್ನ ಅಧೈರ್ಯದ ಬಗ್ಗೆ ಪ್ರಸ್ತಾಪ ಎತ್ತುತ್ತೇನೆ. ಸೂಕ್ತ ಪರಿಹಾರಕ್ಕಾಗಿ ಯಾಚಿಸುತ್ತೇನೆ.
 
"ಗೆಳೆಯಾ..ನಿನಗೆ ಇಷ್ಟವಾದ ಹುಡುಗಿಯರನ್ನು ಕಂಡಾಗ ಮೊದಲು ಧೈರ್ಯ ತಂದುಕೋ...ಮುಗುಳ್ನಗು...ಅವಳೂ ನಗುತ್ತಾ ಕೆನ್ನೆ ರಂಗೇರಿಸುತ್ತಾಳೆ. 'your name please' ಎಂದು ಕೇಳು.. ಅವಳು ತನ್ನ ಹೆಸರು ನುಡಿಯುತ್ತಾಳೆ. ನಿನ್ನಲ್ಲಿ ಮಾತನಾಡಬೇಕಿತ್ತು...ಎನ್ನು. ಅವಳಿಗೆ ನಿನ್ನ ಮೇಲೆ ಇಷ್ಟವಾದರೆ ನಿನ್ನ ಹಿಂದೆಯೇ ಅವಳೂ ಬರುತ್ತಾಳೆ. ಮಂದಹಾಸದಿಂದ ಮಾತನಾಡಲು ಪ್ರಾರಂಭಿಸು. ಆಸೆಗಣ್ಣಿಂದ ನೋಡು. ಐ ಲವ್ ಯೂ... ಎನ್ನು... ಅಥವಾ ಪ್ರೇಮ ಪತ್ರ ಕೊಡು...ಪ್ರತಿಕ್ರಿಯೆ ವ್ಯಕ್ತಪಡಿಸಲು ಅವಳಲ್ಲಿ ತಿಳಿಸು..ಅಲ್ಲಿ ಜಯಭೇರಿ ಪಡೆಯುವಿ...ಖಂಡಿತ' ಎನ್ನುತ್ತಾ ಗೆಳೆಯರು ನನಗೆ ಸಲಹೆ ಕೊಟ್ಟು ಸಹಕರಿಸುತ್ತಾರೆ. ಅಂದು ಶನಿವಾರ. ಗೆಳೆಯರೊಡನೆ ಕೂಡಿ ಫಸ್ಟ್ ಇಯರ್ ಕ್ಲಾಸ್‌ಗೆ ಹೋಗಿದ್ದೆ. ಆ ಕ್ಲಾಸಿನ ದೋಸ್ತಿಗಳೊಡನೆ ಮಾತಾಡುತ್ತಿದ್ದಂತೆಯೇ ಚಂದದ 'ಹಕ್ಕಿ'ಯೊಂದು  ನನ್ನ ಕಣ್ಣಿಗೆ ಕಾಣಸಿಕ್ಕಿತು. ಮೊದಲ ನೋಟ...ಕದ್ದು ನೋಡದೆ ಉಪಾಯವಿರಲಿಲ್ಲ. ಅವಳ ಆ ಮಾತು...ಸುರಸ್ವಪ್ನಸುಂದರಿಯನ್ನು ಹೋಲುವ ಅವಳ ಆ ದೇಹ... ಎಲ್ಲವೂ ನನ್ನ ಎದೆಯಾಳವನ್ನು ಒಮ್ಮೆ ಮೀಟಿಸಿತು. ಆ ಕ್ಷಣ ನಾವಿಬ್ಬರೂ ಹತ್ತಿರದ ಅರಬ್ಬೀ ಕಡಲಲ್ಲಿ ಮಿಂದು ಬಂದಂತಹ ಅನುಭವ... ಅವಳು ತಲೆ ತುಂಬಾಮುಸುಕು ಹಾಕಿದ್ದಳು. ಅವಳ ಆ ಲೇಸ್(ಶಿರವಸ್ತ್ರ)ಗೆ ಸೂರ್ಯಕಿರಣ ಅಪ್ಪಳಿಸಿದಾಗ ಫಳಫಳನೆ ಹೊಳೆಯುತ್ತಿರುವುದನ್ನು ಕಂಡುಕೊಂಡೆ. ಬೆಕ್ಕಿನ ಕಣ್ಣಿನ ಹುಡುಗನೊಬ್ಬನಲ್ಲಿ ಅವಳ ಹೆಸರನ್ನು ಕೇಳಿ ತಿಳಿದುಕೊಂಡೆ.ಅಂದಿನಿಂದ ನಾನು ಅವಳ ನೆನೆದು ಮೈ ಬಣ್ಣ ರಂಗೇರಿದೆ. ಅವಳ ಹೆಸರನ್ನು ಹೇಳಿ ಜಪ ಮಾಡತೊಡಗಿದೆ. ಅವಳನ್ನು ಕ್ಷಣಕ್ಷಕ್ಕೂ ನೆನೆಯತೊಡಗಿದೆ. 
ಅನಿರೀಕ್ಷಿತ ನೋವು ಬಂದಾಗ ಅವಳನ್ನು ನೆನೆದರೆ ಸಾಕು. ಆಗಲೇ ಎಲ್ಲವೂ 'ಶಿಫಾ...' ಆಗುತ್ತಿತ್ತು. ಅವಳು ನನ್ನ ಬಳಿ ಕನಸುಗಳನ್ನು ಹೊತ್ತು  ತಂದದ್ದರಿಂದ ಎಲ್ಲರೊಡನೆ ನಾನು ಸ್ನೇಹ ಮತ್ತು ತಾಳ್ಮೆಯಿಂದ ವರ್ತಿಸತೊಡಗಿದುದು ನನಗೆ ಆಶ್ಚರ್ಯ ಕಾದಿತ್ತು. ನಾನು ನಸೀಮಾಳನ್ನು ಮನಸಾರೆ ಪ್ರೀತಿಸಿದೆ.ನನ್ನ ಆಸೆ ಆಕಾಂಕ್ಷೆಗಳನ್ನು ಅವಳಲ್ಲಿ ವ್ಯಕ್ತಪಡಿಸಲು ಸೂಕ್ತಸಮಯಕ್ಕಾಗಿ ಕಾದುಕೂತೆ. ಕಾಲವನ್ನು ತಡೆಹಿಡಿಯುವುದು ಯಾರಿಂದ ಸಾಧ್ಯವಿದೆ? ಅವಳನ್ನು ಕಂಡಾಗ ನಾನು ಯಾವ ಭಂಗಿಯಲ್ಲಿ ನಿಲ್ಲಬೇಕು?ಹೇಗೆ ಮಾತನಾಡಬೇಕು? ನಾಳೆಯೇ ಮಾತನಾಡಲೇ..? ಹಾಗಾದರೆ ನಾನು ನಾಳೆ ಯಾವ ಬಣ್ಣದ ಶರ್ಟು ತೊಡಬೇಕು...ಹ್ಞಾಂ...ಹಳದಿ ಬಣ್ಣದ ಶರ್ಟ್.. ಅದರಲ್ಲಿ ನಾ ಚಂದ ಕಾಣುತ್ತೇನೆಯೇ...? ಪೋರ್ಟಿಕೋದಲ್ಲಿ ಕೂತು ಯೋಚಿಸತೊಡಗಿದೆ. ನಾಳೆ ನಾನು ಧೈರ್ಯ ತಂದು ಧೃಢ ಮನಸ್ಸಿನಿಂದ 'ಐ..ಲವ್..ಯೂ..' ಅನ್ನಬೇಕು. ಎಡಕೈಯಲ್ಲಿ ಹಳದಿ ಹಾಳೆಯ ರಟ್ಟು ಬುಕ್ಕನ್ನು ಇಟ್ಟು ಎದೆಗವಚಿಕೊಂಡರೆ, ಬಲ ಕೈಯಲ್ಲಿ ಒಂದು ರೆಡ್ ರೋಸ್ ಹಿಡಿದು ಮನಪೂರ್ವಕವಾಗಿ ಅವಳತ್ತಚಾಚಿ ಪ್ರತಿಕ್ರಿಯೆಗಾಗಿ ಕಾದು ಕೂರಬೇಕು ಎಂದು ತೀರ್ಮಾನಿಸಿ ಸಾಧ್ಯವಾದಷ್ಟು'ಮೇಕಪ್' ಮಾಡಿ ಹೊರಟು ಹೋದ ದಿನಗಳು ಅದೆಷ್ಟೋ...? ಆದರೆ ಅವಳನ್ನು ಕಂಡಾಗ ನನ್ನ ಧೈರ್ಯ, ದೃಢ ಮನಸ್ಸು ಎಲ್ಲವೂ ನೀರು ಪಾಲಾಗುತ್ತಿತ್ತು. ಛೇ..ನಾನೆಂತಹ ಮನುಷ್ಯ. ಒಂದು ಹೆಣ್ಣಿನ ಎದುರು ನಿಂತು ಮಾತನಾಡುವ ಧೈರ್ಯ ನನಗೆ  ಇಲ್ಲವೇ...?    
                                                  ******                            
ದಸರಾ ರಜೆ ಕಳೆದು ಮತ್ತೊಮ್ಮೆ ಕ್ಲಾಸು ಪ್ರಾರಂಭವಾಗಿದೆ. ನನ್ನ ಹೆದರಿಕೆ ಮತ್ತು ನಾಚಿಕೆಯನ್ನು ಹೂತ್ತು ಬಂದಿರುವೆ. ನನಗೆ ಈಗ ಅವಳಲ್ಲಿ ಮತನಾಡುವ ಧೈರ್ಯ ಬಂದಿದೆ. ಅಂದು ಗುರುವಾರ. ಕಾಲೇಜು ಕ್ಯಾಂಪಸ್‌ನ ಮುಂದಿರುವ ಗೋಳಿ ಮರದ ಅಡಿಯಲ್ಲಿ ಹತ್ತಾರು ಕಾಲೇಜ್ ಚೆಲುವೆಯರು ಕುಳಿತು ಲೋಕಾಭಿರಾಮ ಮಾತನಾಡುತ್ತಿದ್ದರು. ಆ ಗುಂಪಲ್ಲಿ ನಾಲ್ಕೈದು ಮುಸುಕು ಹುಡುಗಿಯರಿದ್ದು ಅದರಲ್ಲಿ 'ನಸೀಮಾ' ಕೂಡಾ ಇದ್ದುದನ್ನು ದೂರದಿಂದಲೇ ಗುರುತಿಸಿಕೊಂಡನಾನು ಅವಳಲ್ಲಿ ಸವಿಮಾತನ್ನು ಆಡುವುದಕ್ಕೋಸ್ಕರ ಅತ್ತ ಕಾಲೆಳೆದೆ. ನಸೀಮಾಳತ್ತ ಸುಂದರ ನೋಟ ಬೀರಿದೆ. ಅವಳ ದುಂಡು ಮುಖದಲ್ಲಿ ನಗೆ ಚೆಲ್ಲಿದ್ದನ್ನು ಗುರುತಿಸಿಕೊಂಡೆ. 'ಅಸ್ಸಲಾಂ...ಅಲೈಕುಂ...' ಎನ್ನುತ್ತಾ ಮುಗುಳ್ನಗು ಬೀರಿದೆ. 'your name please' ನಸೀಮಾ ನನ್ನಲ್ಲಿ ಕೇಳಿದಳು. 'ಸಫರುಲ್ಲಾ..'' ಬನ್ನಿ... ಕೂತ್ಕೊಳ್ಳಿ... ನಿಂತೇ ಇದ್ದೀರಲ್ಲಾ...' ಎನ್ನುತ್ತಾ ಅವಳು ತನ್ನ ಕರ್ಚೀಫ್ ಬಿಡಿಸಿ ನನ್ನನ್ನು ಸ್ವಾಗತಿಸಿದಾಗ, ಉಳಿದವರೆಲ್ಲಾ ಪಿಳಿಪಿಳಿ ಕಣ್ಣು ಬಿಟ್ಟು ಪೆಚ್ಚಗಿದ್ದುದನ್ನು ನಾನು ಗುರುತಿಸಿದೆ.' ನಸೀಮಾ...ನಿನ್ನಲ್ಲಿ ಸ್ವಲ್ಪ ಮಾತನಾಡಬೇಕಿತ್ತು...' ನಾನು ಧೈರ್ಯ ತಂದು ಕೊಂಡೆ. 'ನನ್ನಲ್ಲಾ...ಅಂತಹ ಪರ್ಸನಲ್ ವಿಷಯ ಏನಿದೆ?'' ಮೊದಲು ನನ್ನನ್ನು ನಂಬಿಕೆಗೆ ತೆಗೆದುಕೋ.. ಆದೀತಾ...?''o.......k......'ನಾವು ಇಬ್ಬರೂ ಆಮೆ ನಡಿಗೆಯಲ್ಲಿ ಕಾಲೇಜ್ ಲೈಬ್ರರಿ ಹಾಲ್ ಸೇರಿದೆವು. ಲೈಬ್ರರಿ ತುಂಬಾ ಓದುಗರು ತುಂಬಿದ್ದರಿಂದ  ಉಪಾಯವಿಲ್ಲದೇ ಇಂಚು ಅಂತರದಲ್ಲಿ ಕೂತೆವು...ಅವಳ ಬಳಿ ಕೂತಾಗ ನನ್ನ ಮನಕ್ಕೆ ಹಾಯ್ ಎನಿಸಿತು. ಆದರೆ ಆ ಕ್ಷಣ ಅವಳು ನಾಚಿ ನೀರಾದುದನ್ನು ನಾನು ಗುರುತಿಸಿಕೊಂಡೆ. 'ಹ್ಞೂಂ...ಮಾತಾಡಲಿಕ್ಕೆ ಉಂಟು ಅಂದಿರಲ್ಲ... ಏನು ವಿಷಯ ಬೇಗ ಮಾತನಾಡಿ...'ಅ...ದೂ...ಅ...ದೂ...ನ...ಸೀ...ಮಾ..ಹೇಗೆ ಪ್ರಾರಂಭಿಸಬೇಕೆಂದು ತೋಚುವುದಿಲ್ಲ....ಆದರೆ...ಒಂದು..ಮಾತು.. ನಿನ್ನನ್ನು ಕಂಡರೆ ನನಗೆ ತುಂಬಾ ಇಷ್ಟ?- ನಾನು ನನ್ನಾಸೆಯನ್ನು ವ್ಯಕ್ತಪಡಿಸಲು ಮುಂದಾದೆ.' ನಿಜವಾಗಿಯೂ...!' ಅವಳು ಉದ್ಘರಿಸುತ್ತಾ ನನ್ನ ಕೈ ತೀಡಿದಳು. ನಾನು ಅವಳ ಆ ಉದ್ಘಾರಕ್ಕೆ ಮರುಳಾಗಿ ಕಣ್ಣಲ್ಲಿ ಕಣ್ಣಿಟ್ಟು ನುಂಗುವಂತೆ ನೋಡಿದೆ....ನಸೀಮಾ...ನಾನು ನಿನ್ನ  ಪ್ರೀತಿಸುವೆ...ನಿನ್ನನ್ನೇ ಮದುವೆಯಾಗುವೆ..... ನನ್ನನ್ನು ನಂಬಿಕೆಗೆ ತೆಗೆದುಕೋ... o....k...ಎಂದು ಒಪ್ಪಿಗೆಯನ್ನು ಕೊಟ್ಟುಬಿಡು ನಾನು ಮೆಲ್ಲನೆ ಯಾಚಿಸಿದೆ. ಅವಳು ಕಣ್ಣನ್ನು ನಾಲ್ಕೂ ಕಡೆಗೂ ತಿರುಗಿಸುತ್ತಾ ತುಸು ಧೈರ್ಯ ತಂದು, ಸಫರ್. ಐ..ಲವ್..ಯೂ.. ಎನ್ನುತ್ತಾ ನನ್ನ ಎದೆಯ ಗುಂಗುರು ಕೂದಲಿಗೆ ಕೈಓಡಿಸಿದಳು. ಅಂದು ರಾತ್ರಿಯಿಡೀ ನಸೀಮಾ ನನ್ನಲ್ಲಿ ಬಲವಾಗಿ ಕಾಡಿ ಹೋದಳು. ಅವಳು ಐ ಲವ್ ಯೂ... ಅಂದಾಗ ತುಟಿಗಳ ನರ್ತನ, ಕಾಂತಿ ಬೀರಿದ ಕಣ್ಣುಗಳು, ರಂಗೇರಿದ ಕೆನ್ನೆ.... ಎಲ್ಲವೂ ನನ್ನ ಕಣ್ಣಾಲಿಯ ಮುಂದೆ ತೇಲಿ ಬಂದವು.                                           
 
                                                     *******
ಒಂದು ಸಂಜೆ ನಾವಿಬ್ಬರು ಕಬ್ಬನ್ ಪಾರ್ಕ್‌ನಲ್ಲಿ ಕೂತು ಸರಸ ಸಲ್ಲಾಪವಾಡುತ್ತಿದ್ದೆವು.'ಸಫರ್...ನಾಳೆ..ಶನಿವಾರ. ನೀನು ಖಂಡಿತಾ ನಮ್ಮ ಮನೆಗೆ ಬರಲೇಬೇಕು. ಕಾಲೇಜೆ‌ಗೆ ನೇರವಾಗಿ ನಮ್ಮ ಮನೆಯಿಂದಲೇ ಬಂದರಾಯಿತು....'  ಎನ್ನುತ್ತಾ ನಸೀಮಾ ಕಣ್ಣು ಮಿಟುಕಿಸಿದಳು. ನಾನು ಉಪಾಯವಿಲ್ಲದೆ ಒಪ್ಪಿಕೊಳ್ಳಬೇಕಾಯಿತು. ನಾವು ಹತ್ತಾರು ಸಾಲಿನ ಕಲ್ಲು ಚಪ್ಪಡಿ ಹತ್ತಿ 'ನಸೀಮಾ ಮಂಜಿಲ್' ಎಂದು ಬರೆದಿದ್ದ ಗೇಟನ್ನು ದಾಟಿ ಎರಡು ಎಂತಸ್ತಿನ ಭವ್ಯಬಂಗಲೆಯ ಒಳ ಹೊಕ್ಕೆವು. ನನ್ನವಳ ಹೆತ್ತವರು ಆದರದಿಂದ ನನ್ನನ್ನು ಸ್ವಾಗತಿದರು.ಹಾಗೇ ಡೈನಿಂಗ್ ಟೇಬಲಿನ ಮುಂದೆ ಜತೆಯಾಗಿ ಕೂತು ಹಬೆಯಾಡುತ್ತಿರುವ ಬಿರಿಯಾನಿ ರುಚಿ ಸವಿಯುತ್ತಾ ವಾಸ್ತವ ಪ್ರಪಂಚದ ಸ್ಥಿತಿಗಳ ಕುರಿತು ಚರ್ಚಿಸತೊಡಗಿದೆವು. ಮುಂದೆ ನಸೀಮಾ ನನ್ನನ್ನು ಕಣ್ಸನ್ನೆಯಿಂದ ಮಹಡಿಯತ್ತ ಕರೆದೊಯ್ದಳು. ಅವಳು ಹಾಸಿಗೆಯ ಮೇಲೆ ಆರಾಮಾಗಿ ಕಾಲು ಚಾಚಿ ನನ್ನತ್ತ ಆಸೆಗಣ್ಣಿಂನ ನೋಟ ಬೀರಿದಾಗ ನಾನು ನನಗೆ ಅರಿವಿಲ್ಲದಂತೆ ಬಲು ಆಸೆಯಿಂದ ಅವಳ ಬಿಳಿತೊಡೆಯ ಮೇಲೆ ನನ್ನ ತಲೆಯನ್ನಿಟ್ಟು ಮಾತುಕತೆ ನಡೆಸಿದೆ. ಚೇಷ್ಟೆಯಾಡುತ್ತಾ, ತುಟಿಯಿಂದ ಚಪ್ಪರಿಸುತ್ತಾ,ಕಣ್ಮಂಚಿನಿಂದ ನನ್ನನ್ನು ಅಳೆಯುವಂತೆ ಮಾಡಿದ್ದರಿಂದ, ನನ್ನ ಮನ ಹುಚ್ಚೆದ್ದು ಕುಣಿಯುವಂತಾಯಿತು... ಕಿಟಿಕಿಯಿಂದ ಸೂಸುವ ತಂಪು ಗಾಳಿಯಿಂದಾಗಿ ಅವಳು ನನ್ನ ಮೈಮನಕ್ಕೆಲ್ಲಾ ಕಚಗುಳಿ ಇಡುವಂತೆ, ಅವಳು ಆಳವಾದ ನಿಟ್ಟುಸಿರು ಬಿಟ್ಟಾಗ ಹೃದಯದೊಳಗಿನ ಲಾವಾರಸ ಹೊರಚೆಲ್ಲಿದಂತೆ ಭಾಸವಾಯ್ತು... ನಾನು ಅವಳ ಕಣ್ರೆಪ್ಪೆಯನ್ನು ಮುಚ್ಚಿ ಬಿಸಿ ಮುತ್ತು ಕೊಡುವಷ್ಟರಲ್ಲಿ 'ಮೋಳೇ' ಎನ್ನುತ್ತಾ ಅವಳ ತಂದೆ ಕೆಳಗೆ ನಿಂತು ಧ್ವನಿ ಎತ್ತಿದಾಗ ಬೆಚ್ಚಿಬಿದ್ದ ನಸೀಮಾ ತಡವರಿಸುತ್ತಾ ಮೆಟ್ಟಿಲು ಇಳಿದಳು. ನಾನು ನೆಪ ಮಾತ್ರಕ್ಕೆ ಹಳತು ಪತ್ರಿಕೆಯನ್ನು ಕೈಗೆತ್ತಿ ಕಣ್ಣೋಡಿಸಿದೆ. ಅಷ್ಟರಲ್ಲಿ....'ನೀ..ಅವನನ್ನು ಪ್ರೀತಿಸಬಾರದು...''ಯಾಕೆ...?' 'ಮರು ಪ್ರಶ್ನೆ ಎಸೆಯಬೇಡ... ನಾನು ಹೇಳಿದ ಹಾಗೆ ಕೇಳು...''ಇಲ್ಲಾ...ನಾನು ಅವನನ್ನೇ ಪ್ರೀತಿಸುವೆ...ಜೊತೆಗೆ ಮದ್ವೆನೂ...''ಮದ್ವೆ... ಯಾರ ಜೊತೆ?' ಎಂದು ಪ್ರಶ್ನಿಸುತ್ತಾ ಅವರು ನಸೀಮಾಳ ಕೆನ್ನೆಗೆ ಬಲವಾಗಿ ಹೊಡೆದರು. ತಂದೆ-ಮಗಳ ವಾಗ್ವಾದಿಂದ ತತ್ತರಿಸಿದ ನಾನು ಬಾಗಿಲ ಬಳಿ ಬಂದು ಕಣ್ಣು ಹಾಯಿಸಿದೆ. ನಸೀಮಾಳ ಮುಖ ಕಪ್ಪಿಟ್ಟಿತ್ತು. ಅವಳ ತಂದೆಯ ಮುಖ ಉದ್ವೇಗದಿಂದ ಇತ್ತು. ನಸೀಮಾಳನ್ನು ಸಂತೈಸಿವುದಾಗಲೀ ಅವರಲ್ಲಿ ಏನು ಎಂದು ವಿಚಾರಿಸುವುದಾಗಲೀ ನನ್ನಿಂದ ಅಸಾಧ್ಯವಾಗಿ ಹೋಯಿತು. ನಾನು ಮೊಂಡು ಧೈರ್ಯ ತಂದು ಮೆಟ್ಟಿಲಿಳಿದು ನಸೀಮಾಳ ಬಳಿ ಬಂದು 'ಕ್ಷಮಿಸು, ನನ್ನಿಂದಾಗಿ ಹೂವೊಂದು ಬಾಡುವಂತೆ ಆಯಿತು. ಯೋಚಿಸಿ ಒಂದು ನಿರ್ಧಾರಕ್ಕೆ ಬಾ...' ಎನ್ನುತ್ತಾ ಕಾಲ್ತೆಗೆದೆ. 
                                                               *****
ನಸೀಮಾ ಕಾಲೇಜು ಮೆಟ್ಟಿಲು ತುಳಿಯದೆ ಒಂದು ವಾರ ಕಳೆದಿದೆ. ನನ್ನಲ್ಲಿ ಮಾತನಾಡಲೂ ಸಿಗಲಿಲ್ಲ. ಒಂದು ಪತ್ರ ಟೆಲಿಫೋನ್ ಕೂಡಾ ಇಲ್ಲದೆ ಹೋದಾಗ ನಾನು ತುಂಬಾ ಬಳಲಿ ಹೋದೆ. ದುಃಖವನ್ನು ಅದುಮಿಡಲಾರದೆ ಮನೆ ಹಿತ್ತಲಿನ ಕಲ್ಲುಬೆಂಚಲ್ಲಿ ಕೂತು ಗಳಗಳನೆ ಅತ್ತು ಬಿಟ್ಟೆ. ಕಾಲೇಜಿನಲ್ಲಿ ಪ್ರಾಂಶುಪಾಲರ ಸಹಿತ ನನ್ನ ಆತ್ಮೀಯರೆಲ್ಲರೂ ನನ್ನಲ್ಲಿ 'ನಸೀಮಾ..ಎಲ್ಲಿ ಇವರೇ?' ಎಂದು ಪ್ರಶ್ನಿಸುತ್ತಿದ್ದಾಗ ನಾನು ಉತ್ತರಿಸಲಾಗದೆ ,ಸೋತು ಹೋದೆ. ತಡೆಯಲಾರದೆ ಮತ್ತೆ ಪ್ರೇಮ ಪತ್ರ ಬರೆದೆ. ಫೋನ್ ಕರೆ ಒತ್ತಿದೆ. ಆದರೆ ಅವಳ ಸುಳಿವು ಇರಲಿಲ್ಲ. ಒಂದು ಮಧ್ಯಾಹ್ನ ನಾನು ತಡಕಾಡುತ್ತಾ ಅವಳ ಮನೆಯತ್ತ ಕಾಲೆಳೆದೆ. ಕಬ್ಬಿಣದ ಗೇಟಿನಲ್ಲಿ ಉರುಟಾಗಿ ಬರೆದಿದ್ದ 'ನಸೀಮಾ ಮಂಜಿಲ್' ಮಾಯವಾಗಿ ರುಕ್ಸಾನಾ ಮಂಜಿಲ್ ಎಂಬ ದಪ್ಪ ಅಕ್ಷರ ಎದ್ದು ಕಂಡಾಗ ನಾನು ಗಲಿಬಿಗೊಂಡೆ... ಅದರೂ ತುಸು ಧೈರ್ಯ ತಂದು ಕಾಲ್ ಬೆಲ್ ಅದುಮಿದೆ. ಇಳಿ ವಯಸ್ಸಿನ  ಒಬ್ಬರು ಬಂದು ಕದ ತೆರೆದಾಗ, ಅಬ್ದುಲ್ ರಹ್ಮಾನ್ ಪಾಷಾ...ಎಲ್ಲಿ?ಎಂದು ಪ್ರಶ್ನಿಸಿದೆ.'ನೀವು ಯಾರು? ಅವರಿಗೆ ಏನಾಗಬೇಕಿತ್ತು.' ಅವರ ಪ್ರಶ್ನೆಗೆ ನಾನು ಉತ್ತರಿಸಲಾಗದೆ ಹೋದೆ. 'ಸರಿ. ಈಗ ಮನೆ ನಮ್ಮದು. ಅಂದರೆ ನೀವು ಕೇಳಿದ ಆ ಪಾಷಾ... ನಮಗೆ ಇದನ್ನು ಮಾರಿ ಸಂಸಾರ ಸಮೇತ ಗಲ್ಫ್‌ಗೆ ಹೋಗಿದ್ದಾರೆ.' ಎಂದು ಅವರು ನುಡಿದಾಗ, ನಾನು ಕುಸಿದು ಬಿದ್ದಂತಾದೆ. ಹೋದ ದಾರಿಗೆ ಸುಂಕವಿಲ್ಲದೆ ವಾಪಾಸು ಕಾಲೆಳೆದಾಗ ನಸೀಮಾಳ ಮುದ್ದುಮುಖವು ಕಣ್ಣಾಲಿಯ ಮುಂದೆ ತೇಲಿ ಬಂತು.ವಾರ್ಷಿಕ ಪರೀಕ್ಷೆಗೆ ಕೂತ್ಕೊಳ್ಳುವ ಮುನ್ನ ಎಲ್ಲರೂ ಹಾಲ್ ಟಿಕೆಟ್ ಪಡಕೊಳ್ಳುವ ತರಾತುರಿಯಲ್ಲಿ ಇದ್ದರು. ಒಂದೆಡೆ ನಸೀಮಾಳ ಕ್ಲಾಸ್‌ಮೇಟ್‌ಗಳು ಹಾಲ್‌ ಟಿಕೇಟ್ ಪಡಕೊಳ್ಳುತ್ತಿದ್ದಾಗ ನನಗೆ ನಸೀಮಾಳ ಹಾಲು ಮುಖವು ಎದುರಾಯಿತು. 'ನಸೀಮಾ.. ನೀನು ಈಗ ಅರಬೀ ಕಡಲಾಚೆ ಸೇರಿರುವೆ. ಆದರೆ ಹೇಗಿರುವೆ? ನೋವು-ನಲಿವುಗಳ ಮಧ್ಯೆ ಸಿಕ್ಕಿ ಹಾಕಿಕೊಂಡಿರುವೆಯಾ?ಹೇಳು ಬೇಗ...ನಾನು ನಿನ್ನ ಇನಿಯ ಎಂಬುದನ್ನು ಮರೆತೆಯಾ? ನನಗಾಗಿ ಒಂದು ತುಣುಕು ಪತ್ರ ಬರೆಯಬಾರದೇ...?ಕೇಳಿ ನಗಬಾರದೇ....? ನಾವು ಈಗ ವಿಭಿನ್ನ ಸಂಸ್ಕೃತಿಗೆ ಶರಣು ಹೋಗಿರುವ ಎರಡು ದೇಶಗಳಲ್ಲಿ ನೆಲಯೂರಿರುವೆವು... ಆದರೆ ನಮ್ಮದು ಒಂದೇ ದೇಹ ಮತ್ತು ಮನಸ್ಸು ಎಂಬುದನ್ನು ಮರೆತೆಯಾ?'  ನಾನು ನನ್ನಲ್ಲೇ ಪ್ರಶ್ನಿಸಿ ಸೋತು ಹೋದೆ.                                        
                                                    ********
ವಾರ್ಷಿಕ ಪರೀಕ್ಷೆಗೆ ಏನೋ ಕೂತಿರುವೆ. ಆದರೆ ಚೆನ್ನಾಗಿ ಬರೆದಿದ್ದೀನೋ, ಇಲ್ಲವೋ ಎಂದು ನೆನಪಿಗೆ ಬರುತ್ತಿಲ್ಲ.ಆದರೆ ನನ್ನವಳಿಗೆ ಪ್ರೇಮಪತ್ರ ಮತ್ತು ಅವಳ ಮುಖಚಿತ್ರವನ್ನು ಗೀಚಿರುವೆನು ಎಂದು ' ಬೆಂಚು- ಗೆಳೆಯ'  ಈಗ ನುಡಿದು ನಗುತ್ತಾನೆ. ನಾನು ನಸೀಮಾಳನ್ನು ನೆನೆಯುತ್ತಾ ಮಂಕಾಗಿ ಕೂತಿದ್ದಾಗ ಪೋಸ್ಟ್ ಎನ್ನುತ್ತಾ ಪೋಸ್ಟ್‌ಮ್ಯಾನ್ ಕವರ್ ಒಂದನ್ನು ಕೊಟ್ಟ. ಬಲು ಆಸೆಯಿಂದ ಒಡೆದು ಕಣ್ಣೋಡಿಸಿದೆ. ಪ್ರೀತಿಯ ಮಗನಿಗೆ, ನಿನ್ನ ಬಾಪಾ ಮಾಡುವ ಆಶೀರ್ವಾದಗಳು. ನಾನು ಈಗ ಒಂದು ಸಂಕಷ್ಟದಲ್ಲಿ ಸಿಲುಕಿರುವೆ. ಅದ್ಕೆ ನಿನ್ನ ಸಹಕಾರ ಅತ್ಯಗತ್ಯ ಎಂದು ಈಗ ನಾನು ಮನಗಂಡಿರುವೆ. ನೀನು ನಸೀಮಾಳನ್ನು ಮತ್ತು ಅವಳು ನಿನ್ನನ್ನು ಪ್ರೀತಿಸುತ್ತಿರುವುದು ಮತ್ತು ಮದುವೆಯಾಗಲು ತೀರ್ಮಾನಿಸಿದ್ದು ನಿಜ. ಆದರೆ ನಿನಗೆ ನಸೀಮಾ ಏನಾಗಬೇಕು? ಅವಳಿಗೆ ನೀನು ಏನಾಗಬೇಕೆಂದು ತಿಳಿದಿಲ್ಲ. ಆದರೆ ನನಗೆ ಈಗ ಸತ್ಯ ವಿಷಯ ತಿಳಿಸದೆ ಉಪಾಯವಿಲ್ಲ. ತಿಳಿಸಿದರೂ ನೀವು ನಂಬಲಾರಿರಿ. ಮೊದಲು ನೀನು ನನ್ನನ್ನು ನಂಬಿಕೆಗೆ ತೆಗೆದುಕೋ. ನೀನು ನನ್ನ ಮಗ. ನಸೀಮಾ ನಿನ್ನ ತಂಗಿ. ಅಂದರೆ ನಿಮ್ಮಿಬ್ಬರ ತಾಯಿ ನನ್ನ ಮೊದಲ ಪತ್ನಿಯಾಗಿದ್ದಳು. ಯಾವುದೋ ಒಂದು ಕಾರಣಕ್ಕೆ ನಾನು ಅವಳಿಗೆ ತಲಾಖ್ ಕೊಡುವಂತಾಯಿತು. ಆ ಸಮಯದಲ್ಲಿ ನಸೀಮಾ ನನ್ನ ಬಳಿ ಇದ್ದಳು. ನೀನು ನಿನ್ನ ತಾಯಿಯ ಬಳಿ ಇದ್ದೆ. ಅಂದಿನಿಂದ ನಮ್ಮೊಳಗಿನ ಸಂಬಂಧಕ್ಕೆ ತೆರೆ ಬಿತ್ತು. ಈಗ ನಿನ್ನ ತಾಯಿ ಅಂದರೆ ನನ್ನ ಮೊದಲ ಧರ್ಮಪತ್ನಿ ಇನ್ನೊಬ್ಬಳನ್ನು ಕಟ್ಟಿಕೊಂಡಿರುವಳೋ? ನನಗೆ ಗೊತ್ತಿಲ್ಲ. ಆದರೆ ನಾನು ಕೈರುನ್ನಿಸಾಳನ್ನು ಎರಡನೇ ಧರ್ಮ ಪತ್ನಿಯಾಗಿ ಸ್ವೀಕರಿಸಿರುವೆ. ನಿನ್ನ ತಂಗಿ ನಸೀಮಾ ಅವಳನ್ನೇ ಹೆತ್ತು ಹೊತ್ತ ತಾಯಿ ಎಂದು ಭಾವಿಸಿರುವಳು. ನಿನ್ನನ್ನು ಹೆತ್ತ ತಾಯಿಯೇ ಅವಳನ್ನೂ ಹೆತ್ತಳು. ಆದರೆ ವಿಧಿ ಹೊತ್ತುಕೊಳ್ಳದಂತೆ ಮಾಡಿತು. ನಾನು ನಿನ್ನನ್ನು ಹೇಗೆ ಗುರುತಿಸಿದೆ ಎಂಬ ಪ್ರಶ್ನೆ ನಿನ್ನಲ್ಲಿ ಕಾಡಬಹುದು. ಆದರೆ ನಿನ್ನನ್ನು ನಾನು ಮೊದಲ ನೋಟದಲ್ಲೇ ಗುರುತಿಸಿದೆ...ಅದಕ್ಕೆ ನಿನ್ನ ಬಲ ಕೆನ್ನೆಯ ಬಳಿ ಒಂದು ಕಪ್ಪು ಕಲೆ ಮತ್ತು ಎರಡೂ ಕೈಗಳಲ್ಲಿ ನೇತಾಡುತ್ತಿರುವಂತೆ ಕಾಣುವ ಎರಡು ಕಿರಿಬೆರಳೇ ಸಾಕ್ಷಿ. ತಂದೆ ಮಕ್ಕಳು ಎಷ್ಟು ವರ್ಷದವರೆಗೆ ಬೇರ್ಪಟ್ಟರೂ ಕೂಡಾ ರಕ್ತವು ಹತ್ತಿರ ಬಲು ಹತ್ತಿರವಾಗಲು ಪ್ರಯತ್ನಿಸುತ್ತದೆ ಎಬುದನ್ನು ನೀನು ಎಂದಿಗೂ ಮರೆಯಬೇಡ. ನಿನ್ನಲ್ಲಿ ಈ ವಿಷಯ ನಾನು ಅಂದೇ ಹೇಳಬೇಕಾಗಿತ್ತು. ಆದರೆ ಅಂದಿನ ನನ್ನ ಮನಸ್ಸಿನ ದುಗುಡ, ದುಮ್ಮಾನಗಳನ್ನು ಅರಿತುಕೊಳ್ಳುವ ಶಕ್ತಿ ನಿನಗಿರಲಿಲ್ಲ. ಜೊತೆಗೆ ನಾನು ಆತುರ ಪಟ್ಟೆ. ನಾನು ಈ ವಿಷಯವನ್ನು ಇಷ್ಟರವರೆಗೂ ನಸೀಮಾಳಿಗೆ ತಿಳಿಸಲಿಲ್ಲ. ಹಾಗೇ ತಿಳಿಸಿದಲ್ಲಿ ಅವಳೂ ರೋಸಿ ಹೋದಾಳು. ಮತ್ತೆ ಆತ್ಮಹತ್ಯೆಗೆ ಯತ್ನಿಸದೆ ಇರಲಾರಳು. ಇದಕ್ಕೆ ಸೂಕ್ತ ಪರಿಹಾರವನ್ನು ನಾನು ಸೂಚಿಸುವೆ. ಆರೋಗ್ಯದಲ್ಲಿ ಕ್ಷೀಣಿಸಿರುವ ನಿನ್ನ ತಂಗಿಯು ಮತ್ತೆ ಎಂದಿನಂತೆ ಧೃಡಕಾಯಳಾಗಿ ಕಾಣಬೇಕಾದರೆ ನೀನೇ ಅವಳಿಗೆ ವಿಷಯ ಮನದಟ್ಟು ಮಾಡಬೇಕು.   
 
ಇತೀ.    ಎ. ಆರ್ ಪಾಷಾಪತ್ರವನ್ನು ಓದುತ್ತಲೇ ನಿತ್ರಾಣನಾದೆ....  ನಾನು ಸರಸ ಸಲ್ಲಾಪವಾಡಿದ್ದು ಅತಿಯಾಗಿ ಪ್ರೀತಿಸಿದ್ದು, ಮದುವೆಯಾಗುತ್ತೇನೆ ಎಂದು ಭಾಷೆ ಕೊಟ್ಟದ್ದು ನನ್ನ ತಂಗಿಯಲ್ಲಾ....?ಬಾಪಾ...! ಹೌದು, ಎಂತಹ ಮೋಸಗಾರ...ನಿನ್ನ ತಾಯಿಗೆ ತಲಾಖ್ ಕೊಟ್ಟೆ ಎಂದು ಎಷ್ಟು ನಯವಾಗಿ ಹೇಳುತ್ತಾರೆ. ಹಾಗಾದರೆ ನಾನು ಇಷ್ಟರವರೆಗೂ ಬಾಪಾ ಎಂದು ಕರೆಯುತ್ತಾಮಮತೆ ಮತ್ತು ಗೌರವ ತೋರಿಸಿದ 'ಅವರು' ನನ್ನ ಒಡಹುಟ್ಟಿಸಿದವರಲ್ಲವಾ? ತಲಾಖ್‌ಗೆ ಒಳಗಾದ ನನ್ನ ಹೆತ್ತವರು ಮತ್ತೆ ಒಬ್ಬಬ್ಬರನ್ನು ವರಿಸಿ ಹಾಯಾಗಿ ಇದ್ದಾರೆ. ಆದರೆ ಇವರ ಮಧ್ಯೆ ಕರಿದು ಬೆಂದವರು ನಾನು ಮತ್ತು ನಸೀಮಾ...ಅಲ್ವಾ? -ಯೋಚಿಸುತ್ತಿದ್ದಂತೆ ಕೋಪ ಉಕ್ಕಿ ಬಂತು.ಪಡಸಾಲೆಯಲ್ಲಿ ಕೂತು ಬೀಡಿ ಸುರುಟುತ್ತಿದ್ದ 'ಉಮ್ಮನಲ್ಲಿ' ಬಾಪಾ ಎಲ್ಲಿ ? ರಹ್ಮಾನ್ ಪಾಶಾರ ಗುರುತು ನಿಮಗೆ ಇದೆಯಾ?'  ಎಂದು ಪ್ರಶ್ನಿಸಿದೆ. ಉಮ್ಮ ಉತ್ತರಿಸದೆ ದುರುಗುಟ್ಟಿದರು.' ಉಮ್ಮಾ...ನನಗೆ ಒಬ್ಬಳು ತಂಗಿ ಅಂದರೆ ನಿಮಗೆ ಒಬ್ಬಳು ಮಗಳು ಇದ್ದಳಂತೆ ಹೌದಾ?' ನಾನು ಮೊಂಡು ಧೈರ್ಯ ತಂದು ಪ್ರಶ್ನಿಸಿದೆ. ಉಮ್ಮ ದುರುಗುಟ್ಟಲಿಲ್ಲ. ಏನೋ ಕಳೆದುಕೊಂಡವರಂತೆ ನೋವುಂಡರು. 'ಉಮ್ಮಾ...ನಸೀಮಾ ನಿಮ್ಮ ಮಗಳಾ...?ರಹ್ಮಾನ್ ಪಾಶಾ ...ಅವಳ ಅಪ್ಪನಾ...?'  ನಾನು ಹಠವಿಡಿದು ಕೂತೆ.' 
ಹೌದು...ಮೋನೇ...ಹೌದು..ಎಲ್ಲಿ ತೋರಿಸು ನನ್ನ ಮಗಳನ್ನು..' ಎನ್ನುತ್ತಾ ತಾಯಿ ಗೋಗರೆದರು. ನಿಜ ಸಂಗತಿಯನ್ನು ಒಪ್ಪಿಕೊಂಡರು. ತಂದೆಯ ಪತ್ರಕ್ಕೆ ಹೇಗೆ ಉತ್ತರಿಸಬೇಕೆಂಬ ಸಂದಿಗ್ಧತೆಯಲ್ಲಿ ನಾನು ಸಿಕ್ಕಿಕೊಂಡೆ. ಆದರೂ ಎಲ್ಲಾ ಸವಿವರವುಳ್ಳ ಒಂದು ಪತ್ರವನ್ನು ನಸೀಮಾಳಿಗೆ ಬರೆದೆ. ಜೊತೆಗೆ ಅವಳಿಗೆ ನಂಬಿಕೆ ಹಾಗೂ ಸಾಕ್ಷಿಗಾಗಿ ತಂದೆ ನನಗೆ ಕಳುಹಿಸಿದ ಪತ್ರವನ್ನೂ ಅದರ ಜತೆ ಲಗತ್ತಿಸಿದೆ. ಪೋಸ್ಟ್ ಮಾಡಿದೆ. ಅವಳ ಮೇಲೆ ನನಗೆ ದ್ವೇಷವಿಲ್ಲ. ಬದಲಾಗಿ ಪ್ರೀತಿ ಇನ್ನಷ್ಟು ಉಕ್ಕಿ ಬರುತ್ತಿದೆ. ಅದು ಭ್ರಾತೃತ್ವ ಪ್ರೇಮ. ನಾನು ಅವಳಿಗೆ ಪತ್ರ ಬರೆದು ಒಂದು ತಿಂಗಳು ಕಳೆದಿದೆ. ಅವಳಿಂದ ಬರುವ ಉತ್ತರವನ್ನು ಕಾದು ಕುಳಿತು ನಿರಾಶಗೊಂಡೆ. ಜೊತೆಗೆ ತಂದೆಯ ಪತ್ರವಿಲ್ಲದೆ ರೋಸಿಹೋದೆ. ಈ ಮಧ್ಯೆ ನನ್ನ ಉಮ್ಮ ನನ್ನಲ್ಲಿ 'ಮೋನೇ... ಎಲ್ಲಿ ಅವಳು ಯಾವಾಗ ಬಂದಾಳು? ನಾನು ಮಣ್ಣಾಗುವ ಮುನ್ನ ಅವಳನ್ನು ಒಮ್ಮೆ ಕಣ್ಣಾರೆ ನೋಡುವೆ... ಎಂದು ಹೇಳದ ದಿನವಿಲ್ಲ.                              
  ***************
 
ಏನೋ ಅತ್ಯಗತ್ಯ ವಿಷಯದ ಬಗ್ಗೆ ಮಾತನಾಡಲು ನಾನು ಪ್ರಾಂಶುಪಾಲರ ಬಳಿ  ಸಾಗಿ ಮರಳುವಾಗ ರಹ್ಮಾನ್ ಪಾಶಾ ನನ್ನನ್ನು ಎದುರುಗೊಂಡರು. ಬಾಪಾ.. ಎಂದು ನಾನು ಕರೆಯುವ ಮುನ್ನವೇ ಅವರು ಮೋನೇ..ಎನ್ನುತ್ತಾ ನನ್ನನ್ನು ಆಲಂಗಿಸಿ ಮಾತಿಗಾಗಿ ತಡಕಾಡಿದರು.'ಬಾಪಾ.. ಎಲ್ಲಿ ನಸೀಮಾ?'' ಮೋನೇ.. ಅವಳನ್ನು ಅರಬ್ಬೀ ಮರಳಲ್ಲಿ ದಫನ್ ಬಿಟ್ಟೆಯಪ್ಪಾ. ನಿನ್ನ ಪತ್ರ ಬಂದು ಸೇರುವುದರೊಳಗೆ ಅವಳು ನಿನ್ನನ್ನು ನೆನೆದು ನೆನೆದೂ ನಮ್ಮೆಲ್ಲರನ್ನು ಅಗಲಿ ಹೋದಳು. ನನ್ನ ಕೈಯಾರೆ ನಾನು ಅವಳನ್ನು ಕೊಂದೆ. ಜೊತೆಗೆ ಅರಬ್ಬೀ ಮಣ್ಣಿಗೆ ವಿದಾಯಕೋರಿ ಬಂದೆ..' ಎನ್ನುತ್ತಾ ಕಣ್ಣೊರಸಿದರು.' ಇಲ್ಲ ಬಾಪಾ... ಅವಳನ್ನು ನೀವು ಕೊಂದಿಲ್ಲ... ನಾನೇ ನಾನೇ ಮುದ್ದು ತಂಗಿಯನ್ನು ಕೊಂದೆ...ಒಂದು ವೇಳೆ ನನಗೆ ಅವಳ ಮೇಲೆ ಪ್ರೇಮಾಂಕುರ ಹುಟ್ಟಿರದಿದ್ದಲ್ಲಿ ಅವಳು ಇಂದು ಬದುಕುಳಿಯುತ್ತಿದ್ದಳು.'  ಎನ್ನುತ್ತಾ ನಾನು ನನಗೆ ಅರಿವಿಲ್ಲದಂತೇ ಪ್ರಾಂಶುಪಾಲರು ಕೊಟ್ಟ ಅತ್ಯಗತ್ಯದ ಚೀಟಿಯೊಂದನ್ನು ಹರಿದುಹಾಕಿದಾಗ  ' ಸಫರುಲ್ಲಾ..'  ಎಂದು ಪ್ರಾಂಶುಪಾಲರು ನನ್ನ ಹೆಸರೆತ್ತಿ ಕರೆದದ್ದು ಮಾತ್ರ ಕೇಳಿಸಿತು. ಮಸೀದಿಯ ಅಧ್ಯಕ್ಷರು ಬಂದು ' ಕಲಿತೆಯಾ...ಸರಿ, ಏನು ಸಾಧಿಸಿದೆ?  ಬೆಟ್ಟಕ್ಕೆ ಕಲ್ಲು ಹೊತ್ತದ್ದೇ ಬಂತು ಅಲ್ವಾ?'ಎಂದು ಹೇಳಿ ಗಹಗಹನೆ ನಕ್ಕಂತೆ ನನಗೆ ಭಾಸವಾಯಿತು. ಆ ಕ್ಷಣ ಮನದ ಆಳದಲ್ಲೊಂದು ಕವನ ಸ್ಪುಟಿದು ಹಾಡುವಷ್ಟರಲ್ಲಿ ಅದು ಕಣ್ಮರೆಯಾಯಿತು.ಓ.....ನಸೀಮಾ...ಪ್ರಭುವಿನ ಅನತಿಯಂತೆ ಬಾಪಾ ನಮ್ಮನ್ನು ಹುಟ್ಟಿಸಿ...ತಕ್‌ದೀರ್‌ನಲಿ ಬರೆದಂತೆ ನಾ ನಿನ್ನನು ಪ್ರೀತಿಸಿ...ನೂರಾರು ಆಸೆ ಕನಸುಗಳನ್ನು ಹೊತ್ತು ಮೈ ಬಣ್ಣ ರಂಗೇರಿಸಿ....ನೀನು ಈಗ ಅರಬ್ಬಿ ಮರಳನ್ನು ಸೇರಿದೆ...ನನ್ನ ಅಳಿಸಿ...                                                                                                

ವೆಬ್ದುನಿಯಾವನ್ನು ಓದಿ