ಆಡ್ವಾಣಿಯನ್ನು ಬಿಜೆಪಿ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ: ಶಿವಸೇನೆ

ಶನಿವಾರ, 22 ಮಾರ್ಚ್ 2014 (15:51 IST)
PTI
ದಶಕಗಳ ಕಾಲದ ಮಿತ್ರ ಪಕ್ಷಗಳಾದ ಭಾರತೀಯ ಜನತಾ ಪಕ್ಷ ಮತ್ತು ಶಿವಸೇನಾ ನಡುವಿನ ಸಂಬಂಧ ದಿನದಿಂದ ದಿನಕ್ಕೆ ಹಳಸುತ್ತಿದ್ದು, ಇದೀಗ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಪರ ಬ್ಯಾಟಿಂಗ್ ಮಾಡುವ ಮೂಲಕ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಕೆಂಗಣ್ಣಿಗೆ ಗುರಿಯಾಗಿದೆ.

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, ಬಿಜೆಪಿಯೂ ಎಲ್.ಕೆ.ಆಡ್ವಾಣಿ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಎಂದು ಪಕ್ಷದ ಮುಖವಾಣಿ 'ಸಾಮ್ನಾ'ದಲ್ಲಿ ಶನಿವಾರ ಟೀಕಿಸಿದ್ದಾರೆ.

ಈಗ ನರೇಂದ್ರ ಮೋದಿ ಅವರ ಯುಗ ಆರಂಭವಾಗಿದೆ ನಿಜ. ಹಾಗಂತ ಆಡ್ವಾಣಿ ಯುಗ ಅಂತ್ಯವಾಯಿತು ಎಂದಲ್ಲ ಎಂದು ಸಾಮ್ನಾದ ಸಂಪಾದಕೀಯದಲ್ಲಿ ಹೇಳಲಾಗಿದೆ.

ಬಿಜೆಪಿಯ ಎಲ್ಲಾ ಮಿತ್ರ ಪಕ್ಷಗಳಿಗೆ ಇಂದಿಗೂ ಆಡ್ವಾಣಿಯೇ ಮುಖ್ಯ. ಆಡ್ವಾಣಿಯ ರಾಜಕೀಯ ಜೀವನದಲ್ಲಿ ಯಾವುದೆ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಠಾಕ್ರೆ ಬಿಜೆಪಿಯ ಹಿರಿಯ ನಾಯಕನನ್ನು ಶ್ಲಾಘಿಸಿದ್ದಾರೆ.

ಆಡ್ವಾಣಿಗೆ ಟಿಕೆಟ್ ನೀಡುವ ಸಂಬಂಧ ಉಂಟಾಗಿದ್ದ ಗೊಂದಲವನ್ನು ಪ್ರಸ್ತಾಪಿಸಿರುವ ಠಾಕ್ರೆ, ಬಿಜೆಪಿಯ ಹಿರಿಯ ನಾಯಕರಾದ ಆಡ್ವಾಣಿ ಅವರು ತಾವು ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಅವರೇ ಯಾಕೆ ನಿರ್ಧರಿಸಬಾರದು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ಬಿಜೆಪಿ ಆಡ್ವಾಣಿ ಅವರಿಗೆ ಅವಮಾನ ಮಾಡಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ