ಪಾರದರ್ಶಕ ಆಡಳಿತ ಬಾಯಲ್ಲಿ ಹೇಳಿದ್ರೆ ಸಾಲದು ಆಡಳಿತದಲ್ಲಿ ಮಾಡಿ: ಸಿಎಂ ವಿರುದ್ಧ ಸದಾ ಕಿಡಿ

ಗುರುವಾರ, 27 ಮಾರ್ಚ್ 2014 (13:40 IST)
PR
ಪಾರದರ್ಶಕ ಆಡಳಿತ ಎಂದು ಬಾಯಲ್ಲಿ ಹೇಳಿದರೆ ಸಾಲದು. ಅದನ್ನು ಆಡಳಿತದಲ್ಲಿ ಮಾಡಿ ತೋರಿಸಬೇಕಾಗುತ್ತದೆ. ಕೇವಲ ಬಾಯಲ್ಲಿ ಅಬ್ಬರಿಸಿ ತೆರೆಯ ಹಿಂದೆ ಬೇರೆ ಕೆಲಸ ಮಾಡಿದರೆ ಬಹುಬೇಗ ಬಣ್ಣ ಬಯಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ

ಅವರು ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾರದರ್ಶಕ ಆಡಳಿತಕ್ಕಾಗಿ ಗೃಹ ಕಚೇರಿ ಕೃಷ್ಣಾದಲ್ಲಿ ಹಾಕಿದ್ದ ಸಿಸಿ ಟಿವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೆಗೆಸಿರುವ ಗುಟ್ಟೇನು ಎಂದು ಪ್ರಶ್ನಿಸಿದ್ದಾರೆ.

ಆಧಾರ್ ಗುರುತಿನ ಚೀಟಿಯ ಅಕ್ರಮದ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಿಲ್ಲ. ಚುನಾವಣೆಯಲ್ಲಿ ನಡೆಸುತ್ತಿರುವ ಅಕ್ರಮಗಳ ಬಗ್ಗೆ ಬಾಯಿ ಬಿಡುತ್ತಿಲ್ಲ. ಬಿಬಿಎಂಪಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಈಗಾಗಲೇ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ ಎಂದು ಅವರು ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅವರನ್ನು ಸೋಲಿಸಿರುವುದು ಈಗ ಸಿದ್ದರಾಮಯ್ಯ ಅವರಿಗೆ ಮುಳುವಾಗಿದೆ. ಸಿದ್ದರಾಮಯ್ಯ ಅವರ ಅಧಿಕಾರ ಒಂದು ವರ್ಷಕ್ಕೆ ಸೀಮಿತವಾಗಿದೆ. ದೀಪ ಆರುವ ಮೊದಲು ಜೋರಾಗಿ ಉರಿಯುವುದು ಸಾಮಾನ್ಯ. ಇದೇ ಕಾರಣದಿಂದ ಆತಂಕಗೊಂಡು ಬುದ್ದಿ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆ ಎಂದು ಸದಾನಂದಗೌಡ ಹೇಳಿದರು.

ಇದಕ್ಕೂ ಮುಂಚೆ ರಾಘವೇಶ್ವರ ಶ್ರೀಗಳನ್ನು ಭೇಟಿ ಮಾಡಿದ ಸದಾನಂದ ಗೌಡ ಅವರು ಆಶೀರ್ವಾದ ಪಡೆದರು.

ವೆಬ್ದುನಿಯಾವನ್ನು ಓದಿ