ಬಿಜೆಪಿಗೆ ಸೇರಿದ ಕೆಲವೇ ಗಂಟೆಗಳಲ್ಲಿ ಪ್ರಮೋದ್ ಮುತಾಲಿಕ್ ಔಟ್

ಸೋಮವಾರ, 24 ಮಾರ್ಚ್ 2014 (20:30 IST)
PR
PR
ಹುಬ್ಬಳ್ಳಿ: ಕರ್ನಾಟಕದಲ್ಲಿ ನೈತಿಕ ಪೊಲೀಸ್ ಗಿರಿ ಮೂಲಕ ಕುಖ್ಯಾತಿ ಗಳಿಸಿರುವ ಪ್ರಮೋದ್ ಮುತಾಲಿಕ್ ಬಿಜೆಪಿಗೆ ಸೇರಿದ ಕೆಲವೇ ಗಂಟೆಗಳಲ್ಲಿ ಮತ್ತೆ ಬಿಜೆಪಿಯಿಂದ ಹೊರಬಿದ್ದಿದ್ದಾರೆ. ಮುತಾಲಿಕ್ ಅವರು ವ್ಯಾಲೆಂಟೀನ್ ದಿನದ ಆಚರಣೆಗಳ ವಿರುದ್ಧ ಪ್ರತಿಭಟನೆಗಳ ಸಾರಥ್ಯವಹಿಸಿದ್ದರು. ಅವರ ತಂಡವಾದ ಶ್ರೀರಾಮಸೇನೆ 2009ರಲ್ಲಿ ಮಂಗಳೂರು ಪಬ್ಬಿನಲ್ಲಿ ಕಲೆತಿದ್ದ ಯುವತಿಯರ ಮೇಲೆ ದಾಳಿ ಮಾಡುವ ಮೂಲಕ ಸುದ್ದಿಯಾಗಿತ್ತು. ಇದರಿಂದ ಮುತಾಲಕ್ ಅಂತಹ ವ್ಯಕ್ತಿ ಬಿಜೆಪಿ ಪಕ್ಷಕ್ಕೆ ಸೇರುವುದರ ವಿರುದ್ಧ ತೀವ್ರ ಪ್ರತಿರೋಧ ವ್ಯಕ್ತವಾಗಿದ್ದರಿಂದ ಅವರು ಪಕ್ಷಕ್ಕೆ ಸೇರ್ಪಡೆಯಾದ ಐದು ಗಂಟೆಯಲ್ಲೇ ಹೊರಬಿದ್ದಿದ್ದಾರೆ. ಸ್ವಯಂ ಘೋಷಿತ ನೈತಿಕ ಪೊಲೀಸ್‌ ಮುತಾಲಿಕ್ ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿಗೆ ಸೇರಿದ್ದರು. ರಾಜ್ಯ ಬಿಜೆಪಿ ಮುಖಂಡರಾದ ಪ್ರಹ್ಲಾದ್ ಜೋಷಿ , ಜಗದೀಶ್ ಶೆಟ್ಟರ್ ಮುಂತಾದವರು ಈ ಸಮಾರಂಭದಲ್ಲಿ ಹಾಜರಿದ್ದರು.

ಮುತಾಲಿಕ್ ಸೇರ್ಪಡೆಯಿಂದ ದೆಹಲಿಯ ಬಿಜೆಪಿ ನಾಯಕತ್ವ ಅಚ್ಚರಿಗೊಂಡು ರಾಜ್ಯಘಟಕ ಸೃಷ್ಟಿಸಿದ ಗೊಂದಲವನ್ನು ತಿಳಿಗೊಳಿಸಲು ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿ, ಕೇಂದ್ರ ಪಕ್ಷವು ಶ್ರೀರಾಮಸೇನೆ ಮುಖಂಡ ಮುತಾಲಿಕ್ ಸದಸ್ಯತ್ವವನ್ನು ನಿರಾಕರಿಸಿದೆ ಎಂದು ತಿಳಿಸಿದ್ದಾರೆ.ಇದಕ್ಕೆ ಮುಂಚೆ ಬಿಜೆಪಿಯ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಕೂಡ ಮುತಾಲಿಕ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.

ಮುತಾಲಿಕ್ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡ ತಕ್ಷಣ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಯಿತು. ಬಿಜೆಪಿಗೆ ಮುತಾಲಿಕ್ ಸೇರ್ಪಡೆಯಿಂದ ಮಹಿಳೆಯರಿಗೆ ಎಷ್ಟು ಗೌರವ ನೀಡುತ್ತದೆ ಎನ್ನುವುದಕ್ಕೆ ಸಾಕ್ಷ್ಯ ಒದಗಿಸಿದೆ ಎಎಪಿಯ ಅಶುತೋಷ್ ಟ್ವೀಟ್ ಮಾಡಿದ್ದಾರೆ. ಬಿಜೆಪಿಗೆ ಮುತಾಲಿಕ್ ಸೇರ್ಪಡೆ ಆರ್‌ಎಸ್‌ಎಲ್-ನರೇಂದ್ರ ಮೋದಿ ಪ್ರಾಬಲ್ಯವನ್ನು ಬಿಂಬಿಸುತ್ತದೆ ಎಂದುಕಾಂಗ್ರೆಸ್ ವಕ್ತಾರ ಸಂಜಯ್ ಝಾ ಟ್ವೀಟ್ ಮಾಡಿದ್ದರು.

ವೆಬ್ದುನಿಯಾವನ್ನು ಓದಿ